ಸ್ವಾವಲಂಬನೆಯು, ಸ್ವಾಯತ್ತ ಪ್ರಜ್ಞೆಯೂ..

0
180
Tap to know MORE!

ನಿಸರ್ಗದಲ್ಲಿ ಪರಿಪೂರ್ಣ ಸ್ವಾವಲಂಬನೆ ಎಂಬುದು ಇಲ್ಲ. ಪ್ರತಿ ಜೀವರಾಶಿಯೂ ಅವಲಂಬನೆಯ ಸರಪಣಿ. ಸ್ವಾವಲಂಬನೆಯ ವ್ಯಾಪ್ತಿ ಎಷ್ಟು ಮತ್ತು ಹೇಗೆ ಎಂಬುದನ್ನು ವಿವೇಚಿಸಬೇಕಾಗಿದೆ. ನಿಸರ್ಗದ ನಂಟನ್ನು ಕಳಚುತ್ತಾ ನಾಗರಿಕ ಪ್ರಪಂಚಕ್ಕೆ ಮನುಷ್ಯ ಬಂದಾಗ ತಲೆದೋರಿದ ಸಮಸ್ಯೆಗೆ ಕಂಡುಕೊಂಡ ಸಾರ್ವತ್ರಿಕ ಪರಿಹಾರವೇ ಸ್ವಾವಲಂಬನೆ. ಭಾರತದ ಸಮಾಜ ಸುಧಾರಕರು, ಸಂತಶ್ರೇಷ್ಠರೆಲ್ಲಾ ಸುಧಾರಣೆಯ ಹಾದಿಯಲ್ಲಿ ಸ್ವಾವಲಂಬನೆಯ ಪರಿಹಾರವನ್ನು ಪಠಿಸಿದವರು.
ನಾರಾಯಣ ಗುರು, ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳಲ್ಲಿ ಸ್ವಾವಲಂಬನೆಯ ವಿಭಿನ್ನ ವಿಶಿಷ್ಟ ಸಾಧ್ಯತೆಗಳು ತೆರೆದುಕೊಂಡಿದೆ. ಬಹುತೇಕ ಆರ್ಥಿಕ ಸ್ವಾತಂತ್ರ್ಯವನ್ನು ಪರಿಚಯಿಸುತ್ತಾ ಸಾಮಾಜಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ದಾರಿಯಾಗಿತ್ತು. ಗಾಂಧೀಜಿಯವರು ತಮ್ಮ ದೈನಂದಿನ ಕೆಲಸಗಳನ್ನು ತಾನೇ ಮಾಡುತ್ತಾ ಸ್ವಾವಲಂಬನೆಯ ಅರ್ಥವನ್ನು ವಿಸ್ತರಿಸಿದರು. ಕೆಲವರು ಸ್ವಾವಲಂಬನೆ ಎಂದರೆ ತನ್ನ ಜೀವನ ನಿರ್ವಹಣೆಗೆ ಉದ್ಯೋಗ ಎಂದು ಗ್ರಹಿಸಿ ಮುಂದಡಿಯಿಟ್ಟರೆ; ಇನ್ನು ಕೆಲವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಅವಲಂಬನೆಯೇ ಆಗಿದೆ. ಸ್ವಂತ ಉದ್ದಿಮೆಯನ್ನು ಆರಂಭಿಸಿ ತನ್ನ ಲೆಕ್ಕ ತಾನೇ ಬರೆದಿಡುವುದು ಮಾತ್ರ ಸ್ವಾವಲಂಬನೆ ಎಂಬ ವ್ಯಾಖ್ಯಾನವನ್ನು ಕೃತಿಗೊಳಿಸಿದವರು ಇದ್ದಾರೆ.

ಆದರೆ ಕಳೆದ ಕೆಲವು ತಿಂಗಳುಗಳಿಂದ ಮನವಕೋಟಿ ಬದುಕನ್ನು ಕಾಣದ ಜೀವಿಯೊಂದು ಬುಡಮೇಲುಗೊಳಿಸಿದೆ. ಒಟ್ಟು ಜೀವನದ ದೃಷ್ಟಿಕೋನವೇ ಬದಲಾಗಿದೆ. ಅನ್ನ ಆಹಾರವೇ ಪ್ರಧಾನ ಎಂದು ಭಾವಿಸಿ ಆಕಾಶ ನೋಡುತ್ತಲೇ ನೆಲದೆಡೆಗೆ ಮುಖ ಮಾಡಿದ್ದಾರೆ. ಅದುವೇ ಶಾಶ್ವತ ಪರಿಹಾರವೇ ಎಂದಾದರೆ ಪ್ರಕೃತಿಯ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಎದುರಿಸಿ ಸಹಿಸಿ ಕೃಷಿಕ ಬದುಕಬೇಕಾಗುತ್ತದೆ.

ಎರಡು ದಶಕಗಳ ಹಿಂದೆ ಜಾಗತೀಕರಣದ ಸಾಧಕ ಬಾಧಕಗಳನ್ನು ಪಠಿಸುತ್ತಾ ವಿಚಾರ ಸಂಕಿರಣ ಮತ್ತು ಸಂಶೋಧನೆಗಳು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಶೋಧನೆಗಳ ಫಲಿತಾಂಶಗಳ ಆಧಾರದಲ್ಲಿ ಜಾಗತೀಕರಣದ ಅಡ್ಡಪರಿಣಾಮಗಳಿಂದ ಜನಸಮೂಹ ಪಾರಾಗುವ ಪಾಠ ಕಲಿತಿಲ್ಲ. ಈ ಬಗೆಯ ಸಂಶೋಧನೆ – ಚರ್ಚೆಗಳ ಬಹುದೊಡ್ಡ ದೋಷವೇ ಇದು ಅಥವಾ ಜಾಗತೀಕರಣ ಒಡ್ಡಿದ ಮಾರುಕಟ್ಟೆಯ ಮೋಹಕ ಮಾಯಜಾಲದಲ್ಲಿ ಬುದ್ಧಿಗೆ ಮಂಕು ಕವಿದಿತ್ತು ಎನ್ನಬೇಕಷ್ಟೇ.

ಜಾಗತೀಕರಣದ ಒಳಸುಳಿಯಿಂದ ಮಾಡಿದ ಮಾರುಕಟ್ಟೆ ಹೆಚ್ಚು ಸಂಪಾದಿಸುವಂತೆ ಮತ್ತು ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತಾ ಸಂಪಾದನೆಯ ಸ್ಪರ್ಧೆಗೆ ಜನಮನವನ್ನು ಒಡ್ಡಿತು. ಸ್ಪರ್ಧೆ ಎಂದ ಮೇಲೆ ಹೋಲಿಕೆ- ಅತೃಪ್ತಿ ಇದ್ದದ್ದೇ. ಉದ್ಯೋಗ ಅಥವಾ ಉದ್ದಿಮೆಯ ಸ್ವಾವಲಂಬನೆಗೆ ಒಳಗಾದವರು ಇಂದು ತ್ರಿಶಂಕು ಸ್ವರ್ಗವನ್ನು ಸೃಷ್ಟಿಸುವಂತೆ ಪ್ರಕೃತಿಗಿಂತಲೂ ಹೆಚ್ಚಾಗಿ ಜಾಗತೀಕರಣ ಸೃಷ್ಟಿಸಿದ ಮಾರುಕಟ್ಟೆ ಪ್ರಪಂಚ ದೊಡ್ಡ ಕೊಡುಗೆಯಾಗಿದೆ. ಕೂಲಿಕಾರ್ಮಿಕನಿಂದ ಹಿಡಿದು ಬಹುಕಂಪೆನಿಗಳ ಒಡೆಯನವರೆಗೆ ನಾಗಾಲೋಕ ನಿಲ್ಲಿಸು ಎಂಬಂತೆ ಮನೆಯೊಳಗೆ ಕೆಲಕಾಲ ಕೂಡಿ ಹಾಕಿದೆ. ಮಾತಾಡುವುದು ಸಾಕು ಎಂಬಂತೆ ಮುಖಗವಸು ಹಾಕಿಸಿದೆ.
ನಗರದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ವೇತನ ಅರ್ಧಕ್ಕೆ ಕುಸಿದಿದೆ. ಇದು ಸಹಜ, ಆದರೆ ಅರ್ಧಕ್ಕೆ ಕುಸಿದಾಗ ಮಾನಸಿಕವಾಗಿಯೂ ಕುಸಿಯುವಂತೆ ಮಾಡುವುದು ಮಾತ್ರ ಆತಂಕದ ಸಂಗತಿ. ಭೂಸುಧಾರಣ ಕಾನೂನು ಬರುವ ಮೊದಲು ತಾವು ಹೊಟ್ಟೆಗೆ ಬಟ್ಟೆ ಕಟ್ಟಿ ಮಕ್ಕಳ ಹಸಿವನ್ನು ಹೇಗಾದರೂ ನೀಗಿಸಿ ಬಾಳಿ ತೋರಿಸಿದ ನಿದರ್ಶನವನ್ನು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆದರೆ ಇಂದು ಹೊಟ್ಟೆ ಬಟ್ಟೆಗೆ ಬೇಕಾದಷ್ಟು ಇದ್ದರೂ ನಾವ್ಯಾಕೆ ಕುಸಿಯುತ್ತೇವೆ ಎಂಬುದನ್ನು ವಿವೇಚಿಸಬೇಕಾಗಿದೆ.

ಮಾರುಕಟ್ಟೆಯ ವಿಷವರ್ತುಲದಲ್ಲಿ ಎಲ್ಲಾ ಆರ್ಥಿಕವರ್ಗದವರು ಸಿಲುಕಿ ತಮ್ಮ ಸುಂದರ ಬದುಕನ್ನು ಸಂಕೀರ್ಣ ಗೊಳಿಸಿದ್ದು ಸ್ಪಷ್ಟವಾಗುತ್ತದೆ. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕೂಲಿಕಾರ್ಮಿಕನ ಸ್ಥಿತಿಗತಿಗಳನ್ನು ಅವಲೋಕಿಸುವಾಗ ಒತ್ತಡದ ಸಂಕಷ್ಟದಲ್ಲಿ ಸಿಲುಕಿರುವುದು ಸ್ಪಷ್ಟವಾಗುತ್ತದೆ. ಇದು ನಾಲ್ಕೈದು ದಶಕಗಳ ಹಿಂದೆ ನಮ್ಮ ಹಿರಿಯರು ಅನುಭವಿಸಿದ ಹಸಿವಿನ ಸಮಸ್ಯೆಗಿಂತ ದಾರವಾ. ‘ಮನೆಕಟ್ಟಿ ನೋಡು ಮದುವೆ ಆಗಿ ನೋಡು’ ಎಂಬ ಗಾದೆ ಮಾತು ಇದೆ. ಬಹುತೇಕರದ್ದು ಮನೆ ಮತ್ತು ಮದುವೆಯ ದುಂದುಗಾರಿಕೆಯೇ ಕಾರಣ.

ಬಡವರಿಗೆ ಮನೆ ಕಟ್ಟಲು ಸರಕಾರ ಆರ್ಥಿಕ ನೆರವು ನೀಡುತ್ತದೆ. ಆದರೆ ವ್ಯಕ್ತಿಯ ಮನೆಯ ಕನಸು ಆ ಆರ್ಥಿಕ ಮೊತ್ತವನ್ನು ಮೀರಿ ಇರುತ್ತದೆ. ಮನೆ ಅರ್ಧಕ್ಕೆ ನಿಂತಾಗ ಸ್ವ ಸಹಾಯ ಸಂಘಗಳ ಮೂಲಕ ಸಾಲ ಪಡೆದು ಒಂದಷ್ಟು ಮುಂದುವರಿಸುತ್ತಾನೆ. ಆದರೂ ದಡ ಸೇರುವುದಿಲ್ಲ. ಸಿಕ್ಕಲೆಲ್ಲ ಸಾಲ ಪಡೆದು ಮನೆ ಪೂರ್ಣಗೊಳಿಸುತ್ತಾನೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೊಂದು ರೂಪದ ಮಾರುಕಟ್ಟೆಯಾಗಿ ರೂಪುತಾಳುತ್ತಿದೆ. ಮನುಷ್ಯನ ಆಧ್ಯಾತ್ಮ ಉನ್ನತಿಯ ಕೆಲಸಗಳಿಂದ ಸ್ಥಾವರಗಳನ್ನು ಕಟ್ಟಿ ಉತ್ಸವ ಮಾಡುವುದೇ ಅಧಿಕವಾಗುತ್ತಿದೆ. ರಾಜಕಾರಣದಲ್ಲಿ ಸಮಾಜ ಸೇವೆ ನೇಪಥ್ಯಕ್ಕೆ ಸರಿದು ಸಂಪತ್ತು ಮತ್ತು ಪ್ರತಿಷ್ಠೆಯ ಕಣವಾಗುತ್ತಿದೆ. ಸರಿದಾರಿಯಲ್ಲಿ ಮನುಷ್ಯನನ್ನು ಕೊಂಡುಹೋಗಬೇಕಾದ ಮತಧರ್ಮಗಳು ಸ್ವಂತ ಬುದ್ಧಿಯನ್ನು ದುರ್ಬಲಗೊಳಿಸಿ ಸಂಕುಚಿತನನ್ನಾಗಿಸಿದೆ.

ಇಂತಹ ವಿಪರೀತ ವಾತಾವರಣದಿಂದ ಹೊರಬರಲು ಆರ್ಥಿಕ ಸ್ವಾವಲಂಬನೆಯಷ್ಟೇ ಸಾಲದು ಸ್ವಾಯತ್ನಪ್ರಜ್ಞೆಯು ಬೇಕು. ಮಾರುಕಟ್ಟೆಯ ಬಹುರೂಪದಂತಿರುವ ಯಾವ ವ್ಯವಸ್ಥೆಯಿಂದಲೂ ಅದನ್ನು ನಿರೀಕ್ಷಿಸುವುದು ಅಸಾಧ್ಯ. ಸ್ವಾಯತ್ನಪ್ರಜ್ಞೆಯೊಂದೇ ಪ್ರಶಾಂತ ತೃಪ್ತ ಬಾಳಿನ ದಾರಿ. ಆ ದಾರಿಯನ್ನು ಕ್ರಮಿಸಿದಂತೆ ತಡೆಯುವ ಪ್ರಯತ್ನಗಳನ್ನು ಮಾರುಕಟ್ಟೆಯ ಬಹುರೂಪಗಳು ಮಾಡುತ್ತಿರುತ್ತವೆ. ದುರ್ಬಲ ಮನಸ್ಕರು ದುರ್ಬಲಗೊಳಿಸುತ್ತಲೇ ಇರುತ್ತಾರೆ ಎಂಬ ಪ್ರಜ್ಞೆಯೊಂದಿಗೆ ಸ್ವಾಯತ್ನಪ್ರಜ್ಞೆಯಿಂದ ಹೆಜ್ಜೆ ಹಾಕುವುದೇ ಮುಂದಿನ ದಾರಿ

ಡಾ. ಯೋಗೀಶ ಕೈರೋಡಿ

LEAVE A REPLY

Please enter your comment!
Please enter your name here