ಬಂಟ್ವಾಳ: ಬಂಟ್ವಾಳ ಭಂಡಾರಿಬೆಟ್ಟು ವಸತಿ ಸಂಕೀರ್ಣದಲ್ಲಿ ಹತ್ಯೆಯಾದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜ ನೇತೃತ್ವದ ತಂಡ ಶನಿವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದೆ.
ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಹಾಗೂ ಕಿನ್ನಿಗೋಳಿ ನಿವಾಸಿ ಗಿರೀಶ್ ಪೊಲೀಸ್ ವಶದಲ್ಲಿರುವವರು.
ಇದನ್ನೂ ನೋಡಿ : “ಸುರೇಂದ್ರ ಬಂಟ್ವಾಳರ ಕೊಲೆ ಮಾಡಿದ್ದು ನಾನೇ!” – ಆಡಿಯೋ ವೈರಲ್
ಇವರು ಶನಿವಾರ ರಾತ್ರಿ ಕೇರಳ ಭಾಗದಿಂದ ಬಂಟ್ವಾಳ ಕಡೆಗೆ ಬರುತ್ತಿರುವ ಕುರಿತು ಮಾಹಿತಿ ಪಡೆದ ಪೊಲೀಸರು, ವಶಕ್ಕೆ ಪಡೆದಿದ್ದಾರೆ. ಸುರೇಂದ್ರ ಬಂಟ್ವಾಳನ ಸ್ನೇಹಿತ ಎನ್ನಲಾದ ಸತೀಶ್ ಧ್ವನಿಯಲ್ಲಿರುವ ಆಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಸತೀಶ್ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ಬುಧವಾರ ಮಧ್ಯಾಹ್ನ ಬಂಟ್ವಾಳದ ಅಪಾರ್ಟ್ ಮೆಂಟ್ ಒಂದರಲ್ಲಿ ಭೀಕರವಾಗಿ ಕೊಲೆಗೀಡಾಗಿದ್ದ ಸುರೇಂದ್ರ ಬಂಟ್ವಾಳ್ (39) ನನ್ನು ಯಾರು ಹತ್ಯೆ ಮಾಡಿದರು ಮತ್ತು ಯಾಕಾಗಿ ಹತ್ಯೆ ಮಾಡಿದರು ಎಂಬ ಕುರಿತು ಆಡಿಯೋ ದಲ್ಲಿರುವ ಧ್ವನಿಯ ಕುರಿತು ತನಿಖೆಯಿಂದ ಗೊತ್ತಾಗಲಿದೆ. ಸುರೇಂದ್ರ ಬಂಟ್ವಾಳ್ ಇದ್ದ ಫ್ಲ್ಯಾಟ್ ಗೆ ಆತನ ನಿಕಟವರ್ತಿ ಎನ್ನಲಾದ ಸತೀಶ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದಿದ್ದಾನೆ ಎನ್ನಲಾಗಿತ್ತು. ಇದೀಗ ವಿಚಾರಣೆ ಬಳಿಕವಷ್ಟೇ ಪ್ರಕರಣದ ಸ್ಪಷ್ಟ ಚಿತ್ರಣ ದೊರಕಲಿದೆ.