ಸ್ವಾತಂತ್ರ್ಯೋತ್ತರ ಗುಲಾಮಗಿರಿ..!

0
223
Tap to know MORE!

ಎಷ್ಟು ಕೊಟ್ಟರು.?
ಹೇ ಜಾಸ್ತಿ ಇಲ್ಲ ಮಾರಾಯ ಬರಿ 500 ಅಷ್ಟೇ..
ಅಲ್ಲ ಮಾರಾಯ ಆ ಪಾರ್ಟಿ ಅವರು ಬಂದು ಒಂದು ಓಟಿಗೆ ಸಾವಿರ ರೂಪಾಯಿ ಕೊಡ್ತಾ ಇದ್ದಾರೆ, ಇವರು ಬರೀ 500 ಅಷ್ಟೇನಾ..?
ಏನೋ ಮಾರಾಯ ಎಲ್ಲಾ ಅವರವರೇ ನುಂಗ್ತಾ ಇದಾರೇನೋ..? ನಮಗೆ ಒಂದೂ ಹೇಳ್ತಾ ಇಲ್ಲ ನೋಡು.
ಸೀರೆ ಎಣ್ಣೆಯೆಲ್ಲ ಸಿಕ್ತಾ..?
ಹುಂ ಅದೆಲ್ಲಾ ಕೊಟ್ಟವರೇ….
ಮತ್ತೆ ಓಟ್ ಯಾರಿಗ್ ಹಾಕುವುದು..?
ನೋಡೋಣ ನಾಳೆವರೆಗೂ, ಯಾರು ಜಾಸ್ತಿ ಕೊಡ್ತಾರೋ ಅವರಿಗೇ ಹಾಕುವುದು
ಅಲ್ಲಿಗೆ ನಮ್ಮ ಕಥೆ ಉದ್ದಾರ…..!

ಇದೇ ತರಹದ ಹಲವಾರು ಸಂಭಾಷಣೆಗಳು ಮೊನ್ನೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನನ್ನ ಕಿವಿಗೆ ಬಿದ್ದಿದೆ. ಕೇವಲ ಐನೂರು – ಸಾವಿರ ರೂಪಾಯಿಗಳಿಗೆ ತಮ್ಮ ಓಟುಗಳನ್ನು ಮಾರಿಕೊಳ್ಳಲು ತಯಾರಿರುವ ಮನಸ್ಥಿತಿಗಳಿಂದ ಹೊರಬಂದು ಸಮರ್ಥ ಜನಪ್ರತಿನಿಧಿಗಳಿರುವ ಒಂದು ಸ್ವಸ್ಥ ಸಮಾಜವನ್ನು ನಿರ್ಮಿಸುವುದು ನಿಜಕ್ಕೂ ಕಷ್ಟಸಾಧ್ಯವೇ ಸರಿ.

ನಮ್ಮೂರಿನ ಹಲವಾರು ಹಿರಿಯರ ಜೊತೆ ಮಾತನಾಡುವಾಗ ಬ್ರಿಟಿಷರ ನಂತರದ ಆಡಳಿತಕ್ಕೂ ಬ್ರಿಟಿಷರ ಆಡಳಿತಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದಾಗಿದೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಈಗಲೂ ನಮ್ಮೂರಿನ ವೃದ್ಧೆ ರೇಖಾವತಿಯವರನ್ನು ನಿಮ್ಮ ಮುಖ್ಯಮಂತ್ರಿ ಯಾರೆಂದು ಕೇಳಿದರೆ ಕರಾರುವಕ್ಕಾಗಿ ಹೇಳಲು ಅವರಿಗೆ ಆಗುವುದಿಲ್ಲ. ಬಹಳಷ್ಟು ಮತದಾರರಿಗೆ ತಾವು ಯಾರಿಗೆ ಮತ್ತು ಏತಕ್ಕೆ ಓಟು ಹಾಕುತ್ತಿದ್ದೇವೆ ಎಂಬುದರ ಸ್ಪಷ್ಟ ಅರಿವು ಇರುವುದಿಲ್ಲ. ಅರಿವಿದ್ದವರು ಕೂಡ ಓಟು ಹಾಕುವಷ್ಟು ವ್ಯವಧಾನವನ್ನು ತೋರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಜವಾದ ಜನಪ್ರತಿನಿಧಿಯನ್ನು ಆರಿಸುವುದು ಹೇಗೆ ಸಾಧ್ಯ..?

ಇದನ್ನೂ ಓದಿ: ಶಿಕ್ಷಣ ಸಂಘಟನೆ ಮತ್ತು ಹೋರಾಟದಿಂದ ಭಾರತ ಕಟ್ಟುವೆ

ಸ್ವಾತಂತ್ರ್ಯಪೂರ್ವದಲ್ಲಿ ನಮ್ಮನ್ನು ಬ್ರಿಟಿಷರು ಆಳುತ್ತಿದ್ದರು ಹಾಗೂ ಸ್ವಾತಂತ್ರ್ಯಾನಂತರದಲ್ಲಿ ನಮ್ಮನ್ನು ರಾಜಕಾರಣಿಗಳು ಆಳುತ್ತಿದ್ದಾರೆ. ಇಲ್ಲಿ ಕೇವಲ ಬ್ರಿಟಿಷರು ಹಾಗೂ ರಾಜಕಾರಣಿಗಳು ಎಂಬ ಎರಡು ಪದಗಳ ವ್ಯತ್ಯಾಸದ ಹೊರತಾಗಿ ಆಡಳಿತದಲ್ಲಾಗಿರಬಹುದು, ಸಾಮಾಜಿಕ ಬೆಳವಣಿಗೆಯಲ್ಲಾಗಿರಬಹುದು ಅಥವಾ ಅಭಿವೃದ್ಧಿಯಲ್ಲಿ ಆಗಿರಬಹುದು ಹೆಚ್ಚಿನ ಬದಲಾವಣೆಗಳನ್ನು ಕಾಣಲಾಗದು. ಇನ್ನೂ ಮುಂದುವರೆದು ಬ್ರಿಟಿಷರ ಆಡಳಿತ ಅವಧಿಯಲ್ಲಿ ಹೆಚ್ಚು ನಂಬಲಾರ್ಹ ಅಭಿವೃದ್ಧಿ ಕಾರ್ಯಗಳು ನಡೆದವು ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಬ್ರಿಟಿಷರ ಗುಲಾಮರಾಗಿದ್ದರೆ ಸ್ವಾತಂತ್ರ್ಯ ನಂತರದಲ್ಲಿ ಈ ರಾಜಕಾರಣಿಗಳು ಎಂಬ ಹೊಸ ವ್ಯವಸ್ಥೆಗೆ ಗುಲಾಮರಾಗಿದ್ದೇವೆ.

ಹಾಗಿದ್ದರೆ ಈ ಗುಲಾಮಗಿರಿಗೆ ಕಾರಣಗಳು ಏನು ಎಂದು ಹುಡುಕುತ್ತಾ ಹೋದರೆ, ಇದರ ಇತಿಹಾಸ ಬಹಳ ವಿಸ್ತಾರವಾಗಿದೆ. ಪೂರ್ವಕಾಲದಿಂದಲೂ ರಾಜರ ಆಡಳಿತಕ್ಕೆ ಒಳಪಟ್ಟಿದ್ದ ಭಾರತವು ರಾಜನನ್ನು ದೈವೀಕರಿಸಿ ಆರಾಧಿಸಿಕೊಂಡು ಬಂದಿದೆ. ವಸಾಹತುಶಾಹಿ ಭಾರತದಲ್ಲಿ ರಾಜನ ಸ್ಥಾನವನ್ನು ಪರಕೀಯರು ಆಕ್ರಮಿಸಿಕೊಂಡರಾದರೂ ಈ ದೈವೀಕೃತ ವ್ಯಕ್ತಿ ಆರಾಧನೆಯ ದಾಸ್ಯ ಮುಂದುವರೆದುಕೊಂಡೇ ಹೋಯಿತು. ಶತಶತಮಾನಗಳಿಂದ ಈ ರೀತಿಯ ವ್ಯಕ್ತಿ ಆರಾಧನೆಯ ಮನಸ್ಥಿತಿಯನ್ನು ಹೊಂದಿದ್ದ ನಾವು, ಒಂದೇ ಸಾರಿಗೆ ನಮಗೆ ಸಿಕ್ಕ ಸಂಪೂರ್ಣ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾಗ ಕೆಲವು ಸ್ವಯಂ ಬಿಂಬಿತ ನಾಯಕರುಗಳು ವ್ಯಕ್ತಿ ಆರಾಧನೆಯ ಮನಸ್ಥಿತಿಯ ಸಹಾಯದೊಂದಿಗೆ ವ್ಯವಸ್ಥಿತವಾಗಿ ನಮ್ಮ ಮೇಲೆ ಈ ಗುಲಾಮಗಿರಿಯನ್ನು ಆಳವಾಗಿ ಊರಿಬಿಟ್ಟರು..

ಭಾರತದ ಮೊದಲ ಪ್ರಧಾನಿ ನೆಹರುವಿನಿಂದ ಹಿಡಿದು ಇಂದಿನ ಪ್ರಧಾನಿ ಮೋದಿಯವರೆಗೂ ಈ ವ್ಯಕ್ತಿ ಆರಾಧನೆಯ ಗುಲಾಮಗಿರಿ ಭಾರತೀಯರ ಮನೆ-ಮನಗಳಲ್ಲಿ ಹಾಸುಹೊಕ್ಕಾಗಿದೆ. ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಪಡೆದ ನಾವು ಇನ್ನೂ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಗುಲಾಮರಾಗಿಯೇ ಇದ್ದೇವೆ ಎಂಬುದು ಬಹಳಷ್ಟು ಭಾರತೀಯರಿಗೆ ತಿಳಿದಿಲ್ಲ. ತಿಳಿಸುವ ಯಾವ ಪ್ರಯತ್ನಗಳು ಕೂಡ ನಡೆದಿಲ್ಲ. ಬ್ರಿಟಿಷರು ಹೊರಗಿನವರು ಎಂಬ ಕಾರಣದಿಂದ ಅವರ ವಿರುದ್ಧ ಹೋರಾಡಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದೆವಾದರೂ ನಮ್ಮೊಳಗೆ ಹುಟ್ಟಿಕೊಂಡಿರುವ ದಾಸ್ಯ ಮನಸ್ಥಿತಿಯೊಂದಿಗೆ ಹೋರಾಡಿ ಇನ್ನೂ ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡಿಲ್ಲ.

ಇದೀಗ ಗ್ರಾಮಪಂಚಾಯಿತಿಯ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೇಲಿನ ಎಲ್ಲಾ ಅಂಶಗಳು ನಿಮಗೆ ಈಗ ಸ್ಪಷ್ಟವಾಗಿ ಮನದಟ್ಟಾಗಬಹುದು. ಮೆರವಣಿಗೆಗಳು, ಫ್ಲೆಕ್ಸ್ ಗಳು, ಬಾಡೂಟಗಳು ಇವೆಲ್ಲವೂ ನಾವು ಇನ್ನು ಎಷ್ಟು ಕೀಳುಮಟ್ಟದ ದಾಸ್ಯಕ್ಕೆ ಬಲಿಯಾಗಿದ್ದೇವೆ ಎಂದು ಬಹಳ ಸ್ಪಷ್ಟವಾಗಿ ತಿಳಿಸುತ್ತದೆ. ಗೆದ್ದಮೇಲೆ ಅಭ್ಯರ್ಥಿಯ ಭಾಷಣವಂತೂ ಸೂಳೆಯು ಪಾತಿವ್ರತ್ಯದ ಕುರಿತಾಗಿ ಮಾತನಾಡಿದಂತೆ ಇರುತ್ತದೆ. ಆದರೂ ಕೂಡ ಆ ವ್ಯಕ್ತಿಯ ಕುರಿತು ಯಾವುದೇ ಕೆಟ್ಟ ಅಭಿಪ್ರಾಯವನ್ನು ಮಂಡಿಸುವುದಿಲ್ಲ. ಏಕೆಂದರೆ ಮುಂದಿನ ನಮ್ಮ ಹಲವಾರು ಕೆಲಸಗಳಿಗೆ ಆತ ಸಿಗದಿದ್ದರೂ ಆತನೇ ಬೇಕು. ಈ ಎಲ್ಲಾ ಹತ್ತು ಹದಿನೈದು ದಿನಗಳ ಸಂಭ್ರಮದ ನಂತರ ನಾವು ಮತ್ತೆ ಆತನ ಮುಖ ಕಾಣಲು ಇನ್ನ 5 ವರ್ಷ ಕಾಯಬೇಕಾಗುತ್ತದೆ.

ಪ್ರತಿ ಬಾರಿಯ ಚುನಾವಣೆಯ ಸಂದರ್ಭದಲ್ಲೂ ಎಲ್ಲರೂ ಹೇಳುವ ಸಾಮಾನ್ಯ ಸುಳ್ಳುಗಳನ್ನು ನಂಬಿ ಹಣ-ಹೆಂಡ ಸೀರೆಗೆ ತಮ್ಮ ಓಟುಗಳನ್ನು ಮಾರುವ ಗುಲಾಮಗಿರಿಯಿಂದ ಹೊರಬರಲು ಮಾರ್ಗವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಮ್ಮ ಮುಂದೆ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದು ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿದ ಐದು ರೂಪಾಯಿ ಡಾಕ್ಟರ್ ಶಂಕರೇ ಗೌಡರಿಗೆ ಸಿಕ್ಕ ಮತಗಳು ಕೇವಲ 10,000. ಆದರೆ ಅವರ ವಿರುದ್ಧ ನಿಂತು ಗೆದ್ದಂತಹ ಕೌಟುಂಬಿಕ ರಾಜಕಾರಣಕ್ಕೆ ಪ್ರಸಿದ್ಧವಾದಂತಹ ಪಕ್ಷದ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್ ಅವರಿಗೆ ಸಿಕ್ಕ ಮತಗಳು 69,000. ಅಂದರೆ ಇಲ್ಲಿಯೇ ನಮಗೆ ಪ್ರಾಮಾಣಿಕ ಸೇವಾ ಮನೋಭಾವಕ್ಕೆ ಸಿಕ್ಕ ಜನಬೆಂಬಲದ ಸ್ಪಷ್ಟ ಚಿತ್ರಣ ಸಿಗುತ್ತದೆ.

ನಿಲ್ಲುವ 3-4 ಅಭ್ಯರ್ಥಿಗಳಲ್ಲಿ ಒಬ್ಬ ಒಳ್ಳೆಯವನಾದರೂ ಆತ ಚುನಾವಣೆಯನ್ನು ಗೆಲ್ಲುವುದು ಕಷ್ಟವೇ ಸರಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಉಳಿದವರೆಲ್ಲರೂ ಹಣ ಹಾಗೂ ಹೆಂಡದ ಮೂಲಕ ಓಟುಗಳನ್ನು ಕೊಳ್ಳುತ್ತಿರಬೇಕಾದರೆ ಈತ ಬರೀ ಅಭಿವೃದ್ಧಿಯ ಮಂತ್ರ ಜಪಿಸಿದರೆ ಆತನ ಠೇವಣಿ ಉಳಿಯುವುದೂ ಸಾಧ್ಯವಿಲ್ಲ. ಹೀಗಾಗಿ ಆತನು ಕೂಡ ಮತಗಳ ಬೇಟೆಯನ್ನು ಆರಂಭಿಸಲೇ ಬೇಕಾಗುತ್ತದೆ. ಕಳೆದ ಚುನಾವಣೆಗಳಲ್ಲಿ ಗಮನಿಸಿದಂತೆ ಸಾಕಷ್ಟು ಊರುಗಳಲ್ಲಿ ಹಣ ನೀಡದೆ ಓಟು ಹಾಕುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ ಮತದಾರರ ಸಂಖ್ಯೆ ಬಹಳಷ್ಟು ನಮಗೆ ಕಾಣಸಿಗುತ್ತದೆ.

ಹೀಗೆ ಮತದಾನ ಒಂದು ಸಂವಿಧಾನಿಕ ಹಕ್ಕಾಗದೇ ಕೇವಲ ಚುನಾವಣೆಯ ಸಂದರ್ಭದಲ್ಲಿ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುವ ಒಂದು ಅವಕಾಶವಾಗಿದೆ. ದುಡ್ಡು ಪಡೆದು ಹಾಕುವ ವೋಟಿಗೆ ಚುನಾವಣೆಯ ನಂತರ ಜನಪ್ರತಿನಿಧಿಯನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲದಿರುವುದರಿಂದ ಜನಪ್ರತಿನಿಧಿಗಳೂ ಸಿಕ್ಕಷ್ಟು ದೋಚುವ ಪ್ರಕ್ರಿಯೆಯಲ್ಲಿ ಇದ್ದಾರೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಅದೆಷ್ಟೇ ಅರಿವು ಮೂಡಿಸುವ ಪ್ರಯತ್ನ ಮಾಡಿದರೂ ಕೂಡ ಅದು ವಿಫಲವಾಗುತ್ತಿರುವುದು ಭಾರತದ ಸರ್ವತೋಮುಖ ಬೆಳವಣಿಗೆಗೆ ಬಹುದೊಡ್ಡ ಪೆಟ್ಟಾಗಿದೆ. ವಿದ್ಯಾವಂತರೇ ಈ ರಾಜಕೀಯ ದಾಸ್ಯದ ಕಟ್ಟಾಳುಗಳ ಆಗಿರುವುದರಿಂದ ಇದು ಇನ್ನೂ ಬೃಹದಾಕಾರದಲ್ಲಿ ಬೆಳೆಯುತ್ತದೆಯೇ ಹೊರತು ಅದರಿಂದ ಹೊರಬರುವ ಯಾವ ಪ್ರಯತ್ನಗಳು ಆಗುತ್ತಿಲ್ಲ.

ದೇಶವನ್ನು ಮುನ್ನಡೆಸಬೇಕಾದ ಯುವಜನತೆಯೇ ಈ ರೀತಿಯ ಗುಲಾಮಗಿರಿಗೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೂ ಕೂಡ ನಾವು ಈ ದಾಸ್ಯವನ್ನು ಉಡುಗೊರೆಯಾಗಿ ನೀಡುವ ಸಾಧ್ಯತೆ ಇದೆ. ಆದ್ದರಿಂದ ಇನ್ನಾದರೂ ಈ ಸಾಮಾಜಿಕ ಮಾಧ್ಯಮಗಳ ಪ್ರಪಂಚದಿಂದ ಹೊರಬಂದು ನಿಜವಾದ ಆಡಳಿತ ವ್ಯವಸ್ಥೆಯ ಮೌಲ್ಯ ಆದರ್ಶಗಳನ್ನುಅಳವಡಿಸಿಕೊಂಡು ದೇಶವನ್ನು ಮುನ್ನಡೆಸಬೇಕಾದ ತುರ್ತು ಅಗತ್ಯ ಇದೆ. ತಿಳಿದವರು ತಿಳಿಯದವರಿಗೆ ತಿಳಿಸಿ ಅರಿವನ್ನು ಮೂಡಿಸಿ ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಅರಿತು ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವ ಅವಶ್ಯಕತೆಯೂ ಇದೆ.

ಪ್ರಮೋದ್ ತೀರ್ಥಹಳ್ಳಿ

LEAVE A REPLY

Please enter your comment!
Please enter your name here