ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಿಂಚಿ ಮರೆಯಾದ ʼಸೂರ್ಯʼಪ್ರಭೆ

0
260
Tap to know MORE!

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ವ್ಯಕ್ತಿಗಳಿಂದ ಹಿಡಿದು ಸಾಮಾನ್ಯರವರೆಗೆ ಅದೆಷ್ಟೋ ಮಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಂತವರಲ್ಲಿ ಶಾಲಾ ಶಿಕ್ಷಕರಾಗಿದ್ದುಕೊಂಡೇ ಶಸ್ತ್ರಾಸ್ತ್ರ ಕ್ರಾಂತಿಯ ಮೂಲಕ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿದ ಸೂರ್ಯಸೇನ್ ಒಬ್ಬರು.

ಸೇನ್ 1894ರ ಮಾರ್ಚ್ 22ರಂದು ಚಿತ್ತಗಾಂಗ್‌ನ ರೋಜನ್ ಉಪಜಿಲಾದಲ್ಲಿ ಜನಿಸಿದರು. ಬಾಲ್ಯದಿಂದಲೇ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಮುಂದೆ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಅವರು 1916 ರಲ್ಲಿ ಬಿಎ ವಿದ್ಯಾರ್ಥಿಯಾಗಿದ್ದಾಗ ರಾಷ್ಟ್ರೀಯವಾದಿ ಆದರ್ಶಗಳಿಂದ ಪ್ರಭಾವಿತರಾದರು. ಬೆಹ್ರಾಂಪೋರ್ ಕಾಲೇಜಿನಲ್ಲಿ 1918ರಲ್ಲಿ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚಿತ್ತಗಾಂಗ್ ಶಾಖೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಾಗಿ 2 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ನಂತರ ಬ್ರಿಟಿಷರ ವಿರುದ್ಧ ದಂಗೆ ಏಳಲು ಶಸ್ತ್ರಾಸ್ತ್ರಗಳ ಕೊರತೆ ಕಂಡಾಗ ಇವರು ಬ್ರಿಟಿಷರ ಆಯುಧಗಳನ್ನೇ ದೋಚಲು ನಿರ್ಧರಿಸಿದರು.

ಇದನ್ನೂ ಓದಿ : ಸಾಹಸಿ ಬಟುಕೇಶ್ವರ್ ದತ್‌ಗೆ ಸಿಹಿಯಾಗಲಿಲ್ಲ ಸ್ವಾತಂತ್ರ್ಯ

1930 ರ ಎಪ್ರಿಲ್ 18 ರಂದು ಚಿತ್ತಗಾಂಗ್ ಶಸ್ತ್ರಾಸ್ತ್ರ ಸಂಗ್ರಹದ ಮೇಲೆ ದಾಳಿ ನಡೆಸಲು ಸೇನ್ ಕ್ರಾಂತಿಕಾರಿಗಳ ಗುಂಪನ್ನು ಮುನ್ನಡೆಸಿದರು. ಇದರ ಉದ್ದೇಶ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವುದು ಮತ್ತು ನಗರದ ಸಂವಹನ ವ್ಯವಸ್ಥೆಯನ್ನು ನಾಶಪಡಿಸುವುದಾಗಿತ್ತು. ಆ ಮೂಲಕ ಬಾಕಿ ಉಳಿದ ಪ್ರದೇಶಗಳ ಮೇಲೆ ಬ್ರಿಟಿಷ್‌ ಆಡಳಿತದ ಹತೋಟಿಯನ್ನು ತಪ್ಪಿಸುವುದಾಗಿತ್ತು. ಆದರೆ ಪ್ರಯತ್ನ ವಿಫಲವಾಯಿತು.

1930 ರಲ್ಲಿ ಚಿತ್ತಗಾಂಗ್ ದಾಳಿಯಲ್ಲಿ 80ಕ್ಕೂ ಹೆಚ್ಚು ಬ್ರಿಟಿಷ್ ಸೈನಿಕರು ಮತ್ತು 12 ಕ್ರಾಂತಿಕಾರಿಗಳು ಕೊಲ್ಲಲ್ಪಟ್ಟರು. ಸೂರ್ಯ ಸೇನ್ ಮತ್ತು ಉಳಿದ ಕ್ರಾಂತಿಕಾರಿಗಳು ಸಣ್ಣ ಗುಂಪುಗಳಾಗಿ ಅಡಗಿಕೊಂಡರು. ಸೇನ್ ಅಜ್ಞಾತವಾಸದಲ್ಲಿದ್ದರು ಮತ್ತು ಮಾರುವೇಷದಲ್ಲಿ ಸ್ಥಳ ಬದಲಿಸುತ್ತಿದ್ದರು.
ಸರ್ಕಾರಿ ಆಸ್ತಿಪಾಸ್ತಿಯ ಮೇಲೆ ದಾಳಿ ನಡೆಸಿ ಅವರು ತಮ್ಮ ಮಿತ್ರನಾದ ನೇತ್ರಸೇನ್ ಎಂಬವರ ಮನೆಯಲ್ಲಿ ಅಡಗಿಕೊಂಡು ತಲೆಮರೆಸಿಕೊಂಡರು. ಆದರೆ ನೇತ್ರಸೇನ್ ಬ್ರಿಟಿಷರ ದುಡ್ಡಿನ ಆಸೆಗೆ ಬಲಿಯಾಗಿ ಇವರನ್ನು ಬಂಧಿಸಲು ಬ್ರಿಟಿಷರಿಗೆ ಸಹಕರಿಸುತ್ತಾನೆ. ಸೇನ್ ಅವರನ್ನು ಎಪ್ರಿಲ್ 16, 1933ರಂದು ಬಂಧಿಸಿ ಚಿತ್ರಹಿಂಸೆ ನೀಡಿದ ಬ್ರಿಟಿಷರು ಒಂದು ವರ್ಷದ ಬಳಿಕ ಜನವರಿ 12 ರಂದು ಗಲ್ಲಿಗೇರಿಸಿದರು.

ಸೇನ್ ಕೊನೆಯದಾಗಿ ತಮ್ಮ ಗೆಳೆಯರಿಗೆ ಪತ್ರವೊಂದನ್ನು ಬರೆದಿದ್ದರು ಅದರಲ್ಲಿ ಅವರು “ಸಾವು ನನ್ನ ಬಾಗಿಲನ್ನು ತಟ್ಟುತ್ತಿದೆ.ನನ್ನ ಮನಸ್ಸು ಶಾಶ್ವತತೆಯತ್ತ ಹಾರಿಹೋಗುತ್ತಿದೆ. ಅಂತಹ ಆಹ್ಲಾದಕರವಾದ ಸಮಾಧಿಯಲ್ಲಿ ,ಅಂತಹ ಗಂಭೀರ ಕ್ಷಣದಲ್ಲಿ ನಾನು ನಿಮಗಾಗಿ ನನ್ನ ಸುಂದರ ಕನಸೊಂದನ್ನು ಬಿಟ್ಟು ಹೋಗುತ್ತಿದ್ದೇನೆ. ‘ಬಂಧ ಮುಕ್ತ ಭಾರತದ ಕನಸು ‘. 1930 ರ ಎಪ್ರಿಲ್ 18 ಚಿತ್ತಗಾಂಗ್ ದಂಗೆಯ ದಿನವನ್ನು ಎಂದಿಗೂ ಮರೆಯಬೇಡಿ ” ಎನ್ನುತ್ತಾ ಆ ಮಹಾನ್ ಚೇತನ ತನ್ನ ಸುಂದರ ಕನಸ್ಸುಗಳನ್ನು ತನ್ನ ಗೆಳೆಯರಿಗೆ ಒಪ್ಪಿಸಿ ಮರೆಯಾಯಿತು.

ಸುರೇಶ್‌ ರಾಜ್
ವಿವಿ ಕಾಲೇಜು ಮಂಗಳೂರು

LEAVE A REPLY

Please enter your comment!
Please enter your name here