ಸ್ವಾತಂತ್ರ್ಯದ ಪರಿಧಿಯೊಳಗೆ….

0
153
Tap to know MORE!

ಇತಿಹಾಸದಲ್ಲಿ ಅಪರೂಪವಾಗಿ ದಾಖಲಾಗುವ ಕ್ಷಣ ಎಂದರೆ ಸ್ವಾತಂತ್ರ್ಯ ದೊರೆತ ಆ ದಿನ. ದೀರ್ಘಕಾಲದಿಂದ ತುಳಿತಕ್ಕೆ ಒಳಗಾದ ದೇಶವನ್ನು ಸ್ವತಂತ್ರ್ಯಗೊಳಿಸಲು ಒಂದಷ್ಟು ಯುವ ಮನಸ್ಸುಗಳು ಹೆಜ್ಜೆ ಹಾಕಿದವು. ಜಾತಿ ಮತಗಳ ಭೇದವಿಲ್ಲದೆ ಮೇಲು ಕೀಳುಗಳ ಹಂಗಿಲ್ಲದೆ ಅಂದು ಎಲ್ಲರಿಗೂ ಬೇಕಾಗಿದ್ದದ್ದು ಸ್ವಾತಂತ್ರ್ಯ. ಒಗ್ಗಟ್ಟಿನ ಶಕ್ತಿ ಇಲ್ಲದಾಗ ಬ್ರಿಟಿಷರಿಗೆ ಭಾರತೀಯರನ್ನು ಶೋಷಿಸುವುದು ಸುಲಭದ ದಾರಿಯಾಯಿತು. ಆದರೆ ಹಲವಾರು ವೀರ ಯೋಧರ, ಹೋರಾಟಗಾರರ ಏಕತಾ ಭಾವನೆ ಆಚಲವಾಗಿ ಒಂದಾಯಿತೋ ಅಂದೇ ದೇಶ ಸ್ವಾತಂತ್ರ್ಯತೆಯ ಕಡೆಗೆ ಮುಖ ಮಾಡಿತು.

ಶತ ಶತಮಾನಗಳಿಂದ ಭಾರತ ಮಾತೆ ತನ್ನ ಭವ್ಯತೆಯ ಪುನರುತ್ಥಾನಕ್ಕಾಗಿ ಅನ್ವೇಷಣೆ ನಡೆಸುತ್ತಲೇ ಬಂದಳು. ಅಲ್ಲಿ ಯಶಸ್ಸು ಮತ್ತು ವೈಫಲ್ಯ ಎರಡೂ ಇದ್ದವು. ಆದರೂ ತನ್ನ ಗುರಿ ಸಾಧಿಸುವ ಹಂಬಲದಲ್ಲಿ ಇರುವ ಸಾಮರ್ಥ್ಯವನ್ನು ಕಳೆದುಕೊಳ್ಳಲಿಲ್ಲ. ಈ ದಿನದ ಸಂಭ್ರಮ ನಾವಿಡಬೇಕಾದ ಒಂದು ಹೆಜ್ಜೆ, ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿಟ್ಟಿದೆ. ಇದರರ್ಥ ನಮ್ಮ ಮುಂದೆ ಇನ್ನಷ್ಟು ಸವಾಲುಗಳು ಇವೆ ಮತ್ತು ಭವಿಷ್ಯದ ಆಗುಹೋಗುಗಳನ್ನು ಸಮರ್ಥವಾಗಿ ಎದುರಿಸುವಷ್ಟು ನಾವು ಜಾಣತನ ಮತ್ತು ಧೈರ್ಯ ಹೊಂದಿದ್ದೇವೆಯೇ ಎನ್ನುವುದರ ಚಿಂತನೆ ಕೂಡ ಅಗತ್ಯ.

ಗಾಂಧಿ, ನೆಹರುಗಳಂತಹ ಮಹನೀಯರು ಶಾಂತಿ ಸೌಹಾರ್ದತೆಯ ಅಡಿಪಾಯ ಹಾಕಿಕೊಟ್ಟರು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಗಲಭೆ-ಗೊಂದಲಗಳಿಗೆ ಬರ ಇಲ್ಲದಷ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಹಿಂದೆ ಬ್ರಿಟಿಷರ ಭಯ ಇದ್ದ ಜನರಿಗೆ ಬಹುಶಃ ಮುಂದೊಂದು ದಿನ ಕುಟುಂಬದ ಸದಸ್ಯರಿಂದಲೇ ಜೀವ ಭಯ ಬರುವುದಂತೂ ನಿಶ್ಚಿತ. ಆಂಗ್ಲರ ಕಪಿ ಮುಷ್ಟಿಯಿಂದ ಸ್ವಾತಂತ್ರ್ಯ ಪಡೆದಿದ್ದೇವೆ ಆದರೆ ನಿಜವಾಗಿಯೂ ವೈಯಕ್ತಿಕ ಸ್ವಾತಂತ್ರ್ಯ ಇದೆಯೇ..ಇದ್ದರೂ ಯಾವ ರೀತಿಯ ಸ್ವಾತಂತ್ರ್ಯವದು? ಒಂದರ್ಥದಲ್ಲಿ ಸ್ವಾತಂತ್ರ್ಯ ಎಂಬ ಪದವೇ ದುರ್ಬಳಕೆಗೆ ದಾರಿ ಮಾಡಿಕೊಟ್ಟಿದೆ. ಸ್ವಾತಂತ್ರ್ಯದ ಹೆಸರಿನಲ್ಲಿ ಹೆತ್ತವರ ಮಾತು ಕೇಳದೆ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಇನ್ನೊಂದು ಕಡೆ ಸ್ವಾತಂತ್ರ್ಯ ಎಂಬುವುದು ಒಂದಷ್ಟು ವರ್ಗಗಳಿಗೆ ಮಾತ್ರವೇ ಸೀಮಿತವಾದಂತೆ ಭಾಸವಾಗುತ್ತದೆ.

ಇಂದು ಬಹುಚರ್ಚಿತವಾಗುತ್ತಿರುವ ಹಾಗೂ ಹಲವು ಸಂಘರ್ಷಕ್ಕೆ ಒಳಗಾಗುತ್ತಿರುವ ಪದವೆಂದರೆ ಅಭಿವ್ಯಕ್ತಿ. ಈ ಅಭಿವ್ಯಕ್ತಿ ಎಂಬುದಕ್ಕೆ ಯಾವ ಅರ್ಥವೂ ಇಲ್ಲ. ಆದರೆ ಸರಳವಾಗಿ ವಿವರಿಸುವುದಾದರೆ ನಮ್ಮ ಭಾವನೆಗಳನ್ನು ಪ್ರಕಟಪಡಿಸುವ ದಾರಿ. ಅದು ಮಾತಿನ ಮೂಲಕ ಆಗಿರಬಹುದು ಅಥವಾ ಬರಹದ ಮೂಲಕವೂ ಆಗಿರಬಹುದು. ಪ್ರಕಟದ ದಾರಿಗಳು ಬೇರೆ ಬೇರೆಯಾಗಿರಬಹುದು. ಆದರೆ ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ. ಅಭಿವ್ಯಕ್ತಿ ಎಂಬ ಪದವನ್ನು ಸ್ವಾತಂತ್ರ್ಯ ಶಬ್ಧದೊಂದಿಗೆ ಸೇರಿಸಿದರೆ ಅದಿಕ್ಕೊಂದು ಸಾಂವಿಧಾನಿಕ ಸ್ಥಾನ ಮಾನ ದಕ್ಕುತ್ತದೆ.

ಸ್ವಾತಂತ್ರ್ಯ ಎಂಬ ಮುಕ್ತ ಪರಿಸರವನ್ನು ಬರೇ ಮನುಷ್ಯ ಜೀವಿ ಮಾತ್ರ ಬಯಸುವುದಲ್ಲ, ಜೀವ ಜಗತ್ತಿನ ಪ್ರತಿಯೊಂದು ಜೀವಿ ಕೂಡ ತನ್ನ ಬೇಡಿಕೆಗಳನ್ನು, ಭಾವನೆಗಳನ್ನು ಹೊರಸೂಸಲು ತನ್ನದೇ ವಿಧಾನವನ್ನು ಬಳಸಿಕೊಳ್ಳುತ್ತದೆ. ಮನುಷ್ಯನ ಅಭಿವ್ಯಕ್ತಿ ಸ್ವಾತಂತ್ರ್ಯ ದೊಳಗೆ ಸ್ವಾರ್ಥ ಲಾಭ ನಷ್ಟದ ಲೆಕ್ಕಾಚಾರಗಳೇ ತುಂಬಿದೆ. ಸಮುದಾಯದ ಕಾಳಜಿ ಜನರಲ್ಲಿ ಕಾಣುವುದಿಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ಏನನ್ನಾದರೂ ಬರೆಯಬಹುದು ಅಥವಾ ಹೇಳಬಹುದು ಎಂದು ತಿಳಿದಿರುವುದು ಇಂದಿನ ಅಭಿವ್ಯಕ್ತಿ ಸ್ವಾತಂತ್ರ್ಯ ದಿಕ್ಕು ತಪ್ಪಲು ಕಾರಣ. ಭಾರತೀಯ ಸಂವಿಧಾನಕ್ಕೆ ಎಡ-ಬಲ ಪಂಕ್ತಿ ಎಂಬ ಸಂಕುಚಿತ ಭಾವವಿಲ್ಲ. ಒರತಿಯೊಬ್ಬರಿಗೂ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಅಧಿಕಾರವನ್ನು ಚಲಾಯಿಸುವ ಸಮಾನ ಅವಕಾಶವಿದೆ ಆದರೆ ಅದೇ ಸ್ವಾತಂತ್ರ್ಯ ದಾರಿ ತಪ್ಪುವಂತಿರಬಾರದು. ಇಂತಹ ಹಕ್ಕಿನಿಂದಲೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂಬ ನಂಬಿಕೆಯೂ ಸಂವಿಧಾನಕ್ಕೆ ಇದೆ.

ಪ್ರಸ್ತುತ ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದು. ಆದರೆ ದೇಶದಲ್ಲಿ ನಮಗೆ ಯಾವ ರೀತಿಯ ಚಿತ್ರಣ ಕಾಣಿಸುತ್ತಿದೆ ? ಇಂದು ಎಲ್ಲೆಡೆ ಭಯೋತ್ಪಾದನೆ ಹಬ್ಬಿಕೊಂಡಿದೆ. ಭಾರತದ ಗಡಿಯಲ್ಲಿರುವ ದೇಶಗಳಿಂದ ಆಕ್ರಮಣಗಳಾಗುತ್ತಿವೆ. ಬಹುದೊಡ್ಡ ಪ್ರಮಾಣದಲ್ಲಿ ಅತಿಕ್ರಮಣಕಾರರು ದೇಶದೊಳಗೆ ನುಸುಳಿ ದೊಡ್ಡ ದೊಡ್ಡ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುತ್ತಿದ್ದಾರೆ. ಭಯೋತ್ಪಾದಕರು ನೀಡುತ್ತಿರುವ ಬೆದರಿಕೆಯಿಂದಾಗಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಸಹ ಪೊಲೀಸು ಬಂದೋಬಸ್ತಿನಲ್ಲಿ ಆಚರಿಸಬೇಕಾಗುತ್ತದೆ. ಹಾಗಾದರೆ ನಮ್ಮ ಭಾರತ ದೇಶವು ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆಯೇನು?..ನಮ್ಮ ಸ್ವಾತಂತ್ರ್ಯ ಹಕ್ಕುಗಳ ಬಗ್ಗೆ ಮಾತನಾಡುವ ನಾವುಗಳು ಎಂದಾದರೂ ದೇಶದ ಸ್ವತಂತ್ರ್ಯತೆ ಎಷ್ಟರ ಮಟ್ಟಿಗಿದೆ ಎಂಬುದನ್ನು ಯೋಚಿಸಬೇಕು. ಸ್ವಾತಂತ್ರ್ಯದ ಪರಿಧಿಯೊಳಗೆ ನಾವು ನೀವುಗಳೆಲ್ಲಾ ಇದ್ದೇವೆ. ಆದರೆ ಆ ಪರಿಧಿಯೊಳಗೆ ನಮ್ಮ ಹೊಣೆಗಳೇನು..? ಪರಿಧಿಯಿಂದಾಚೆಗೆ ಇರುವ ಭಯಾನಕ ಭವಿಷ್ಯದ ಸ್ಥಿತಿಯೇನು..? ಎಂಬುದು ಭವ್ಯ ಭಾರತದ ನಾಗರಿಕರು ಚಿಂತಿಸಬೇಕಾದ್ದು.

 

LEAVE A REPLY

Please enter your comment!
Please enter your name here