ಮಂಗಳೂರು : ವಿವಿ ಕಾಲೇಜಿನಲ್ಲಿ ಸರ್ ಸಿ. ವಿ. ರಾಮನ್‌ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆ

0
95
c v raman, raman drawing, mangalore news, kannada news

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಇನ್ನೋವೇಶನ್ ಕ್ಲಬ್‌ ವತಿಯಿಂದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳಾದ ಸಿ. ವಿ. ರಾಮನ್‌ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆಯನ್ನು ಭಾನುವಾರ ವೆಬಿನಾರ್‌ ಮುಖಾಂತರ ಆಚರಿಸಲಾಯಿತು.

ಸಂಘದ ಸದಸ್ಯ‌ ಚೇತನ್ ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದ ಮೇಡಂ ಮೇರಿ ಕ್ಯೂರಿಯ ಜೀವನಚರಿತ್ರೆಯ ಪರಿಚಯ ನೀಡಿ, ಅವರು ಭೌತವಿಜ್ಞಾನದ ನೋಬಲ್ (1903) ಮತ್ತು ರಸಾಯನ ಶಾಸ್ತ್ರ ವಿಭಾಗದಲ್ಲಿ (1911) ನೋಬಲ್ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಹಾಗೂ ನೋಬಲ್ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳಾ ವಿಜ್ಞಾನಿ ಎಂದು ತಿಳಿಸಿದರು.

ಅಂಕಿತ ಮತ್ತು ಗೌಸಿಯಾ ʼರಾಮನ್‌ ಎಫೆಕ್ಟ್‌ʼ ಬಗ್ಗೆ ತಿಳಿಸುತ್ತಾ, ಈ ವಿದ್ಯಮಾನವನ್ನು ಅಧ್ಯಯನ ಮಾಡುವ ಮೂಲಕ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ, ಎಂದರು. ನಂತರ ಸ್ಫೂರ್ತಿ, ಪರಮಾಣು ವಿದಳನವನ್ನು ಕಂಡುಹಿಡಿದ ತಂಡದ ಭಾಗವಾಗಿದ್ದ ಮತ್ತು ಪ್ರೊಟಾಕ್ಟಿನಿಯಂ ಎಂಬ ಹೊಸ ವಿಕಿರಣಶೀಲ ಮೂಲ ಧಾತುವನ್ನು ಕಂಡುಹಿಡಿದ ಲೈಸ್ ಮೇಟ್ನರ್ ಕುರಿತು ಮಾತನಾಡಿದರು.

ರೇಡಿಯಂ ಗರ್ಲ್ಸ್: 

ಇನ್ನೋವೇಶನ್ ಸಂಘದ ಉಪ ನಿರ್ದೇಶಕ ಡಾ. ಸಿದ್ಧರಾಜು ಎಂ. ಎನ್‌, “ರೇಡಿಯಂ ಗರ್ಲ್ಸ್” ಎಂಬ ಕುತೂಹಲಕಾರಿ ವಿಷಯವನ್ನು ಪ್ರಸ್ತಾಪಿಸಿ, ಪ್ರಥಮ ವಿಶ್ವಯುದ್ಧದ ಸಮಯದಲ್ಲಿ ಗಡಿಯಾರ ಕಾರ್ಖಾನೆಯಲ್ಲಿ ವಾಚ್ ಡಯಲ್‌ಗಳಿಗೆ ರೇಡಿಯಂ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಐವರು ಹುಡುಗಿಯರು ಕ್ಯಾನ್ಸರ್ ಪೀಡಿತರಾಗಿ ಸಾಯುವ ಮೊದಲು ಔದ್ಯೋಗಿಕ ಖಾಯಿಲೆಗಳ ವಿರುದ್ಧ ತಿಳಿಸಿ, ಕಾರ್ಮಿಕ ಹಕ್ಕುಗಳ ಚಳುವಳಿ ನಡೆಸಿ ರೇಡಿಯಂನ ಕರಾಳತೆಯನ್ನು ಜಗತ್ತಿಗೆ ಸಾರಿದ ರೋಚಕ ಕಥೆ ತಿಳಿಸಿದರು.

1895 ರ ನವೆಂಬರ್‌ 8 ರಂದು ವಿಲ್ಹೆಲ್ಮ್ ರೋಂಟ್ಜೆನ್ ಎಕ್ಸ್-ರೇ ಆವಿಷ್ಕಾರಿಸಿದ ಕಾರಣ ಈ ದಿನವನ್ನು ‘ವಿಶ್ವ ರೇಡಿಯಾಗ್ರಫಿ ದಿನʼವಾಗಿ ಎಂದು ತಿಳಿಸಿದರು. ವೈಷ್ಣವಿಯ ಪ್ರಾರ್ಥನೆ ಸಲ್ಲಿಸಿದರೆ, ಪಲ್ಲವಿ ಸ್ವಾಗತ ಕೋರಿದರು. ಸಲೋನಿ ವಂದನಾರ್ಪಣೆಗೈದರು. ಪೂಜಾ ಮತ್ತು ವೇದಾಶಿನಿ ಸಮಾರಂಭವನ್ನು ನಿರ್ವಹಿಸಿದರು. ಕಾರ್ಯಕ್ರಮದ ವೇಳೆ, ಸಂಘದ ಸದಸ್ಯ ಗೋಪಾಲ್ ರಚಿಸಿದ ಸರ್ ಸಿ.ವಿ. ರಾಮನ್ ಅವರ ಚಿತ್ರ ಗಮನ ಸೆಳೆಯಿತು.

ಗಮನ ಸೆಳೆದ ಸರ್ ಸಿ.ವಿ. ರಾಮನ್ ರ ಚಿತ್ರ

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಇನ್ನೋವೇಶನ್ ಕ್ಲಬ್‌ ವತಿಯಿಂದ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳಾದ ಸಿ. ವಿ. ರಾಮನ್‌ ಮತ್ತು ಮೇಡಂ ಮೇರಿ ಕ್ಯೂರಿ ಜನ್ಮದಿನಾಚರಣೆ ವೇಳೆ ಸಂಘದ ಸದಸ್ಯ ಗೋಪಾಲ್ ರಚಿಸಿದ ರಾಮನ್ ರ ಚಿತ್ರ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here