Home ಅಂಕಣ ಈ ಸ್ವಾರ್ಥರಹಿತ ಹೋರಾಟಗಾರ್ತಿಯನ್ನು ಮರೆತೇ ಬಿಟ್ಟೆವೆ?!

ಈ ಸ್ವಾರ್ಥರಹಿತ ಹೋರಾಟಗಾರ್ತಿಯನ್ನು ಮರೆತೇ ಬಿಟ್ಟೆವೆ?!

0
215
[cvct-advance id=3539]

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರವೂ ದೊಡ್ಡದು. ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬವನ್ನು ತೊರೆದು, ಜೀವ ಮುಡಿಪಾಗಿಟ್ಟು ದೇಶಕ್ಕಾಗಿ ಹೋರಾಡಿದ್ದಾರೆ. ಅಂತವರಲ್ಲಿ ಭಿಖೈಜಿ ಕಾಮಾ ಒಬ್ಬರು.

ಇವರು 1861 ಸಪ್ಟೆಂಬರ್ 24 ಜಿಜಿಬಾಯ್ ಮತ್ತು ಸೊರಾಬ್ಜಿ ಫ್ರೇಮ್ಜಿ ಪಟೇಲ್ ದಂಪತಿಗೆ ಮಗಳಾಗಿ ಜನಿಸಿದರು .ಮುಂದಕ್ಕೆ ಅಲೆಕ್ಸಾಂಡ್ರಾ ಬಾಲಕಿಯರ ಶಾಲೆಯಲ್ಲಿ ಕಲಿತರು ಮತ್ತು ಅನೇಕ ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು.

ಇದನ್ನೂ ಓದಿ: ಕ್ರಾಂತಿಯ ಕಿಡಿ ಹಚ್ಚಿದ ವೀರ ಸಂಗೊಳ್ಳಿ ರಾಯಣ್ಣ

ಆ ದಿನಗಳಲ್ಲಿ ಸುಶಿಕ್ಷಿತ ವರ್ಗಕ್ಕೆ ಸೇರಿದ ಅನೇಕ ತರುಣರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ವಿದೇಶಿ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸಮಾಜ ಸುಧಾರಣೆ ಕೈಂಕರ್ಯದಲ್ಲಿ ನಿರತರಾಗಿದ್ದಾರೆ, ತಿಲಕ್, ಅರವಿಂದ ಘೋಷ್ ಮೊದಲಾದವರು ಕ್ರಾಂತಿಯ ಮಾರ್ಗ ಹಿಡಿದಿದ್ದರು. ಇವರೆಲ್ಲರ ಪ್ರಭಾವ ಹೋರಾಟಗಾರ್ತಿ ಭಿಖೈಜಿ ಮೇಲೆ ಬಿದ್ದಿತ್ತು.

1885 ರಲ್ಲಿ ಭಿಖೈಜಿ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾದ ಬ್ಯಾರಿಸ್ಟರ್ ರುಸ್ತೋಮ್ಜಿ ಕಾಮಾ ಅವರನ್ನು ವರಿಸಿದರು. ರುಸ್ತೋಮ್ಜಿ ಪ್ರಖ್ಯಾತ ಪಾರ್ಸಿ ಸುಧಾರಕ ಹಾಗೂ ವಿದ್ವಾಂಸರಾದ ಕೆ ಆರ್ ಕಾಮಾ ಅವರ ಪುತ್ರರಾಗಿದ್ದರು. 1885 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೊಂಡ ವರ್ಷವೂ ಆಗಿತ್ತು. ಇದರಿಂದ ಭಿಖೈಜಿ ರೋಮಾಂಚನಗೊಂಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಕೈಂಕರ್ಯದಲ್ಲಿ ಪುರುಷನಿಗೆ ಸಮನಾಗಿ ಮಹಿಳೆಯರೂ ಹೋರಾಡಲು ಇದೊಂದು ಅವಕಾಶ ಎಂದು ಅವರು ಭಾವಿಸಿದ್ದರು.

ಹಾಗಾಗಿಯೇ ಭಿಖೈಜಿ ಕಾಮಾ ಎಲ್ಲಾ ಸಿರಿವಂತ ಗೃಹಿಣಿಯರಂತೆ ಸುಖಲೋಲುಪತೆಯಲ್ಲಿ ಕಾಲಾಯಾಪನೆ ಮಾಡಲಿಲ್ಲ. ಸಮಾಜಕ್ಕೆ ಸೇವೆ ಸಲ್ಲಿಸುವುದು ಅವರ ಬಯಕೆಯಾಗಿತ್ತು.1896 ಬಾಂಬೆಯಲ್ಲಿ ಪ್ಲೇಗ್ ಮಾರಿ ಹರಡಿದಾಗ ಅವರು ರೋಗಿಗಳ ಆರೈಕೆಗೆ ಮುಂದಾದರು. ಪ್ಲೇಗ್ ಸಂದರ್ಭದಲ್ಲಿನ ಅವರ ಅನುಭವ ಹಾಗೂ ಬ್ರಿಟಿಷರ ದಮನ ನೀತಿ ದೇಶವನ್ನು ಸ್ವತಂತ್ರಗೊಳಿಸಿ ಬೇಕೆಂಬ ಅವರ ಸಂಕಲ್ಪವನ್ನು ಬಲಗೊಳಿಸಿತು.ಆಕೆ ಫಿರೋಜ್ ಶಾ ಮೆಹ್ತಾ ಅವರ ‘ದಿ ಬಾಂಬೆ ಕ್ರಾನಿಕಲ್’ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿಯೂ ದುಡಿದರು.
ಮೇಡ ಕಾಮಾ 1902ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ನಿಗೆ ತೆರಳಿದರು. ದಾದಾಬಾಯಿ ನೌರೋಜಿಯನ್ನು ಭೇಟಿ ಮಾಡಿದ ಆಕೆ, ಅವರ ಜೊತೆ ಕಾಂಗ್ರೆಸ್ ಗಾಗಿ ದುಡಿದರು.ನವರೋಜಿ ,ಮೇಡಂ ಕಾಮಾ ಮೇಲೆ ಪ್ರಭಾವ ಬೀರಿದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆದರೂ, ಅವರ ಮಂದಗಾಮಿ ಧೋರಣೆಯಿಂದ ನಿರಾಸೆಗೊಂಡ ಭೈಖೈಜಿ ತೀವ್ರಗಾಮಿಗಳ ಹೋರಾಟದತ್ತ ಹೊರಳಿದರು. ಅವರು ಸರ್ದಾರ್ ಸಿಂಗ್‌ ರಾಣಾ ಮತ್ತು ಶ್ಯಾಮ್ಜಿ ಕೃಷ್ಣವರ್ಮ ಅವರ ಸಂಪರ್ಕಕ್ಕೆ ಬಂದರು.

ಮೇಡಂ ಕಾಮಾ ಲಂಡನ್ನಿನ ಹೈಡ್ ಪಾರ್ಕ್ ನಲ್ಲಿ ತೀಕ್ಷ್ಣ ಭಾಷಣಗಳನ್ನು ಮಾಡಿದರು. ಭಾರತದಲ್ಲಿ ಬ್ರಿಟಿಷರ ದೌರ್ಜನ್ಯಗಳನ್ನು ಪ್ರಬಲವಾಗಿ ಖಂಡಿಸಿದರು. ಅವರು ಶ್ಯಾಮ್ಜಿ ಬೀಸುತ್ತಿದ್ದ ʼಇಂಡಿಯನ್ ಸೋಷಿಯಲಿಸ್ಟ್ʼ ಪತ್ರಿಕೆಗೆ ನಿಯಮಿತವಾಗಿ ಬರೆಯುತ್ತಿದ್ದರು. ಸಾವರ್ಕರ್ ಅವರ ʼದಿ ಹಿಸ್ಟರಿ ಆಫ್ ದಿ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್ʼ ಕೃತಿಯನ್ನು ಫ್ರೆಂಚ್ ಭಾಷೆಗೆ ಅನುವಾದ ಮಾಡಲು ನೆರವಾದರು. ಕ್ರಾಂತಿಕಾರಿಗಳು ಒಂದೇ ಮಾತರಂ ಹಾಡನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದರು. ಪರಸ್ಪರ ಶುಭಾಶಯ ಕೋರುವುದಕ್ಕೂ ಅದನ್ನು ಬಳಸುತ್ತಿದ್ದರು.

ಮೊದಲ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಮತ್ತು ಫ್ರೆಂಚರ ನಡುವೆ ಒಪ್ಪಂದ ಏರ್ಪಟ್ಟಾಗ ಮೇಡಂ ಕಾಮಾರನ್ನು 3 ವರ್ಷ ಜೈಲಿಗೆ ಅಟ್ಟಲಾಯಿತು. ಅವರ ಆರೋಗ್ಯ ಪೂರ್ತಿ ಹದಗೆಟ್ಟಿತ್ತು. ಕ್ರಾಂತಿಕಾರಿ ಚಟುವಟಿಕೆಗಳಿಂದ ದೂರ ಉಳಿಯುವುದಾಗಿ ಅವರು ಮುಚ್ಚಳಿಕೆ ಬರೆದು ಕೊಡಬೇಕಾಯಿತು. ಸುಮಾರು 30 ವರ್ಷ ಮೇಡಂ ಪ್ಯಾರಿಸ್ಸಿನಲ್ಲಿದ್ದರು.1935 ರಲ್ಲಿ ಅವರಿಗೆ ಭಾರತಕ್ಕೆ ಮರಳಲು ಅನುಮತಿ ನೀಡಲಾಯಿತು. ಆದರೆ, ಸಭೆ ನಡೆಸಬಾರದು, ಭಾಷಣ ಮಾಡಬಾರದು ಅಥವಾ ಲೇಖನ ಬರೆಯಬಾರದು ಎಂದು ನಿರ್ಬಂಧ ವಿಧಿಸಲಾಯಿತು. ಅವರ ಆರೋಗ್ಯಪೂರ್ಣ ಹದಗೆಟ್ಟು ಆಸ್ಪತ್ರೆಗೆ ಸೇರಿಸಬೇಕು ಈ ಸಂದರ್ಭದಲ್ಲಿ ಕೆಲವು ಸ್ನೇಹಿತರು ಹಾಗೂ ನೆಂಟರು ಅವರನ್ನು ಸಂದರ್ಶಿಸಿದರೂ, ಬಹುಪಾಲು ಸ್ನೇಹಿತರು ಆಕೆಯನ್ನು ಮರೆತರು. ಕೊನೆಗೂ ಮೇಡಂ ಭಿಖೈಜಿ ಕಾಮಾ ಎಂಬ ದಿಟ್ಟ ಮಹಿಳೆ 1936, ಆಗಸ್ಟ್ 16 ರಂದು ಪಾರ್ಸಿ ಆಸ್ಪತ್ರೆಗೆ ದಾಖಲುಗೊಂಡ 8 ತಿಂಗಳ ಬಳಿಕ ಕೊನೆಯುಸಿರೆಳೆದರು.

ಬ್ಯಾರಿಸ್ಟರ್ ಪತ್ನಿಯಾಗಿ ಸುಖಪಡಬಹುದಾಗಿದ್ದ, ಸುಭದ್ರ ಜೀವನವನ್ನು ಸ್ವಯಂ ತ್ಯಾಗ ಮಾಡಿದ ಭಿಖೈಜಿ ರಾಷ್ಟ್ರೀಯ ಹಿತಾಸಕ್ತಿಗಾಗಿ ತಮ್ಮ ಜೀವಿತವನ್ನು ಮಲಿನವಾದ ಪೇಯಿಂಗ್ ಹೋಂಗಳಲ್ಲಿ ಕಳೆದರು. ಸೂರಿನಿಂದ ಹೊರಬರಲಾಗದ ನಿರ್ಬಂಧವಿದ್ದ ದಿನಗಳಲ್ಲಿ ದಿಟ್ಟವಾಗಿ ಬದುಕಿದ ಭಿಖೈಜಿ ಅವರ ಜೀವನ, ತ್ಯಾಗ ಕೆಲಸ ಹಾಗೂ ಅವಿರತ ಹೋರಾಟ ಪ್ರಾತಃಸ್ಮರಣೀಯ.

ಸುರೇಶ್ ರಾಜ್,ಪಕ್ಷಿಕೆರೆ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

NO COMMENTS

LEAVE A REPLY

Please enter your comment!
Please enter your name here