ಚಿಕ್ಕಮಗಳೂರು: ಶಾಸಕ ಜಮೀರ್ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ, ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್ ಮ್ಯಾನ್ ಆಗುತ್ತೇನೆ ಎಂದಿದ್ದರು. ಆದರೆ ಹೇಳಿದಂತೆ ವಾಚ್ ಮ್ಯಾನ್ ಆಗಿಲ್ಲ. ವಾಚ್ ಮ್ಯಾನ್ ಆಗದೇ ಇರುವವರು, ಆಸ್ತಿ ಬರೆದುಕೊಡುತ್ತಾರಾ ಎಂದು ಸಚಿವ ಸಿ.ಟಿ.ರವಿ ವ್ಯಂಗ್ಯ ಮಾಡಿದರು.
ಡ್ರಗ್ ಪ್ರಕರಣದಲ್ಲಿ ತನ್ನ ಹೆಸರು ಸಾಬೀತಾದರೆ, ರಾಜ್ಯದಲ್ಲಿ ಇರುವ ತಮ್ಮ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುವುದಾಗಿ ಶಾಸಕ ಜಮೀರ್ ಆಹಮ್ಮದ್ ನಿನ್ನೆ ಹೇಳಿದ್ದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ, ಜಮೀರ್ ಅಹಮದ್ ಆಸ್ತಿ ಅಕ್ರಮವಾಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರ ರಾಜಕೀಯ ಹೇಳಿಕೆ ಜನರೆ ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಜವಾಗಿಯೂ ಅವರ ಮಾತಿಗೆ ತಕ್ಕ ಹಾಗೇ ನಡೆದುಕೊಳ್ಳುದಾದರೆ ಮೊದಲು ಹೇಳಿದ ರೀತಿಯಲ್ಲಿ ನಡೆದುಕೊಳ್ಳಲಿ ಎಂದರು.
ಡ್ರಗ್ ಮಾಫಿಯಾ ಅಕ್ರಮ ಚಟುವಟಿಕೆ ತನಿಖೆ ಗಂಭೀರವಾಗಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿಯಿದ್ದರೆ ಪೊಲೀಸರಿಗೆ ನೀಡಿ. ಮೊದಲೆಲ್ಲಾ ಎಲ್ಲಿ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ ಎನ್ನುವ ಭಯದಿಂದ ಮಾಹಿತಿ ನೀಡುತ್ತಿರಲಿಲ್ಲ. ಇದರ ವಿರುದ್ಧ ಇಷ್ಟು ಗಂಭೀರ ತನಿಖೆಯಾಗಿದ್ದು ಇದೇ ಮೊದಲು. ಡ್ರಗ್ ಮಾಫಿಯಾವನ್ನು ಬೇರು ಸಹಿತ ಕಿತ್ತು ಹಾಕಬೇಕೆಂದು ತನಿಖೆ ಗಂಭೀರವಾಗಿ ನಡೆಸುತ್ತಿದ್ದೇವೆ ಎಂದರು.
ಪ್ರಶಾಂತ್ ಸಂಬರಗಿ ಮಾತ್ರವಲ್ಲ. ಬೇರೆ ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸರಿಗೆ ಸಲ್ಲಿಸಿ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ನನ್ನ ಬಳಿ ಮಾಹಿತಿ ಇದೆ ಅಂದಿದ್ದಾರೆ. ಅವರೂ ಅದನ್ನು ತನಿಖೆ ತಂಡಕ್ಕೆ ಹಂಚಿಕೊಳ್ಳಲಿ. ಆಗ ಡ್ರಗ್ ಜಾಲವನ್ನ ಬಗ್ಗು ಬಡಿಯಲು ಸಾಧ್ಯ ಎಂದರು.
ಲವ್ ಜಿಹಾದ್, ಭಯೋತ್ಪಾದನೆ, ಡ್ರಗ್ ಜಾಲ ಹೀಗೆ ಹಲವು ಮುಖಗಳ ಬಗ್ಗೆ ಹಲವರು ಮಾತಾನಾಡಿದ್ದಾರೆ. ಎಲ್ಲಾ ಮುಖಗಳ ಬಗ್ಗೆ ತನಿಖೆ ನಡೆಯುತ್ತದೆ. ತನಿಖಾ ತಂಡ ಯಶಸ್ವಿಯಾಗಿ ತನಿಖೆ ನಡೆಸುತ್ತಿದೆ. ಪ್ರಮೋದ್ ಮುತಾಲಿಕ್, ಶೋಭಾ ಕರಂದ್ಲಾಜೆ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಹವಾಲ ಹಣದ ಬಗ್ಗೆಯೂ ಸಂಶಯವಿದೆ. ತನಿಖೆ ದಿಕ್ಕಿನಲ್ಲಿ ಹೊಸ ಮಜುಲುಗಳು ತೆರದಿಟ್ಟುಕೊಳ್ಳಬಹುದು ಎಂದು ಸಚಿವರು ಹೇಳಿದರು.