ಸುದ್ದಿ ಸಂತೆಯಲ್ಲಿ ಅಕ್ಷರದ ಆನಂದ

0
231
Tap to know MORE!

ಕಳೆದ ಒಂದೆರಡು ದಶಕಗಳಿಂದ ಮಾಧ್ಯಮ ರಂಗದಲ್ಲಿ ದೊಡ್ಡ ಕ್ರಾಂತಿಯೇ ಆಗಿದೆ. ಟಿ.ವಿ. ವಾಹಿನಿಗಳ ಸಂಖ್ಯೆ ಅಗತ್ಯಕ್ಕಿಂತ ಅಧಿಕವಾಗಿದೆ. ಸುದ್ದಿ ನೀಡಲು ನಾ ಮುಂದು ತಾ ಮುಂದು ಎಂಬಂತೆ ಮುಗಿಬೀಳುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ಎಲ್ಲರೂ ಪೊಟೋಗ್ರಾಫರ್, ವರದಿಗಾರರೂ, ಸಂಪಾದಕರೂ, ಪ್ರಸಾರಕರೂ ಆಗಿದ್ದಾರೆ. ಟಿ.ವಿ ಚಾನೆಲ್‍ಗಳು ತಮ್ಮ ಸುದ್ದಿ ವ್ಯಾಪಾರವನ್ನು ಹೆಚ್ಚಿಸುವ ಭರಾಟೆಯಲ್ಲಿ ವಿಕಾರಲೋಕವೊಂದನ್ನೆ ಸೃಷ್ಟಿಸಿದೆ. ಜನ ಸಹಜವಾಗಿ ಮಾತಿನ ಮಸಾಲೆಯ ರುಚಿಗೆ ಒಗ್ಗಿದ್ದಾರೆ. ಇಂತಹ ವಿಪರೀತ ಸ್ಪರ್ಧೆಯಲ್ಲಿ ಪತ್ರಿಕಾ ಮಾಧ್ಯಮ ಒಂದಿಷ್ಟು ಅಸ್ಮಿತೆಯನ್ನು ಉಳಿಸಿಕೊಂಡಿದೆ. ಆದುದರಿಂದ ಪತ್ರಿಕಾ ದಿನಾಚರಣೆ ಎಂಬುದು ಪತ್ರಿಕಾ ರಂಗದ ಹುಟ್ಟು ಹಬ್ಬ ಮಾತ್ರವಾಗಿರದೆ ಗೆಲುವಿನ ಸಂಭ್ರಮಾಚರಣೆಯೂ ಹೌದು. ಸಾಧಕ ವ್ಯಕ್ತಿಯನ್ನು ಕಂಡ ತಕ್ಷಣ ಗೌರವ ಮೂಡುವುದು ಅಸಾಧ್ಯ. ವ್ಯಕ್ತಿಯ ಏಳು-ಬೀಳು, ಸಾಧನೆ, ಕೊಡುಗೆ, ಮನೋಧರ್ಮಗಳ ಮೊತ್ತವೇ ವ್ಯಕ್ತಿತ್ವ. ವ್ಯಕ್ತಿಯ ಚಾರಿತ್ರ್ಯ ಮತ್ತು ಚರಿತ್ರೆಯ ಮೂಲಕ ವ್ಯಕ್ತಿ ಗೌರವ ಅರಿವಿಗೆ ಬರುತ್ತದೆ. ಹಾಗೆಯೇ ನಮ್ಮ ಎದುರು ಇರುವ ಪತ್ರಿಕೆ ಕೇವಲ ಕಾಗದವಲ್ಲ; ಅಕ್ಷರಗಳ ಸಾಲು ಮಾತ್ರವಲ್ಲ ಅದಕ್ಕೂ ಒಂದು ವ್ಯಕ್ತಿತ್ವ ಇದೆ. ಸ್ವಾತಂತ್ರ್ಯದ ಜಾಗೃತಿಯಾಗಿ, ಹೋರಾಟದ ವೇಗವರ್ಧಕವಾಗಿ ಪತ್ರಿಕೆಗಳು ನೀಡಿದ ಕೊಡುಗೆ ಅಪಾರ. ಕರ್ನಾಟಕ ರಾಜ್ಯದ ನಿರ್ಮಾಣದಲ್ಲಿಯೂ ಪತ್ರಿಕೆಗಳ ಕೊಡುಗೆಯಿದೆ. ಈ ನಾಡು ಕಂಡ ಚಳುವಳಿ ಮತ್ತು ಪತ್ರಿಕೆಯನ್ನು ವಿಭಜಿಸಿ ನೋಡುವುದು ಅಸಾಧ್ಯ. ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳ ಧೋರಣೆಗಳನ್ನು ವಿರೋಧಿಸಲೆಂದೆ ಜನ್ಮತಾಳಿದ ಪತ್ರಿಕೆಗಳಿವೆ. ವರ್ತಮಾನ ಪತ್ರಿಕೆಗಳು ವರ್ತಮಾನವನ್ನಷ್ಟೇ ಗಮನಿಸದೆ ಅದರ ಗತಶಕ್ತಿಯನ್ನು ಅರಿತಾಗ ಪತ್ರಿಕೆಗಳ ವ್ಯಕ್ತಿತ್ವದ ಅಗಾಧತೆ ವ್ಯಕ್ತವಾಗುತ್ತದೆ. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಜನಮಾನಸಗಳಿಗೆ ತಲುಪಿಸಿದ್ದೇ ಪತ್ರಿಕೆಗಳು. ಸಣ್ಣಕತೆ, ಕಾದಂಬರಿ, ಕವಿತೆಯಂತಹ ಪ್ರಕಾರಗಳು ಪುಸ್ತಕದಲ್ಲಿ ಅವಿತು ಕುಳಿತುಕೊಳ್ಳುವ ಮೊದಲು ಪತ್ರಿಕೆಯ ಮೂಲಕ ಜನರ ಬುದ್ಧಿ-ಭಾವಲೋಕವನ್ನು ಸುತ್ತಾಡಿ ಬಂದಿದೆ ಎಂಬುದನ್ನು ಗಮನಿಸಬೇಕು.

ಸುದ್ದಿಗೆ ನೂರುದಾರಿಗಳಿರುವ ಈ ಕಾಲದಲ್ಲೂ ಪತ್ರಿಕೆ ತನ್ನ ಮಹತ್ವ ಉಳಿಸಿಕೊಂಡ ಬಗೆ ಹೇಗೆ ಎಂಬುದನ್ನು ವಿವೇಚಿಸಬೇಕಾಗಿದೆ. ಪ್ರಾಯಶಃ ನಾಲಗೆಯನ್ನು ಮನಬಂದಂತೆ ಉಪಯೋಗಿಸಿದ ಹಾಗೆ ಅಕ್ಷರಗಳನ್ನು ಇಳಿಸಲಾಗದು. ನಾಲಗೆಯಿಂದ ಹೊರಬಂದ ವಿಪರೀತ ವಿಕಾರ ಮಾತನ್ನು ಅಷ್ಟೆ ಸಲೀಸಾಗಿ ಅಕ್ಷರವಾಗಿಸುವುದು ಅಸಾಧ್ಯ. ಈ ಕಾರಣದಿಂದ ಅಕ್ಷರ ಮಾಧ್ಯಮ ಇಂದಿಗೂ ತನ್ನ ಪಾವಿತ್ರ್ಯ ಉಳಿಸಿದೆ. ಟಿ.ವಿ ವಾಹಿನಿಯಲ್ಲಿ ಸುದ್ದಿ ನೋಡಿದರೂ ಮರುದಿನ ಪತ್ರಿಕೆ ನೋಡಲೇ ಬೇಕಾಗುತ್ತದೆ. ಇಂದಿಗೂ ಪತ್ರಿಕಾ ಮಾಧ್ಯಮ ತನ್ನ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಟಿ.ವಿಯ ಸುದ್ದಿ, ಚರ್ಚೆ ನೋಡಿದರೆ ಮಾತ್ರ ಸಂತೃಪ್ತ ನಿದ್ದೆ ಎಂದಿದ್ದವರೂ ಅವರಿಗೆ ಅರಿವಿಲ್ಲದೆಯೆ ಟ.ವಿ ವಾರ್ತೆಯಿಂದ ಬಿಡುಗಡೆಗೊಂಡಿದ್ದಾರೆ. ಅತಿರೇಕದ ಅಪಾಯವನ್ನು ಟಿ.ವಿ ವಾಹಿನಿಯೂ ಎದುರಿಸುತ್ತದೆ. ಸ್ವಚ್ಛಗೊಳಿಸುವ ಬಟ್ಟೆ ಸ್ವಚ್ಛಗೊಳಿಸಿದರೆ ಸಾಲದು, ಆಗಾಗ ತಾನು ಸ್ವಚ್ಛಗೊಳ್ಳಬೇಕು ಹಾಗೆಯೇ ಸಮಾಜ ತಿದ್ದುವ ಪತ್ರಕರ್ತರು ಆತ್ಮಾವಲೋಕನ ಮಾಡಬೇಕು. ಮನುಷ್ಯ ಸಹಜ ದೌರ್ಬಲ್ಯವನ್ನೇ ಬಂಡವಾಳವಾಗಿಸಿ ವಿಕಾರವನ್ನೇ ಉಣಬಡಿಸುವ ಕೆಲಸಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಾಗಿದೆ. ದಿನಂಪ್ರತಿ ಮೃಷ್ಟಾನ್ನ ಭೋಜನ ಸವಿದಾಗ ಮೃಷ್ಟಾನ್ನವೇ ಅಸಹ್ಯವಾಗಿ ಅನ್ನ-ನೀರಿನ ಕಡೆ ಮುಖ ಮಾಡುತ್ತೇವೆ. ಅದೇ ರೀತಿ ಪತ್ರಿಕೆಯ ಓದು ಸಂತೃಪ್ತಿ ನೀಡುತ್ತಿದೆ. ಪತ್ರಿಕೆಗೆ ಅನ್ನದ ಗುಣವಿದೆ.
ಹಾಗೆಂದ ಮಾತ್ರಕ್ಕೆ ಪತ್ರಿಕೆಗಳು ಸವಾಲುಗಳಿಂದ ಮುಕ್ತವಾಗಿದೆ ಎಂದಲ್ಲ. ಆರೋಗ್ಯ, ಶಿಕ್ಷಣದಂತೆ ಪತ್ರಿಕೆಯೂ ಉದ್ಯಮವಾಗಿದೆ. ಬಂಡವಾಳ, ಲಾಭದ ಲೆಕ್ಕಾಚಾರ ಇಲ್ಲೂ ಇದೆ. ಅದರ ಫಲವಾಗಿಯೇ ಮುಖಪುಟವೇ ಜಾಹೀರಾತಾಗಿ ಮಾರ್ಪಟ್ಟಿದೆ. ಜಾಹೀರಾತುದಾರ ಮತ್ತು ಓದುಗನ ಮಧ್ಯೆ ಪತ್ರಿಕೆ ನಿಂತಿದೆ. ಜಾಹಿರಾತು ಇಲ್ಲದೆ ಪತ್ರಿಕೆ ಇಲ್ಲ. ಓದುಗ ಇಲ್ಲದೆ ಜಾಹಿರಾತು ಇಲ್ಲ. ಇಬ್ಬರನ್ನು ಸಮದೂಗಿಸುವ ಪ್ರಯತ್ನವನ್ನು ಪತ್ರಿಕಾ ಮಾಧ್ಯಮ ಮಾಡುತ್ತಿದೆ. ಸಹಜವಾಗಿ ಮೌನ ಕಾಪಾಡುತ್ತಲೇ ಉಳಿದಿದೆ ಆರ್ಥಿಕ ಬಂಡವಾಳದಂತೆ ರಾಜಕೀಯ ಪಕ್ಷ ಸಿದ್ದಾಂತದ ತಳಪಾಯವೂ ಪತ್ರಿಕೆಗಳಿಗಿದೆ. ಆದುದರಿಂದ ಪತ್ರಿಕೆಯನ್ನು ಒಳಗಂಡಂತೆ ಯಾವ ಮಾಧ್ಯಮವೂ ಸತ್ಯದ ದರ್ಶನವನ್ನು ಮಾಡುತ್ತದೆ ಎನ್ನಲಾಗದು. ಓದುಗನ ಮತಿಯೇ ಆತನ ಸಂಪತ್ತು. ಸುದ್ದಿಯಾಗುವ, ಸುದ್ದಿಯಾಗದಿರುವ, ಮೌನವಹಿಸುವ ಮರ್ಮವನ್ನು ಮತಿಯ ಒರೆಗಲ್ಲಿಗೆ ಹಚ್ಚಿ ಸತ್ಯದ ಹತ್ತಿರ ನಿಲ್ಲಬೇಕಾಗಿದೆ.

ಕೆಲವೊಂದು ನಿರಾಶೆಗಳ ಮಧ್ಯೆಯೂ ಗ್ರಾಮೀಣ ಪತ್ರಿಕೋಧ್ಯಮದ ಕೊಡುಗೆಗಳನ್ನು ಅಲ್ಲಗಳೆಯಲಾಗದು. ಸಮಾಜದ ನೋವು ನಲಿವಿಗೆ ಪತ್ರಿಕೆಯ ಮೂಲಕ ಸ್ಪಂದಿಸುವ ಕೆಲಸ ಆಗುತ್ತಿದೆ. ಆ ಕಾರಣದಿಂದಲೇ ಹಳ್ಳಿಗಳಲ್ಲಿ ಪತ್ರಕರ್ತನಿಗೆ ಜನ ಸೇವಕನ ಪ್ರೀತಿ ಸಿಗುತ್ತಿದೆ. ಜ್ಞಾನಾರ್ಜನೆಗೆ, ಮನೋರಂಜನೆಗೆ ಹಲವು ನವನವೀನ ಮಾಧ್ಯಮಗಳಿವೆ ಎಂಬ ತೀರ್ಮಾನಕ್ಕೆ ಅತಿ ಸುಲಭದಲ್ಲಿ ಬರುತ್ತೇವೆ. ಆದರೆ ಓದಿಗೆ ಸಂವಾದಿಯಾದ ಮಾಧ್ಯಮ ಯಾವುದೂ ಇಲ್ಲ. ಅದಕ್ಕೆ ಅನ್ನದ ಸತ್ತ್ವ ಇದೆ ಎಂಬ ಅರಿವು ಎಳೆಯರಿಗೆ ಮನನವಾಗಬೇಕು. ಹೊರಜಗತ್ತಿನ ಚೆಲುವು-ನೋವುಗಳಿಗೆ ಮನಸ್ಸು ತೆರೆದುಕೊಳ್ಳಬೇಕು, ಧ್ಯಾನ ಮನಸ್ಥಿತಿಯಲ್ಲಿ ವಿವೇಚಿಸಬೇಕು. ಆಗ ಬರಹ ಹುಟ್ಟುತ್ತದೆ. ಅದಕ್ಕಾಗಿ ಅಂತರ್ಮುಖಿ-ಬಹಿರ್ಮುಖಿ ಎರಡೂ ಆಗಬೇಕಾಗಿದೆ. ನೂರಾರು ಸುದ್ದಿ ಸಂತೆಯಲ್ಲಿ ಹಿತಕಾರಿಯಾದ ಅಕ್ಷರದ ಆನಂದವನ್ನು ನಮ್ಮದಾಗಿಸಬೇಕಾಗಿದೆ.

ಡಾ. ಯೋಗೀಶ್ ಕೈರೋಡಿ,
ಪ್ರಾಧ್ಯಪಕ

ವಿಳಾಸ:-
ಆರಂಬೋಡಿ ಅಂಚೆ-574237
ಬೆಳ್ತಂಗಡಿ- ದ.ಕ

LEAVE A REPLY

Please enter your comment!
Please enter your name here