ರೋಹ್ಟಾಂಗ್ (ಹಿಮಾಚಲ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಹಿಮಾಚಲ ಪ್ರದೇಶದ ರೋಹ್ಟಾಂಗ್ ನಲ್ಲಿವಿಶ್ವದಲ್ಲಿಯೇ ಅತಿ ಉದ್ದದ (9.02 ಕಿಲೋ ಮೀಟರ್) ಹೆದ್ದಾರಿ ಸುರಂಗ ಮಾರ್ಗ ಅಟಲ್ ಸುರಂಗ ಹೆದ್ದಾರಿಯನ್ನು ಉದ್ಘಾಟಿಸಿದರು.
ಈ ಸುರಂಗ ಮಾರ್ಗ ಮನಾಲಿಯಿಂದ ಲೇಹ್-ಸ್ಟಿತಿ ಕಣಿವೆಯನ್ನು ಸಂಪರ್ಕಿಸುತ್ತಿದ್ದು, ಇದು ವಿಶ್ವದ ಅತ್ಯಂತ ಉದ್ದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ. ಈ ಸುರಂಗ ಮಾರ್ಗದಿಂದಾಗಿ ಪ್ರಯಾಣಿಕರಿಗೆ ಮನಾಲಿ ಮತ್ತು ಲೇಹ್ ಮಧ್ಯೆ ಸುಮಾರು 5 ಗಂಟೆಗಳ ಪ್ರಯಾಣ ಕಡಿತವಾಗಲಿದೆ.
ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆಯ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದ್ದು, ಈ ಸುರಂಗ ಮಾರ್ಗದ ನಿರ್ಮಾಣ ವೆಚ್ಚ 4 ಸಾವಿರ ಕೋಟಿ ರೂಪಾಯಿಗಳಾಗಿದೆ. ವರ್ಷವಿಡೀ ಇದು ಸಂಚಾರಕ್ಕೆ ಮುಕ್ತವಾಗಿರುತ್ತದೆ.
ಇದನ್ನೂ ನೋಡಿ : ಅಂಡಮಾನ್ ನಿಕೋಬಾರ್ ದ್ವೀಪರಾಷ್ಟ್ರಕ್ಕೆ ವೇಗದ ಇಂಟರ್ನೆಟ್ ಸೌಲಭ್ಯ ಒದಗಿಸುವ ಯೋಜನೆ ಉದ್ಘಾಟಿಸಿದ ಮೋದಿ
ಸುರಂಗ ಹೆದ್ದಾರಿಯೊಳಗೆ ಪ್ರತಿ 500 ಮೀಟರ್ಗಳಲ್ಲಿ ಒಂದು ತುರ್ತು ನಿರ್ಗಮನವಿರುತ್ತದೆ. ಪ್ರತಿ 250 ಮೀಟರ್ ಗೆ ಸಿಸಿಟಿವಿ ಕ್ಯಾಮರಾದೊಂದಿಗೆ ದೂರ ಪ್ರಸಾರದ ವ್ಯವಸ್ಥೆಯಿದ್ದು, ಸ್ವಯಂಚಾಲಿತ ಪತ್ತೆಹಚ್ಚುವ ವ್ಯವಸ್ಥೆಯಿರುತ್ತದೆ. ಪ್ರತಿ 60 ಮೀಟರ್ ಗೆ ಅಗ್ನಿ ಶಾಮಕ ವ್ಯವಸ್ಥೆ, ಪ್ರತಿ 150 ಮೀಟರ್ ಗೆ ಟೆಲಿಫೋನ್ ವ್ಯವಸ್ಥೆ, ವಾಯು ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಪ್ರತಿ ಒಂದು ಕಿಲೋ ಮೀಟರ್ ಗೆ ಇರುತ್ತದೆ.
ಹೆದ್ದಾರಿ ಸುರಂಗ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಗಡಿಭಾಗದ ಮೂಲ ಸೌಕರ್ಯಕ್ಕೆ ಅಟಲ್ ಸುರಂಗ ಹೊಸ ಶಕ್ತಿಯನ್ನು ನೀಡಲಿದೆ. ವಿಶ್ವದರ್ಜೆಯ ಗುಣಮಟ್ಟದ ಗಡಿ ಸಂಪರ್ಕಕ್ಕೆ ಇದು ಉತ್ತಮ ಉದಾಹರಣೆ. ಗಡಿಭಾಗದ ಮೂಲಸೌಕರ್ಯಗಳನ್ನು ಹೆಚ್ಚಿಸಲು ದೀರ್ಘಕಾಲದಿಂದ ಬೇಡಿಕೆಯಿತ್ತು. ಆದರೆ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ. ಮಧ್ಯದಲ್ಲಿಯೇ ಕೆಲಸ ನಿಂತುಹೋಗುತ್ತಿತ್ತು. ಇದೀಗ ಅಟಲ್ ಸುರಂಗ ಹೆದ್ದಾರಿ ಸಾಕಾರಗೊಂಡಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಈ ಸುರಂಗ ಹೆದ್ದಾರಿಗೆ 2002ರಲ್ಲಿಯೇ ಶಂಕು ಸ್ಥಾಪನೆ ನೆರವೇರಿಸಿದ್ದರು. 2013-14ರವರೆಗೆ ಸುರಂಗದ 1,300 ಮೀಟರ್ ವರೆಗೆ ಮಾತ್ರ ನಿರ್ಮಾಣದ ಪ್ರಗತಿ ಸಾಗಿತ್ತು. 2014ರ ನಂತರ ಸುರಂಗ ಹೆದ್ದಾರಿಯ ಯೋಜನೆ ತ್ವರಿತವಾಗಿ ಸಾಗಿ ಇದೀಗ ಉದ್ಘಾಟನೆಯಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.
ಈ ಪ್ರದೇಶದಲ್ಲಿ ಇಷ್ಟು ವರ್ಷಗಳ ಕಾಲ ಸುರಂಗ ಮಾರ್ಗವಿಲ್ಲದಿದ್ದರಿಂದ ಅಧಿಕ ಹಿಮ, ಮಂಜು ಬೀಳುವಿಕೆಯ ಸಮಯದಲ್ಲಿ ಸುಮಾರು ಆರು ತಿಂಗಳು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ.
ಪ್ರತಿದಿನ ಸುರಂಗ ಮೂಲಕ 3,000 ಕಾರುಗಳು, 1,500 ಟ್ರಕ್ ಗಳು ಸಂಚಾರ ಮಾಡಬಹುದು. ಈ ಸುರಂಗ ಮಾರ್ಗ ಲೇಹ್ ನ್ನು ಮಾತ್ರ ಸಂಪರ್ಕಿಸುವುದಲ್ಲದೆ ಲಹುಲ್-ಸ್ಪಿತಿ ಬುಡಕಟ್ಟು ಜಿಲ್ಲೆಗಳನ್ನು ಸಹ ಸಂಪರ್ಕಿಸುತ್ತದೆ.
ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿಯವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಗಡಿ ರಸ್ತೆ ಸಂಸ್ಥೆಯ ಡಿಜಿ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಭಾಗವಹಿಸಿದ್ದರು.