ಬೆಂಗಳೂರು,ಜ.18: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಪಶುಸಂಗೋಪನಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎನ್.ಪ್ರವೀಣ್ ಈ ಆದೇಶ ಹೊರಡಿಸಿದ್ದು, ರಾಜ್ಯಪತ್ರ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಿಸುವವರು ತಮ್ಮ ಸಂಪೂರ್ಣ ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಜಾನುವಾರುಗಳ ವಯಸ್ಸು, ಸಾಗಾಣಿಕೆಯ ಉದ್ದೇಶದ ಬಗ್ಗೆ ದೃಢೀಕರಣ ನೀಡಬೇಕು ಎಂದು ಸೂಚಿಸಲಾಗಿದೆ. ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆಗಳು (ಎನ್ಜಿಒ) ಪ್ರಾಣಿ ಕಲ್ಯಾಣ ಮಂಡಳಿಯ ಜೊತೆಗೆ ಕೈಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಹಾಗೂ ಗೋಹತ್ಯೆ, ಅಕ್ರಮ ಜಾನುವಾರು ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಹೆಚ್ಚು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಗೋ ಹತ್ಯೆ ನಿಷೇಧ ಮಸೂದೆ | 13 ವರ್ಷ ಮೇಲ್ಪಟ್ಟ ಅಥವಾ ಅನಾರೋಗ್ಯ ಪೀಡಿತ ಜಾನುವಾರುಗಳ ಹತ್ಯೆಗೆ ಅವಕಾಶ!
ಕರಡು ನಿಯಮದಲ್ಲಿನ ಅಂಶಗಳು:
- ಹಸುಗಳನ್ನು ಕೃಷಿ, ಪಶುಸಂಗೋಪನೆ ಉದ್ದೇಶಕ್ಕಾಗಿ ಸಾಗಣೆ ಮಾಡುವವರು ಸಾರಿಗೆ ದೃಢೀಕರಣ ಪತ್ರ, ಮಾಲೀಕತ್ವ ದಾಖಲೆ ಹಾಗೂ ಪಶು ಪ್ರಥಮ ಚಿಕಿತ್ಸಾ ಪರಿಕರಗಳನ್ನು ಹೊಂದಿರಬೇಕು.
- 15 ಕಿ.ಮೀ. ವ್ಯಾಪ್ತಿಯೊಳಗೆ ಎರಡು ಹಸು ಅಥವಾ ಅವುಗಳ ಕರುಗಳನ್ನು ಸಾಗಣೆ ಮಾಡಲು ಯಾವುದೇ ಸಾರಿಗೆ ದಾಖಲಾತಿಯ ಅಗತ್ಯ ಇಲ್ಲ.
- ಜಾನುವಾರು ಸಾಗಿಸುವ ಪ್ರತಿ ಸರಕು ಸಾಗಣೆ ವಾಹನದ ಮೇಲೆ ಕೆಂಪು ಬಣ್ಣದ ದಪ್ಪ ಅಕ್ಷರದಲ್ಲಿ , ಹಸು ರವಾನಿಸುವವರು, ಸ್ವೀಕರಿಸುವವರ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಬರೆದಿರಬೇಕು. ಜೊತೆಗೆ ಸಾಗಣೆ ಮಾಡುತ್ತಿರುವ ಹಸುಗಳ ಸಂಖ್ಯೆ, ತಳಿ ಹಾಗೂ ಪೂರೈಸಲಾದ ಆಹಾರದ ಪ್ರಮಾಣ ಬರೆದಿರಬೇಕು.
- ಸಾಗಣೆ ಮಾಡುವ ಹಸುಗಳಿಗೆ ಯಥೇಚ್ಛವಾಗಿ ಹುಲ್ಲು ತಿನ್ನಿಸಿ, ನೀರು ಕುಡಿಸಿರಬೇಕು. ಯಥೇಚ್ಛ ಆಹಾರ, ಹುಲ್ಲು, ನೀರನ್ನು ಸಂಗ್ರಹಿಸಿರಬೇಕು.
- ಆರು ತಿಂಗಳ ಗರ್ಭಿಣಿ ಹಸುವನ್ನು ಸಾಗಣೆ ಮಾಡುವಂತಿಲ್ಲ. ಆದರೆ, ಚಿಕಿತ್ಸೆ ಉದ್ದೇಶಕ್ಕಾಗಿ ಆ ಹಸುವನ್ನು ಸಾಗಣೆ ಮಾಡಬಹುದಾಗಿದೆ. ಹಸುವನ್ನು ಸಾಗಿಸುವ ವಾಹನಗಳು ಸೂಕ್ತ ವ್ಯವಸ್ಥೆ ಹೊಂದಿರಬೇಕು.
- ಹಸು ನಿಲ್ಲಿಸಲು ವಾಹನದಲ್ಲಿ ಖಾಯಂ ವಿಭಜನೆಗಳನ್ನು ಮಾಡಿರಬೇಕು. 100 ಕೆ.ಜಿ ಹಸು ಕೊಂಡೊಯ್ಯಲು 1.5 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. 100 ಕೆ.ಜಿ. ಮೇಲ್ಪಟ್ಟ ಹಸುವನ್ನು ಕೊಂಡೊಯ್ಯಲು ವಾಹನದಲ್ಲಿ 2 ಚದರ ಮೀಟರ್ ಜಾಗದ ವಿಭಜನೆ ಮಾಡಿರಬೇಕು. ಹಸು ಸಾಗಿಸುವ ವಾಹನದ ವೇಗ ಪ್ರತಿ ಗಂಟೆಗೆ 25 ಕಿ.ಮೀ. ಮೀರಬಾರದು.
- ಹಸುಗಳನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಸಾಗಾಟ ಮಾಡುವಂತಿಲ್ಲ. ಬೇಸಿಗೆ ಸಮಯವಾದ ಮಾರ್ಚ್ನಿಂದ ಮೇ ಅವಧಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹಸು ಸಾಗಾಟ ಮಾಡಬಾರದು ಎಂದು ತಿಳಿಸಲಾಗಿದೆ.
ಇತ್ತೀಚೆಗಷ್ಟೇ ರಾಜ್ಯಪಾಲರು ಗೋಹತ್ಯೆ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ.