ಆ ಎಳೆ ಮನಸ್ಸಿನಲ್ಲಿತ್ತು ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಕನಸು !

0
226
Tap to know MORE!

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ಗುರು ಅವರ ಹೆಸರುಗಳು ಅಜರಾಮರ. ಈ ತ್ರಿವಳಿ ರತ್ನಗಳಲ್ಲಿ ಒಬ್ಬರಾದ ಸುಖದೇವ್ ಥಾಪರ್ ಭಾರತೀಯ ಕ್ರಾಂತಿಕಾರಿ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು.

ಸುಖದೇವ್ 1909ರ ಮೇ 15ರಂದು ರಾಮ್ ಲಾಲ್ ಮತ್ತು ಇಳಾದೇವಿ ದಂಪತಿಯ ಮಗನಾಗಿ ಪಂಜಾಬ್‌ನಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಮಾವ ಲಾಲ ಅಚಿಮಿತ್ರರವರ ಆಶ್ರಯದಲ್ಲಿ ಬೆಳೆದರು. ಚಿಕ್ಕ ವಯಸ್ಸಿನಲ್ಲಿ ಭಾರತೀಯರ ಮೇಲೆ ಬ್ರಿಟಿಷರಿಂದಾಗುತ್ತಿದ್ದ ಅನ್ಯಾಯ, ಅತ್ಯಾಚಾರಗಳನ್ನು ಕಂಡ ಸುಖದೇವ್ ಅವರಲ್ಲಿ ಒಬ್ಬ ಕ್ರಾಂತಿಕಾರಿ ಜನ್ಮತಾಳಿದ್ದ. ಯೌವನದಲ್ಲಿ ಮನಸ್ಸು ಭಾರತಮಾತೆಯನ್ನು ಬಂಧಮುಕ್ತಗೊಳಿಸಲು ಹಾತೊರಿಯುತ್ತಿತ್ತು .

ಇದನ್ನೂ ನೋಡಿ: ಬ್ರಿಟಿಷರಿಗೆ, ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡಿದ ಚಾಪೇಕರ್ ಸಹೋದರರು

ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಲು ಸುಖದೇವ್, ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನ ಸದಸ್ಯರಾಗಿ ಸೇರಿಕೊಂಡರು. ಪಾದರಸದಂತೆ ಉತ್ತರ ಭಾರತದ ಹಲವಾರು ಪ್ರದೇಶಗಳಿಗೆ ಸಂಚರಿಸಿ ಯುವಕರ ಗುಂಪುಗಳನ್ನು ಕಟ್ಟಿದರು. ಲಾಹೋರಿನಲ್ಲಿ ಯುವಜನರನ್ನು ಒಟ್ಟುಗೂಡಿಸುವ ಸಲುವಾಗಿ ಅಲ್ಲಿನ ನ್ಯಾಷನಲ್ ಕಾಲೇಜಿಗೆ ಹೋಗಿ ದೇಶಕ್ಕಾಗಿ ಹೋರಾಡಲು ಕರೆಕೊಟ್ಟರು. ಭಾರತದ ಭವ್ಯ ಪರಂಪರೆಗಳ ಬಗ್ಗೆ ಯುವಜನರ ಮನಸ್ಸಿಗೆ ನಾಟುವಂತೆ ಮಾತನಾಡಿದ ಅವರು ಕ್ರಾಂತಿಕಾರಿಗಳನ್ನು ಒಗ್ಗೂಡಿಸಿ ಲಾಹೋರ್‌ನಲ್ಲಿ ‘ನವಜವಾನ್ ಭಾರತ್ ಸಭಾ’ ಎಂಬ ಯುವಕರ ತಂಡ ಕಟ್ಟಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಅಣಿಗೊಳಿಸಿದರು.

ಸುಖದೇವ್ ಬರೀ ಬೋಧನೆಯಲ್ಲೇ ಕಾಲಕಳೆಯದೆ ಸ್ವತಃ ತಾವೇ ಹಲವಾರು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು. 1928ರಲ್ಲಿ ನಡೆದ ʼಲಾಹೋರ್ ಒಳಸಂಚುʼ ಮತ್ತು 1929 ರಲ್ಲಿ ನಡೆದ ‘ಸೆರೆಮನೆಯ ಸತ್ಯಾಗ್ರಹ’ ಲಾಹೋರ್ ಒಳಸಂಚು (‘ಲಾಹೋರ್ ಕಾನ್ಸ್ಪಿರೆಸಿ’) ಪ್ರಕರಣವಂತೂ ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದೆವು ಎಂದು ಬೀಗಿದ ಬ್ರಿಟಿಷರಿಗೆ ಸವಾಲೆಸಗಿದಂತಿತ್ತು.

ಸುಖದೇವ್, ಭಗತ್ ಸಿಂಗ್ ಮತ್ತು ಶಿವರಾಮ್ ಹರಿ ರಾಜಗುರು ಅವರ ಜೊತೆಗೂಡಿ ಲಾಲ ಲಜಪತ್ ರಾಯ್‌ ಅವರನ್ನು ಲಾಠಿ ಏಟಿನಿಂದ ಕೊಂದ ಬ್ರಿಟೀಷ್‌ ಪೊಲೀಸ್ ಅಧಿಕಾರಿ ಸಾಂಡರ್ಸ್ ಎಂಬಾತನನ್ನು ಹತ್ಯೆಗೈದರು. 1929 ರಲ್ಲಿ ನವದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲ್ ನಲ್ಲಿ ಬಾಂಬ್ ಎಸೆದ ಘಟನೆಯಲ್ಲಿ ಈ ಮೂವರಿಗೂ ಬ್ರಿಟಿಷ್ ಆಡಳಿತ ಮರಣದಂಡನೆ ವಿಧಿಸಿತು.

ಹೀಗೆ ಮಾರ್ಚ್ 23,1931 ರಂದು ಭಗತ್ ಸಿಂಗ್, ಸುಖದೇವ್ ಥಾಪರ್, ಶಿವರಾಮ ಹರಿ ರಾಜ್ಗುರು ನಗುನಗುತ್ತಾ ನೇಣುಗಂಬದ ಉರುಳಿಗೆ ಚುಂಬಿಸಿ ಕೊರಳೊಡ್ಡಿದರು. ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡಾಗ ಈ ಯುವ ಮಹಾತ್ಮ ಸುಖದೇವ್ ಅವರ ವಯಸ್ಸು ಕೇವಲ 24 ವರ್ಷ .

ಸುರೇಶ್‌ ರಾಜ್‌
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here