ಸಾಹಿತ್ಯ ಸುಖ

0
198
Tap to know MORE!

ಸಾಹಿತ್ಯದಿಂದ ಪ್ರಯೋಜನವೇನು ಎಂಬ ಮಾತಿಗೆ ಉತ್ತರವಾಗಿ ಕಾವ್ಯಮೀಮಾಂಸಕಾರರು ನಿಖರವಾದ ಉತ್ತರವನ್ನು ನೀಡಿದ್ದಾರೆ. ಯಶಸ್ಸು,ಅರ್ಥ ಕೃತಿ, ಭಾವ ತೀವ್ರತೆಯಿಂದ ಬಿಡುಗಡೆ,ಅಮಂಗಳದಿಂದ ನಮ್ಮನ್ನು ಮಂಗಳದೆಡೆಗೆ ಕೊಂಡೊಯ್ಯುತ್ತದೆ,ಜ್ಞಾನವನ್ನು ನೀಡುತ್ತದೆ,ಕಾಂತೆಯಂತೆ ತಿಳಿಹೇಳುತ್ತದೆ .
ಈ ಮಾತುಗಳು ಸರಿಯೆ,ಆದರೆ ಇಷ್ಟೆಲ್ಲಾ ವಿವರಸುವುದು ಬೇಡ ಬದಲಿಗೆ “ಸಾಹಿತ್ಯಸುಖ” ವೆಂಬ ಮಾತು ಈಯೆಲ್ಲವನ್ನೂ ಒಳಗೊಳ್ಳುತ್ತದೆ, ಆದ್ದರಿಂದ ನಮ್ಮ ಬದುಕಿನಲ್ಲಿ ಈ ಸುಖ ತುಂಬಿರಲಿ.
ನಮಗೆ ಸುಖವೆಂದರೆ “ಭೋಗವಸ್ತುಗಳು “ಮಾತ್ರ ವೆಂಬ ಅಪಕಲ್ಪನೆಯಿದೆ, ಆದರೆ ಈ ಭೋಗವಸ್ತುಗಳು ಮಾರುಕಟ್ಟೆಯಾಧಾರಿತ. ಮಾರುಕಟ್ಟೆಯಲ್ಲಿ ಇವುಗಳ ಟ್ರೆಂಡ್ ಬದಲಾದರೆ ನಮ್ಮ ಮನೆಯಿಂದ ಇವು ಹೊರಹೋಗಿ ಹೊಸ ಟ್ರೆಂಡ್ ಆಗಮನವಾಗುತ್ತದೆ, ಹಾಗಾಗಿಯೇ ಕೆಲವರು ವಾಹನ ಬದಲಾಯಿಸುವುದು,ಮನೆ ಒಡೆದು ಹೊಸದನ್ನ ನಿರ್ಮಿಸುವುದು,ಹೆಂಡತಿ ಅಡ್ಡದುಡ್ಡಿಗೆ ಅಭರಣ ಬದಲಾಯಿಸುವುದೇ ಮುಂತಾಗಿ ಕಂಡು ಬರುತ್ತದೆ.
ಆದರೆ ಸಾಹಿತ್ಯದ ಸುಖಕ್ಕೆ ಇಂತಹ ಇಷ್ಟುದಿನದ ಅವಧಿಯೆಂಬ expiry dateಯಿಲ್ಲ .ಇದು ನಮ್ಮ‌ ಪ್ರಪುಲ್ಲವಾದ ಮನಸ್ಸಿನಲ್ಲಿ ಹೊಸಹೊಸದನ್ನು ಹೊಳೆಯಿಸುವ ಶಕ್ತಿ. ನವನವೋನ್ಮೆ಼ಷಶಾಲಿನಿಯಾದ ಈ ಸಾಹಿತ್ಯ ನಮ್ಮ ಬದುಕಿಗೆ ಆನಂದವನ್ನು ನೀಡುತ್ತದೆ.
ನಾವೆಲ್ಲರೂ ಸಾಹಿತ್ಯವನ್ನು ನಿರ್ಮಾಣ ಮಾಡುವವರು ಆಗಬೇಕೆಂದೇನಿಲ್ಲ,ಓದುವ ಸಹೃದಯಿಗಳಾಗಬೇಕು , ಹೂಗಾರನೊಬ್ಬ ಚಂದದ ಹೂಮಾಲೆಯನ್ನು ಕಟ್ಟಿದ್ದರೆ ಅದು ಅವನ ನಿಪುಣತೆ, ನನಗೆ ಮಾಲೆ ಕಟ್ಟಲು ಬಾರದಿರಬಹುದು,ಆದರೆ ಅದನ್ನು ಪಡೆದು ಆಘ್ರಾಣಿಸಬಹುದಲ್ವ, ಅಹಾ ಅದರ ಸೌಂದರ್ಯದ ಆಸ್ವಾದನೆ ಮಾಡಬಹುದಲ್ವ,
ಮುಡಿವ ಬೋಗಿಗಳಾಗ ಬಹುದಲ್ವ.
ಸಾಹಿತ್ಯ ಸೃಷ್ಟಿಕಾರನ ಪ್ರತಿಭೆಯನ್ನು ಈ ಸಹೃದಯನ ಆಸ್ವಾದನೆಯ ಕಾರ್ಯವು ಎತ್ತರಕ್ಕೇರಿಸುತ್ತದೆ.ಹಾಗಾಗಿ ಸಹೃದಯನೂ ಪ್ರತಿಭಾವಂತನೆ.ಅವನದ್ದು ಭಾವಯತ್ರಿ ಪ್ರತಿಭೆ. ಈ ಆಸ್ವಾದಿಸುವ ಪ್ರತಿಭೆಯು ನಮ್ಮ ಬದುಕಿಗೆ ಆನಂದವನ್ನು ಕೊಡುತ್ತದೆ, ನಿರಾಳತೆಯನ್ನು ನೀಡುತ್ತದೆ, ಸವಾಲನ್ನು ಎದುರಿಸುವ ಛಲ,ಬಲವನ್ನು ದಯಪಾಲಿಸುತ್ತದೆ,
ನಾನು,ನನ್ನ‌ಕುಟುಂಬ,ನಾನು ಬಾಳಿಬದುಕಿರುವ ಸಮಾಜದ ಮೇಲೆ ಪ್ರೀತಿಯನ್ನು ನನಗೆ ಕಲಿಸುತ್ತದೆ.
ಕೃಪಾಕರ ಸೇನಾನಿಯನ್ನು ವೀರಪ್ಪನ್ ಅಪಹರಿಸಿದ ದಿನಗಳನ್ನು ಅವರು ದಾಖಲಿಸುತ್ತಾರೆ, ಒಂದು ಬೆಳಿಗ್ಗೆ ಕೃಪಾಕರ ಮತ್ತು ಸೇನಾನಿಯವರು ವೀರಪ್ಪನನ್ನು ನಿರ್ಲಕ್ಷಿಸಿ ಓದುವುದರಲ್ಲಿ ತಲ್ಲೀನನಾಗಿರುತ್ತಾರೆ,ಇದು ಆತನನ್ನು ಗೊಂದಲಕ್ಕೆ ತಳ್ಳುತ್ತದೆ,ಯಾರ ಹೆಸರು ಕೇಳಿದರೆ ನಡುಗಬೇಕಾಗಿತ್ತೋ,ಆತನೇ ಎದಿರು ನಿಂತಾಗ ಇದೆಂತಾ ಉಢಾಫೆ!! ವೀರಪ್ಪನ್ ಸೀದಾ ಹೋಗಿ ತಾನೊಂದು ಪುಸ್ತಕ ಓದುಲು ತೊಡಗುತ್ತಾನೆ.ಕೃಪಾಕರ ಕುತೂಹಲಗೊಂಡು ಕೇಳುತ್ತಾರೆ”ಅಣ್ಣಾ ಇದು ಯಾವ ಬುಕ್”
“ಮಗಾಭಾರತ”
” ನಿನಗೆ ಅದರಲ್ಲಿ ಯಾರಿಷ್ಟ?”
“ಇನ್ಯಾರು ದರ್ಮರಾಯ”
“ಯಾಕೆ?”
“ನಲ್ಲ ಮನಿದನ್”
ಇದು ಸಾಹಿತ್ಯ ಮಾಡುವ ಆತ್ಮ ಸಂಸ್ಕಾರ.
ಹಾಗಾಗಿ ನಮಗೆ ಸಾಹಿತ್ಯದ ಪರಿಚಯ,ಪರಿಶ್ರಮ, ಪ್ರೀತಿಯಾದರೂ ಇದ್ದರೆ ನಮ್ಮ ಬದುಕು ಸಹ್ಯ ಸುಂದರ ವಾಗುತ್ತದೆ. ಇಲ್ಲದಿದ್ದರೆ ಮೆಟೀರಿಯಲಿಸ್ಟಿಕ್ಕಾದ ಬದುಕು ನಮಗೆ ಬಹಳ ಬೇಗ ಬೋರಾಗುತ್ತದೆ.
ಸೂರ್ಯನ ಕುದುರೆ ಕತೆಯ ಹಡೆ ವೆಂಕಟನ ಹಾಗೆ ಬದುಕಿನಲ್ಲಿ ಯಾವಕಷ್ಟ ಬಂದರೂ ಎದುರಿಸುವ
ಧೈರ್ಯವನ್ನು ನಮಗೆ ನೀಡುವುದು ಸಾಹಿತ್ಯ. ಇದನ್ನ ಓದುವುದರಿಂದ ನಮ್ಮ ಮನಸ್ಸು ಪರಿಪೂರ್ಣವಾಗುತ್ತದೆ ನಮ್ಮ‌ ಇತಿಮಿತಿ ಶಕ್ತಿ ಸಾಮರ್ಥ್ಯ ಗಳು ನಮ್ಮ ಅರಿವಿಗೆ ಬರುತ್ತದೆ,ನಾವಾಡುವ ಮಾತು ಹೇಗಿದ್ದರೆ ಮೂಲೋಕವನ್ನು ಗೆಲ್ಲವುದೆಂಬ ತಿಳಿವಳಿಕೆ ದೊರಕುತ್ತದೆ,
ಅದಕ್ಕಿಂತ ಮಿಗಿಲಾಗಿ ಸೂರ್ಯನಂತೆ ಜಗವನ್ನು ಬೆಳಗಲಾಗದಿದ್ದರೂ ಹಣತೆಯಂತೆ ನನ್ನ ಸುತ್ತಲಿನ ಅಂಧಕಾರವನ್ನು ನಾನು ,ನನಗಾಗಿ ಹೊಡೆದೋಡಿಸ ಬಲ್ಲೆನೆಂಬ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿ ದೊರಕುತ್ತದೆ.

ಹರೀಶ್.ಟಿ.ಜಿ

LEAVE A REPLY

Please enter your comment!
Please enter your name here