“ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು” ಎನ್ನುವ ಚೆನ್ನವೀರ ಕಣವಿಯ ಮಾತಿನಂತೆ, ಹೀಗೆ ಬಂದು ಹಾಗೆ ಹೋಗುವಂತಹ ಗೆಳೆಯರಿಂದ ಹಿಡಿದು ಕಷ್ಟ – ಸುಖ,ಸೋಲು – ನಲಿವು ಯಾವುದೇ ಇದ್ದರೂ ಕೂಡ ಅದೆಲ್ಲಾ ಸಂದರ್ಭದಲ್ಲಿಯೂ ನಿನ್ನೊಂದಿಗೆ ನಾವಿದ್ದೇವೆ ಅನ್ನುವ ಭರವಸೆಯ ಮಾತಿನೊಂದಿಗೆ, ನಾವೇನಾದರೂ ತಪ್ಪು ಮಾಡಿದಾಗ, ನಮ್ಮಿಂದೇನಾದರೂ ತಪ್ಪಾದರೆ,ನಮ್ಮನ್ನು ತಿದ್ದಿ, ನಮ್ಮ ತಪ್ಪುಗಳನ್ನೂ ಕೂಡ ಸಮಾನವಾಗಿ ಸ್ವೀಕರಿಸಿ ಸರಿದಾರಿಗೆ ತರುವಂತಹ ಸ್ನೇಹಿತರು ಎಂದಿಗೂ ಮನದಾಳದಲ್ಲಿ ನೆನಪಾಗಿ ಉಳಿಯುವರು. ಬಾಲ್ಯದಿಂದ ಇಲ್ಲಿಯವರೆಗೆ ನಮಗಿರುವ ಸ್ನೇಹಿತರು ಹಲವರಿರಬಹುದು. ಆದರೆ ಮನಸ್ಸಿಗೆ ಹತ್ತಿರವಾಗಿ ನಮ್ಮವರೆಂದು ಸದಾಕಾಲ ನೆನಪಿನಲ್ಲಿ ಉಳಿಯುವಂತ ಸ್ನೇಹಿತರು ಕೆಲವೇ ಮಂದಿ.
ಯಾರೊಂದಿಗೂ ಹೇಳಿಕೊಳ್ಳಲಾಗದ ವಿಷಯವನ್ನು ಸ್ನೇಹಿತರೊಂದಿಗೆ ಹೇಳಿಕೊಂಡು ಭಾರವನ್ನು ಕಳೆದುಕೊಳ್ಳುತ್ತೇವೆ. ಕ್ಲಾಸಿಗೆ ಹೋಗುವಾಗ ಒಂಚೂರು ತಡವಾದರೂ ಬ್ಯಾಗಿನೊಳಗಿಟ್ಟ ಮೊಬೈಲ್ನಿಂದ ಅಲ್ಲಿಂದಲೇ ಮೆಸೇಜ್ ಮಾಡಿ ಇನ್ನೂ ಬಂದಿಲ್ವಾ ? ಬಸ್ಸ್ ಮಿಸ್ಸಾಯ್ತಾ? ಲೇಟ್ ಆಗುತ್ತಾ ? ಎಂದು ಕೇಳುವುದರಿಂದ ಹಿಡಿದು,ವಿರಾಮದ ವೇಳೆಯಲ್ಲಿ ಮುಗಿಯದ ಮಾತುಗಳನ್ನಾಡುತ್ತಾ, ಒಂದೇ ತಟ್ಟೆಯಲ್ಲಿ ಊಟವನ್ನೂ ಮಾಡುತ್ತಾ, ಕಾಲೇಜ್ ಡೇ ದಿನದಂದು ಒಂದೇ ಬಣ್ಣದ ಬಟ್ಟೆಯನ್ನು ಹಾಕುತ್ತಾ,ಪರೀಕ್ಷೆ ಹಾಲ್ ಗೆ ಹೋಗೋ ಕೊನೆಗಳಿಗೆಯಲ್ಲೂ ವರ್ಷವಿಡೀ ಕಲಿತ ಪಾಠವನ್ನು ಇದೇನೂ ಕಷ್ಟವಿಲ್ಲವೆಂದು ಅತೀ ಚಿಕ್ಕದಾಗಿ ವಿವರಿಸುತ್ತಾ, ಪ್ರೀತಿ ತೋರುವ ತಾಯಿಯಂತೆ, ಅಕ್ಕರೆಯ ಅಣ್ಣನಂತೆ, ಮಮತೆಯ ಅಕ್ಕನಂತೆ, ಹುಸಿಮುನಿಸು ತೋರುವ ತಂಗಿಯಂತೆ, ತುಸುಕೋಪ ಹೊಂದಿರುವ ತಮ್ಮನಂತೆ, ಗುರಿ ತೋರುವ ಗುರುವಿನಂತೆ, ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಪ್ರೊತ್ಸಾಹಿಸುತ್ತಾ, ಕಣ್ಣೀರೊರೆಸುತ್ತಾ ಇರುವ ಎಲ್ಲಾ ರೀತಿಯ ಸಂಬಂಧಗಳನ್ನು ಮೀರಿದ ಸ್ನೇಹ ಎಂದಿಗೂ ಸುಮಧುರವಾಗಿರಲಿ.