ನವದೆಹಲಿ ಸೆ.೭: ಭಾರತವು ಸೋಮವಾರ ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್ಸ್ಟ್ರೇಷನ್ ವೆಹಿಕಲ್ (ಎಚ್ಎಸ್ಟಿಡಿವಿ) ಪರೀಕ್ಷೆಯನ್ನು ನಡೆಸಿದೆ. ಒಡಿಶಾದ ಕರಾವಳಿ ಪ್ರದೇಶದಲ್ಲಿ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದು, ಈ ಮೂಲಕ ದೇಶಿ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ನೆಟ್ಟಿದಂತಾಗಿದೆ.
ಎಚ್ಎಸ್ಟಿಡಿವಿ ಹೈಪರ್ ಸಾನಿಕ್ ತಂತ್ರಜ್ಞಾನ ಉಪಯೋಗಿಸಿಕೊಂಡು ನಿರ್ಮಿಸಲಾಗಿತ್ತು. ಇದನ್ನು ಡಿಆರ್ಡಿಒ (ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗೈನೈಸೇಶನ್) ಅಭಿವೃದ್ಧಿಪಡಿಸಿರುವುದಾಗಿ ವರದಿ ತಿಳಿಸಿದೆ.
ಎಚ್ಎಸ್ಟಿಡಿವಿ ಯಶಸ್ವಿ ಹಾರಾಟ ನಡೆಸಿದ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ಇದುವರೆಗೆ ಕೇವಲ ಮೂರು ದೇಶಗಳು ಹೈಪರ್ ಸಾನಿಕ್ ವಾಹನದ ಯಶಸ್ವಿ ಹಾರಾಟ ನಡೆಸಿದೆ – ರಷ್ಯಾ, ಚೀನಾ ಮತ್ತು ಅಮೆರಿಕಾ
ಏನಿದು ಎಚ್ಎಸ್ಟಿಡಿವಿ ?
ಎಚ್ಎಸ್ಟಿಡಿವಿ ಹೈಪರ್ಸಾನಿಕ್ ವೇಗದ ಹಾರಾಟಕ್ಕಾಗಿ ಮಾನವರಹಿತ ಸ್ಕ್ರಾಮ್ಜೆಟ್ ಪ್ರದರ್ಶನ ವಿಮಾನವಾಗಿದೆ. ಇದನ್ನು ಹೈಪರ್ಸಾನಿಕ್ ಮತ್ತು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳಿಗಾಗಿ ವಾಹಕ ವಾಹನವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಕಡಿಮೆ ವೆಚ್ಚದಲ್ಲಿ ಸಣ್ಣ ಉಪಗ್ರಹಗಳನ್ನು ಉಡಾಯಿಸುವುದು ಸೇರಿದಂತೆ ಅನೇಕ ಕಾರ್ಯವಿಭಾಗಗಳನ್ನು ಹೊಂದಿರುತ್ತದೆ. ಎಚ್ಎಸ್ಟಿಡಿವಿಯನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸುತ್ತಿದೆ.