ತಾನು ಎದುರಿಸುವ ದೌರ್ಜನ್ಯಗಳನ್ನು ಮೆಟ್ಟಿ ಹಾಕಲು ಮಹಿಳೆಯೇ ಸಶಕ್ತಳಾಗಬೇಕು: ವಿಲಿಯಂ ಸ್ಯಾಮುವೆಲ್

0
131
Tap to know MORE!

ಹಳೆಯಂಗಡಿ ಜ.20: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ (ರಿ) ಹಳೆಯಂಗಡಿ ಇವರ ಜಂಟಿ ಆಶ್ರಯದಲ್ಲಿ “ಮಹಿಳೆಯರಿಗಾಗಿ ಮಾನವ ಹಕ್ಕು ಮತ್ತು ಮಹಿಳಾಪರ ಕಾನೂನು ಮಾಹಿತಿ ಕಾರ್ಯಗಾರ” ಕಾರ್ಯಕ್ರಮವು ಜನವರಿ 19ರಂದು ಯುವತಿ ಮತ್ತು ಮಹಿಳಾ ಮಂಡಲದ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಸಲಹಾ ಸಮಿತಿಯ ಅಧ್ಯಕ್ಷರಾಗಿರುವ ಸದಾಶಿವ ಅಂಚನ್ “ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿರುವ ಮಾಹಿತಿ ಕಾರ್ಯಕ್ರಮಗಳು, ಮಹಿಳೆಯು ಪ್ರಸ್ತುತ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದುವಲ್ಲಿ ಸಹಕಾರಿಯಾಗುತ್ತದೆ. ಜೊತೆಗೆ ಇಂತಹ ಕಾರ್ಯಕ್ರಮಗಳು ಸದುಪಯೋಗವಾಗುಲ್ಲಿ ಮಹಿಳಾ ಸಂಘಟನೆಗಳ ಜವಾಬ್ದಾರಿ ಮಹತ್ವವಾದದ್ದು ಎಂದರು.

ಇದನ್ನೂ ಓದಿ: ಹಳೆಯಂಗಡಿ : ಯುವಕ ಮಂಡಲದಲ್ಲಿ “ಪೇಪರ್ ಕ್ರಾಫ್ಟ್ ಕಾರ್ಯಾಗಾರ”

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕರಾದ ವಿಲಿಯಂ ಸ್ಯಾಮುವೆಲ್ ಸಮಾಜದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯು ಎದುರಿಸುತ್ತಿರುವ ದೌರ್ಜನ್ಯ, ಹಾಗೂ ದೌರ್ಜನ್ಯವನ್ನು ಮೆಟ್ಟಿ ನಿಲ್ಲುವಲ್ಲಿ ನಾವು ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ತಿಳಿಸಿದರು. ಜೊತೆಗೆ ಪ್ರಜ್ಞಾ ಸಲಹಾ ಕೇಂದ್ರ ಅನುಷ್ಠಾನಗೊಳಿಸುತ್ತಿರುವ ಯೋಜನಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾದ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ. ಯತೀಶ್ ಕೋಟ್ಯಾನ್ ಮಾಹಿತಿ ಕಾರ್ಯಗಾರಕ್ಕೆ ಶುಭವನ್ನು ಹಾರೈಸಿದರು.

ಪತ್ರಕರ್ತರು, ತರಬೇತುದಾರರು ಹಾಗೂ ಈ ದಿನದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಶಂಶುದ್ದೀನ್ ಮಾತನಾಡಿ, “ಮಾನವ ಹಕ್ಕು ಮತ್ತು ಮಹಿಳಾ ಹಕ್ಕುಗಳು, ಮಹಿಳಾ ಪರ ಕಾನೂನು, ಹಲವಾರು ವಿಚಾರಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ಸಮುದಾಯದಲ್ಲಿ ಆಗುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ನಾವು ಕಂಡುಕೊಳ್ಳಬಹುದಾದ ಪರಿಹಾರೋಪಾಯಗಳ ಬಗ್ಗೆ ತಿಳಿಸಿದರು.

ಮಹಿಳಾ ಮಂಡಲದ ಅಧ್ಯಕ್ಷರು ಶ್ರೀಮತಿ. ರೇಷ್ಮಾ ಹಾಗೂ ಪ್ರಜ್ಞಾ ಸಲಹಾ ಕೇಂದ್ರದ ಶ್ರೀ. ರುದ್ರಾಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವತಿ ಮಂಡಲದ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಮಹಿಳಾ ಮಂಡಲದ ಕೋಶಾಧಿಕಾರಿ ಶ್ರೀಮತಿ ರಾಜೇಶ್ವರಿ ರಾಮನಗರ ಅತಿಥಿಗಳನ್ನು ಸ್ವಾಗತಿಸಿ, ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕರು ಶ್ರೀ. ಅಶೋಕ್ ಧನ್ಯವಾದ ಸಲ್ಲಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ಕು.ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here