ಹಲವು ರಾಜ್ಯಗಳು ಪಟಾಕಿ ನಿಷೇಧಿಸಿರುವ ಬೆನ್ನಲ್ಲೇ ಹಸಿರು ಪಟಾಕಿಗಳು ಮುನ್ನೆಲೆಗೆ ಬಂದಿವೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮುಕ್ತವಾಗಿ ಹಸಿರು ಪಟಾಕಿ ಬಳಸಲು ಕೋರಿದ್ದಾರೆ. ಹಾಗಾದರೆ ಹಸಿರು ಪಟಾಕಿ ಎಂದರೇನು? ಸಾಮಾನ್ಯ ಪಟಾಕಿಗಳಿಗಿಂತ ಇವುಗಳು ಹೇಗೆ ಭಿನ್ನ? ಎಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ:
ಅತೀವ ವಾಯುಮಾಲಿನ್ಯದ ಕಾರಣದಿಂದಾಗಿ 2018ರಲ್ಲಿ ಸರ್ವೋಚ್ಛ ನ್ಯಾಯಾಲಯ ದೆಹಲಿಯಲ್ಲಿ ಸಾಂಪ್ರದಾಯಿಕ ಪಟಾಕಿಗಳನ್ನು ನಿಷೇಧಿಸಿ ಹಸಿರು ಪಟಾಕಿ ಬಳಸಲು ತಿಳಿಸಿತ್ತು. ಆಗ ಮಾರುಕಟ್ಟೆಗೆ ಪ್ಲವರ್ ಪ್ಲಾಟ್ಸ್ ಮತ್ತು ಸ್ಪಾರ್ಕ್ಲರ್ಸ್ ಎಂಬ ಎರಡು ಹಸಿರು ಪಟಾಕಿಗಳು ಚಿತ್ತಾರ ಮೂಡಿಸಿದ್ದವು.
ಹಸಿರು ಪಟಾಕಿಗಳೆಂದರೇನು?
ಹಸಿರು ಪಟಾಕಿಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ ಮತ್ತು ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ, ವಾಯುಮಾಲಿನ್ಯವನ್ನು ಬಹಳಷ್ಟು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಕೃಷಿ ಮಸೂದೆಗಳು – ಅದರಲ್ಲೇನಿದೆ ? ಕೃಷಿಕರಿಗೆ ಹೇಗೆ ಸಹಕಾರಿ? ಯಾಕಿಷ್ಟು ವಿರೋಧ?
ಇಂಡಿಯನ್ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಅಭಿವೃದ್ಧಿಪಡಿಸುವ ಹಸಿರು ಪಟಾಕಿಗಳಲ್ಲಿ ಫ್ಲವರ್ ಪಾಟ್ಗಳು, ಪೆನ್ಸಿಲ್ಗಳು, ಮಿಂಚು ಮತ್ತು ಚಕ್ರಗಳು ಸೇರಿವೆ. ಹಸಿರು ಪಟಾಕಿಯು ಪರಿಸರ ಸ್ನೇಹಿಯಾಗಿದ್ದು, ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಅಭಿವೃದ್ಧಿಪಡಿಸಲಾಗಿದೆ.
ಇದು ಸಿಎಸ್ಐಆರ್ ಕಲ್ಪನೆ
ಹಸಿರು ಪಟಾಕಿಗಳನ್ನು ಉತ್ಪಾದಿಸುವ ಕಲ್ಪನೆಯು ಸಿಎಸ್ಐಆರ್ ಲ್ಯಾಬ್ಗಳದ್ದಾಗಿದೆ. ಇದನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ್ ವರ್ಧನ್ ರವರು ಪ್ರಸ್ತಾಪಿಸಿದ್ದರು. ಈ ಹಸಿರು ಪಟಾಕಿಗಳನ್ನು ಸಿಎಸ್ಐಆರ್ ಲ್ಯಾಬ್ನ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಅಭಿವೃದ್ಧಿಪಡಿಸಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ…
- ಹಸಿರು ಪಟಾಕಿಗಳು ಸಾಂಪ್ರದಾಯಿಕ ಪಟಾಕಿಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ.
- ಬೆಲೆ ದುಬಾರಿ
- ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಹೊಗೆ ಸೂಸುತ್ತವೆ
- ಹಸಿರು ಪಟಾಕಿಗಳು ತೀರಾ ಅಪಾಯಕಾರಿಯಲ್ಲ.
- ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಶೇ.30 ರಷ್ಟು ಕಡಿಮೆ ಮಲಿನ ಉಂಟುಮಾಡುತ್ತವೆ.
ಈ ಕಾರಣಗಳಿಂದಾಗಿ ಹಸಿರು ಪಟಾಕಿ ಬಳಕೆಯತ್ತ ಸಾರ್ವಜನಿಕರು ಗಮನಹರಿಸಬೇಕು ಎಂಬುದು ಹಲವಾರು ತಜ್ಞರು ಹಾಗೂ ಪರಿಸರಾಸಕ್ತರ ಕೂಗು.
ಭಿನ್ನತೆಯನ್ನು ವೈಜ್ಞಾನಿಕವಾಗಿ ವಿವರಿಸುವುದಾದರೆ….
ಸಾಂಪ್ರದಾಯಿಕ ಪಟಾಕಿಗಳಲ್ಲಿ ಹೇರಳವಾಗಿ ಬಳಸುವ ಅಲ್ಯೂಮಿನಿಯಂ, ಲೀಥಿಯಂ, ಬೇರಿಯಂ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಇಂಗಾಲ ಮುಂತಾದ ರಾಸಾಯನಿಕಗಳನ್ನು ಹಸಿರು ಪಟಾಕಿಗಳಲ್ಲಿ ಬಳಸಲಾಗುವುದಿಲ್ಲ. ಆ ಕಾರಣ ಹಸಿರು ಪಟಾಕಿಗಳು ಮಾಲಿನ್ಯದ ಪ್ರಮಾಣವನ್ನು ಶೇ.30 ರಿಂದ 90 ಪ್ರತಿಶತ ಕಡಿಮೆಗೊಳಿಸುತ್ತದೆ. ಆದರೆ ಅವುಗಳಿಂದ ಹೊರ ಬರುವ ಬೆಳಕು ಮತ್ತು ಶಬ್ಧದಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಸಾಮಾನ್ಯ ಪಟಾಕಿಗಳಂತೆ, ಹಸಿರು ಪಟಾಕಿಗಳೂ ಸಹ 105-110 db ದಷ್ಟು ಸದ್ದು ಮಾಡುತ್ತವೆ.
ಮೂಲತಃ, ಹಸಿರು ಪಟಾಕಿಗಳು ಬೇರಿಯಂ ರಾಸಾಯನಿಕವನ್ನು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಇದನ್ನು ಪಟಾಕಿಗಳಲ್ಲಿ ಹಸಿರು ಬಣ್ಣವನ್ನು ಸೇರಿಸಲು ಬಳಸಲಾಗುತ್ತದೆ. ಬೇರಿಯಂ ವಿಷಕಾರಿಯಾಗಿದ್ದು, ಸುಟ್ಟಗಾಯಗಳು ಮತ್ತು ಸಾವಿಗೆ ಕಾರಣವಾಗಬಹುದು. ಹಸಿರು ಪಟಾಕಿಗಳಲ್ಲಿ ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಒಂದು ಆಕ್ಸಿಡೆಂಟ್ ಆಗಿ ಬಳಸುವುದರಿಂದ, ಕನಿಷ್ಠ ಶೇ.30 ಪ್ರತಿಶತದಷ್ಟು ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.
ಗುರುತಿಸುವುದು ಹೇಗೆ?
ಪಟಾಕಿಗಳ ಮೇಲೆ ನಮೂದಿಸಲಾಗಿರುವ ಲೋಗೊ(ಚಿಹ್ನೆ) ಮತ್ತು ಕ್ಯೂ ಆರ್ ಕೋಡ್ ಗಳ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದು. ಸಾಂಪ್ರದಾಯಿಕ ಪಟಾಕಿಗಳ ಮೇಲೆ ಈ ವಿಶಿಷ್ಟ ಕ್ಯೂ ಆರ್ ಕೋಡ್ ಗಳು ಇರುವುದಿಲ್ಲ.