ಪುಣೆ ಮೂಲದ ತಂತ್ರಜ್ಞಾನ ಕಂಪನಿಯಾದ ಕೆಪಿಐಟಿ ಹಾಗೂ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಭಾರತದ ಮೊದಲ ಹೈಡ್ರೋಜನ್ ಫ್ಯೂಯಲ್ ಸೆಲ್ (ಹೆಚ್ಎಫ್ಸಿ) ವಾಹನದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿವೆ.
ಈ ಎರಡೂ ಕಂಪನಿಗಳು ನಡೆಸಿದ ಜಂಟಿ ಪ್ರಯೋಗ ಯಶಸ್ವಿಯಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಫ್ಯೂಯಲ್ ಸೆಲ್ ಅನ್ನು ಈ ಪ್ರಯೋಗಕ್ಕಾಗಿ ಬಳಸಲಾಗಿತ್ತು. ಈ ಟೆಕ್ನಾಲಜಿಯು ಹೈಡ್ರೋಜನ್ ಫ್ಯೂಯಲ್ ಸೆಲ್ ಗಳನ್ನು ಬಳಸಿ ಹೈಡ್ರೋಜನ್ ಹಾಗೂ ಆಕ್ಸಿಜನ್ ಗಳನ್ನು ಹೊರತೆಗೆಯುವ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ.
ನಂತರ ಈ ವಿದ್ಯುತ್ ಅನ್ನು ಬ್ಯಾಟರಿಗೆ ವರ್ಗಾಯಿಸಿ, ಅದನ್ನು ವಾಹನದಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಈ ವಾಹನಗಳಿಂದ ಹೊರಹೊಮ್ಮುವ ಏಕೈಕ ತ್ಯಾಜ್ಯ ವಸ್ತುವೆಂದರೆ ಅದು ನೀರು ಮಾತ್ರ. ಈ ಎರಡೂ ಕಂಪನಿಗಳು 10 ಕಿ.ವ್ಯಾಟ್ ನ ಆಟೋಮೋಟಿವ್ ಗ್ರೇಡ್ ಎಲ್ ಟಿ – ಪಿಇಎಂಎಫ್ ಸಿ ಫ್ಯೂಯಲ್ ಸೆಲ್ ಸ್ಟ್ಯಾಕ್ ಅನ್ನು ಅಭಿವೃದ್ಧಿಪಡಿಸಿವೆ.
ಈ ಸ್ಟಾಕ್ ಮೆಂಬರೇನ್ ಎಲೆಕ್ಟ್ರೋಡ್ ಅಸೆಂಬ್ಲಿಯೊಂದಿಗೆ ಪಿಇಎಂ ಫ್ಯೂಯಲ್ ಸೆಲ್ ಟೆಕ್ನಾಲಜಿಯನ್ನು ಬಳಸುತ್ತದೆ. ಕೆಪಿಐಟಿ ತನ್ನದೇ ಕಡಿಮೆ ತೂಕದ ಮೆಟಲ್ ಬೈಪೋಲಾರ್ ಪ್ಲೇಟ್, ಗ್ಯಾಸ್ಕೆಟ್ ಡಿಸೈನ್, ಬ್ಯಾಲೆನ್ಸ್ ಆಫ್ ಪವರ್ (ಬಿಒಪಿ), ಸಿಸ್ಟಂ ಇಂಟಿಗ್ರೇಷನ್, ಕಂಟ್ರೋಲ್ ಸಾಫ್ಟ್ವೇರ್ ಹಾಗೂ ಎಲೆಕ್ಟ್ರಿಕ್ ಪವರ್ಟ್ರೇನ್ಗಳನ್ನು ಅಭಿವೃದ್ಧಿಪಡಿಸಿದೆ.
ಈ ಪರೀಕ್ಷೆಯನ್ನು ಫ್ಯೂಯಲ್ ಸೆಲ್ ಸ್ಟಾಕ್ ಬಳಸಿ ರಿಅಸೆಂಬಲ್ ಮಾಡಲಾದ ಬ್ಯಾಟರಿ-ಎಲೆಕ್ಟ್ರಿಕ್ ಪ್ಲಾಟ್ಫಾರಂನಲ್ಲಿ ನಡೆಸಲಾಯಿತು. ಪರೀಕ್ಷೆಗೆ ಬಳಸಲಾದ ಕಾರಿನಲ್ಲಿ 350 ಬಾರ್ನಲ್ಲಿ 1.75 ಕೆಜಿ ಸಾಮರ್ಥ್ಯವಿರುವ ಟೈಪ್ 3 ಕಮರ್ಷಿಯಲ್ ಹೈಡ್ರೋಜನ್ ಟ್ಯಾಂಕ್ ಅನ್ನು ಅಳವಡಿಸಲಾಗಿತ್ತು.
ಈ ಕಾರು 60-65 ಕಿ.ಮೀ ವೇಗದಲ್ಲಿ 250 ಕಿ.ಮೀ ವೇಗಗಳವರೆಗೆ ಚಲಿಸುತ್ತದೆ. ದೊಡ್ಡ ಬ್ಯಾಟರಿ ಅಗತ್ಯವಿರುವುದರಿಂದ ಈ ಟೆಕ್ನಾಲಜಿಯು ಎಲೆಕ್ಟ್ರಿಕ್ ಬಸ್ಸು ಹಾಗೂ ಟ್ರಕ್ ಸೇರಿದಂತೆ ಕಮರ್ಷಿಯಲ್ ವಾಹನಗಳಿಗೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳಲಾಗಿದೆ.
ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಸಮಸ್ಯೆಯೆಂದರೆ ಅವುಗಳಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ನಾಲ್ಕೈದು ಗಂಟೆಗಳು ಬೇಕಾಗುತ್ತವೆ. ಆದರೆ ಪೆಟ್ರೋಲ್, ಡೀಸೆಲ್ ವಾಹನಗಳ ರೀತಿಯಲ್ಲಿ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನಗಳ ಟ್ಯಾಂಕ್ ನಲ್ಲಿ ಕ್ಷಣಾರ್ಧದಲ್ಲಿ ಇಂಧನ ತುಂಬಿಸಬಹುದು.
ಈ ವಾಹನಗಳು ಎಲೆಕ್ಟ್ರಿಕ್ ವಾಹನಗಳಿಗಿಂತ ಹೆಚ್ಚು ಫ್ಯೂಯಲ್ ಎಫಿಶಿಯನ್ಸಿ ಹೊಂದಿವೆ. ಜೊತೆಗೆ ವಾಯು ಮಾಲಿನ್ಯವು ಉಂಟಾಗುವುದಿಲ್ಲ. ಇದರಲ್ಲಿರುವ ಅನಾನುಕೂಲವೆಂದರೆ ಇದರ ಬೆಲೆ ಹೆಚ್ಚಾಗಿರುವುದು. ಆದರೆ ಟೆಕ್ನಾಲಜಿ ಮುಂದುವರೆದಂತೆ ಬೆಲೆ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಪ್ರಪಂಚದ ಬಹುತೇಕ ದೇಶಗಳು ಹೈಡ್ರೋಜನ್ ಇಂಧನ ಆಧಾರಿತ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಕಳೆದ ತಿಂಗಳು ಅಮೆರಿಕಾದಲ್ಲಿ ಪ್ರಪಂಚದ ಮೊದಲ ಹೈಡ್ರೋಜನ್ ಇಂಧನ ಕಮರ್ಷಿಯಲ್ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ನಡೆಸಲಾಗಿತ್ತು. ಈ ಪರಿಸರ ಸ್ನೇಹಿ ವಿಮಾನವನ್ನು ಅಮೆರಿಕ-ಬ್ರಿಟಿಷ್ ಕಂಪನಿಯಾದ ಝೀರೋ ಏವಿಯಾ ಅಭಿವೃದ್ಧಿಪಡಿಸಿದೆ. ಕಂಪನಿಯು 20 ನಿಮಿಷಗಳ ಕಾಲ ಈ ವಿಮಾನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.