ಮೂಡುಬಿದಿರೆ: ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರು ತುಳುವರ ಆರಾಧ್ಯ ಚೈತನ್ಯ ಮಾತ್ರವಲ್ಲ, ಅವರ ಜೀವನ ವೃತ್ತಾಂತ ಇಂದಿಗೂ ರೋಮಾಂಚನದ ಅನುಭವವನ್ನು ಉಂಟು ಮಾಡುತ್ತದೆ. ಆ ಕಾರಣದಿಂದಲೆ ಈ ಅವಳಿ ವೀರರ ಕುರಿತಾದ ಕತೆ ಹಾಗೂ ಕಲಾಕೃತಿ ಇಂದಿಗೂ ಮಹತ್ವ ಪಡೆದಿದೆ. ಕೋಟಿ ಚೆನ್ನಯರ ಕುರಿತಂತೆ ಈಗಾಗಲೆ ಸಾಕಷ್ಟು ಸಂಶೋಧನೆ ನಡೆದಿದೆ.ಆದರೆ ಅವರ ಕುರಿತಾದ ಅಧ್ಯಯನದ ದಾಹ ಇಂದಿಗೂ ಕಡಿಮೆಯಾಗಿಲ್ಲ. ಆತ್ಮಾಭಿಮಾನ ಹಾಗೂ ಸತ್ಯ ಧರ್ಮದ ಪ್ರತೀಕಗಳಾದ ಕೋಟಿ ಚೆನ್ನಯರು ನಿತ್ಯನೂತನ ” ಎಂದು ಉಪನ್ಯಾಸಕಿ ಡಾ. ಜ್ಯೋತಿ ರೈ ತಿಳಿಸಿದರು.
ಅವರು ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಕೋಟಿ ಚೆನ್ನಯ ಕಥಾವಲೋಕನ ಎಂಬ ವಿಷಯದ ಕುರಿತು ಮಾತನಾಡಿದರು.ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ವೇದಿಕೆಯಲ್ಲಿ ಕೇಂದ್ರದ ಸಂಯೋಜಕ ಡಾ. ಯೋಗಿಶ್ ಕೈರೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಜೋಶಿತ್ ಸ್ವಾಗತಿಸಿದರು, ಪ್ರಖ್ಯಾತ್ ನಿರೂಪಿಸಿದರು, ಸೌರಭ್ ವಂದಿಸಿದರು.