ನವದೆಹಲಿ: ಇಂದು ಬೆಳಿಗ್ಗೆ ವೈಯುಕ್ತಿಕ ಕಾರಣ ನೀಡಿ, ಐಪಿಎಲ್ 2020 ಯಿಂದ ಸುರೇಶ್ ರೈನಾ ಹೊರನಡೆದಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಭಾರತದ ಮಾಜಿ ಕ್ರಿಕೆಟ್ ಆಟಗಾರನ ಸೋದರತ್ತೆಯ ಕುಟುಂಬದ ಮೇಲೆ ದಾಳಿಕೋರರು ಹಲ್ಲೆ ಮಾಡಿದ್ದು, ಅವರ ಸೋದರಮಾವ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸುರೇಶ್ ರೈನಾ ಅವರು ಐಪಿಎಲ್-2020ಯಲ್ಲಿ ಭಾಗವಹಿಸಲು ಆಗಸ್ಟ್ 21ರಂದು ಯುಎಇಗೆ ಹೋಗಿದ್ದರು. ತಮ್ಮ ಕ್ವಾರಂಟೈನ್ ಅವಧಿ ಮುಗಿಯಿತು ಎನ್ನುವಷ್ಟರಲ್ಲಿ, ತಂಡದ ಕೆಲ ಸಿಬ್ಬಂದಿಗಳು ಮತ್ತು ಆಟಗಾರರ ಕೊರೋನಾ ಪರೀಕ್ಷೆಯಲ್ಲಿ “ಪಾಸಿಟಿವ್” ಬಂದಿದೆ. ಹೀಗಾಗಿ, ತಂಡವು ಭಾರೀ ಆಘಾತಕ್ಕೆ ಒಳಗಾಗಿತ್ತು. ಇದರ ನಡುವೆ ಸೋದರಮಾವ ಸಾವನ್ನಪ್ಪಿರುವ ವಿಚಾರ ತಿಳಿದು ಈಗ ಸುರೇಶ್ ರೈನಾ, ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಿಂದಲೇ ರೈನಾ ಅವರು ಹೊರಬಂದಿದ್ದಾರೆ.
ಇದನ್ನೂ ಓದಿ : ಐಪಿಎಲ್ನಿಂದ ಹೊರನಡೆದ ಸುರೇಶ್ ರೈನಾ
ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಪಂಜಾಬ್ನ ಪಠಾಣ್ಕೋಟ್ನ ತರಿಯಾಲ್ ಗ್ರಾಮದಲ್ಲಿ ವಾಸವಿರುವ ರೈನಾ ಅವರ ಸೋದರತ್ತೆ ಕುಟುಂಬ ತಮ್ಮ ಮನೆಯ ಮಹಡಿ ಮೇಲೆ ಮಲಗಿತ್ತು. ಈ ವೇಳೆ ಅವರ ಮೇಲೆ ಅಪರಿಚಿತ ದಾಳಿಕೋರರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವರ ಸೋದರ ಮಾವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯ ಉಳಿದ ಸದಸ್ಯರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶುಕ್ರವಾರದಿಂದ ಅಭ್ಯಾಸವನ್ನು ಆರಂಭ ಮಾಡಬೇಕಿದ್ದ ಚೆನ್ನೈ ತಂಡ ಸೆಪ್ಟೆಂಬರ್ 1ರವರೆಗೆ ಕ್ವಾರಂಟೈನ್ನಲ್ಲಿ ಇರಲು ತೀರ್ಮಾನ ಮಾಡಿತ್ತು. ಇದರ ನಡುವೆ ರೈನಾ ಕೂಡ ಹೊರಗೆ ಬಂದಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.