ಮನುಷ್ಯನ ಬುದ್ಧಿ ತಾನು ಬೆಳೆದಂತೆಲ್ಲಾ ಬದಲಾಗುತ್ತಲೇ ಹೋಗಿದೆ. ಇದು ಕಂಡು ಕೇಳಿರುವ ಸತ್ಯಾನೋ ಹೌದು. ಸ್ಲೇಟ್ ಹಿಡಿದು ಸ್ಕೂಲಿಗೆ ಹೋಗುವ ಮೃದುಮನಸಿನ ಮಗುವಿನ ಬುದ್ಧಿ, ಬುಕ್ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಇರುವುದಿಲ್ಲ, ಮತ್ತೆ ಸೂಟ್ಕೇಸ್ ಹಿಡಿದು ಕೆಲಸಕ್ಕೆ ಹೋಗುವ ಮಗನಿಗೆ ಇರುವ ಬುದ್ಧಿ ಮನೆಯಲ್ಲಿಯೇ ಕುಳಿತು ನ್ಯೂಸ್ಪೇಪರ್ ಓದುವ ತಂದೆಗೆ ಇರುವುದಿಲ್ಲ ಬಹುಶಹ ಈ ಭಿನ್ನತೆಗೆ ವಯೋಮಿತಿಯ ಅಂತರವು ಒಂದು ಕಾರಣ ಇರಬಹುದು. ಏನೇ ಆಗಲಿ ಅಂಬೆಗಾಲಿಡುವ ವಯಸ್ಸಿನಿಂದ ಹಿಡಿದು ಮಂಪರು ಬರುವ ವಯಸ್ಸಿನವರೆಗೂ ಯಾವ ನಿಯಂತ್ರಣವೂ ಇಲ್ಲದೇ ಕಾಲಕ್ರಮೇಣ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಿರುವ ನಮ್ಮ ಈ ಬುದ್ಧಿ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ನಮ್ಮಿಂದ ಮರೆಸಿ ನಮ್ಮನ್ನು ತನ್ನ ಮೂರ್ಖತನದ ಅಡಿಯಾಳನ್ನಾಗಿ ಸಿದೆ ಎಂದರೆ ತಪ್ಪಾಗಲಾರದು.
ಅಳು ವೆಂದರೆ ಹಸಿವು ನಗುವೆಂದರೆ ಆಟ ಇವು ನಮ್ಮ ಬಾಲ್ಯದ ಬಹುಮುಖ್ಯ ಪುಟಗಳು ಎಂದಿಗೂ ಅಳಿಸಲಾಗದ ಅಚ್ಚೆ ಯಂತೆ ಉಳಿದು ಹೋಗಿರುವ ಸಿಹಿಯಾದ ನೆನಪುಗಳು. ಯಾವ ಭೇದವೂ ಮಾಡದೆ ಎಲ್ಲರೊಂದಿಗೆ ಬೆರೆಯುವ, ಯಾರನ್ನು ಟೀಕಿಸಲು ಬಾರದಿರುವ ವಯಸ್ಸು, ಗೆಳೆಯನೊಂದಿಗೆ ಅಂಚಿ ತಿನ್ನುವುದನ್ನು ಕಲಿಸುವ ವಯಸ್ಸು, ತನ್ನ ಹೆಸರ ಮುಂದಿರುವ ಜಾತಿಯ ಪದದ ಅರ್ಥ ತಿಳಿದಿರದ ವಯಸ್ಸು, ಎಲ್ಲರನ್ನೂ ತನ್ನವರೆಂದು ಭಾವಿಸುವ ವಯಸ್ಸು, ಕೇವಲ ನಗುವಿನಿಂದ ನಗುವಿಗಾಗಿ ಬದುಕಿದ ಆ ಅಮೃತ ಕ್ಷಣಗಳು ಜೀವನದ ಮೌಲ್ಯವನ್ನು ತಿಳಿಸಿದದರು ಅದನ್ನು ವರ್ತಮಾನಕ್ಕೆ ಅಳವಡಿಸಿಕೊಳ್ಳುವ ಪ್ರಕ್ರಿಯೆ ನಾವು ಕಲಿಯಲೇ ಇಲ್ಲ. ಸಾಗುತ್ತಿರುವ ಈ ಒತ್ತಡದ ಬದುಕಿನ ಮಧ್ಯೆ ಉಸಿರಾಡುವುದೇ ಒಮ್ಮೊಮ್ಮೆ ಕಷ್ಟವೆನಿಸುತ್ತದೆ ಅಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ ಎಂದರೆ ನಾವು ಅಂದು ಏನು ಮುಖ್ಯವಾದದ್ದನ್ನು ಕಲಿತು ಅದನ್ನು ಅಂದಿಗೆ ಮಾತ್ರ ಸೀಮಿತ ಮಾಡಿದ್ದೇವೆ ಎಂದಲ್ಲವೇ. ಬಾಲ್ಯದಲ್ಲಿ ಕಲಿತಂತಹ ಎಷ್ಟೋ ವಿಷಯಗಳು ಆಟದ ಮುಖೇನವೇ ಕಲಿತಿರುತ್ತೇವೆ ಅದು ಯಾವುದೇ ಆಗಲಿ ಉದಾಹರಣೆಗೆ ಎಲ್ಲರೂ ಸಾಮಾನ್ಯವಾಗಿ ಈ ಆಟ ಆಡಿರುತ್ತಾರೆ, ಆಟದ ಹೆಸರು ದೇವರಗುಡಿ.
ತಮ್ಮ ಮನೆಯ ಮುಂದಿರುವ ಇಟ್ಟಿಗೆ ಅಥವಾ ಇನ್ಯಾವುದೋ ಸಣ್ಣ ಕಲ್ಲುಗಳನ್ನು ಒಂದು ಕಡೆ ಸೇರಿಸಿ ಒಂದರಮೇಲೊಂದು ಸಮನಾಗಿ ನಿಲ್ಲಿಸಿ ಚಿಕ್ಕದಾಗಿ ಚೊಕ್ಕದಾಗಿ ಚೌಕಾಕಾರದ ರೀತಿಯಲ್ಲಿ ತಮಗಿಷ್ಟವಾದ ಅಂತೆ ದೇವರ ಗುಡಿಯೊಂದನ್ನು ಕಟ್ಟಿರುತ್ತಾರೆ. ಇನ್ನು ಅದರೊಳಗೆ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು, ಬೇರೆ ಕಲ್ಲುಗಳ ಗಾತ್ರಕ್ಕಿಂತ ಚಿಕ್ಕ ಕಲ್ಲೊಂದನ್ನು ತಂದು ಅದನ್ನು ಜಗಮಗಿಸುವಂತೆ ನೀರಿನಲ್ಲಿ ತೊಳೆದು ನಮ್ಮ ನಾಡಿನ ಹಿರಿಮೆ ಯಾದ ಅರಿಶಿನ-ಕುಂಕುಮವನ್ನು ಅದಕ್ಕೆ ಲೇಪಿಸಿದರೆ ಜಕಣಾಚಾರಿಯ ಕೈಗಳಿಂದ ಮಾಡಿದ ವಿಗ್ರಹಗಳ ಅಷ್ಟೇ ಅದ್ಭುತವಾಗಿ ಕಾಣುತ್ತಿತ್ತು ನಮ್ಮ ಇಟ್ಟಿಗೆ ಗುಡಿಯ ವಿಗ್ರಹವು.ದೇವರ ನಂತರ ಗುಡಿಯಲ್ಲಿ ಮುಖ್ಯ ಸ್ಥಾನವೆಂದರೆ ಅದರ ಪೂಜಾರಿ, ನಾವು ಕಟ್ಟಿದ ಗುಡಿಗೆ ನಾವೇ ಪುರೋಹಿತರು ಮತ್ತು ನಮ್ಮದೇ ಮಂತ್ರ. ಎಷ್ಟು ಚೆನ್ನಾಗಿತ್ತು ಅಲ್ವಾ, ಆಕಾರವೇ ಇಲ್ಲದ ಕಲ್ಲಿಗೆ ನಾ ನಿಂತ ಸ್ಥಳದಲ್ಲೇ ಗುಡಿಯೊಂದನ್ನು ಕಟ್ಟಿ ಅದಕ್ಕೆ ದೇವರು ಅನ್ನುವ ಪಟ್ಟಿಯನ್ನು ಕೊಟ್ಟೆ ಅದಕ್ಕೆ ನನ್ನದೇ ರೀತಿಯಲ್ಲಿ ಪೂಜೆಯನ್ನು ಮಾಡಿದೆ ಆಗ ಸಿಕ್ಕಂತಹ ಆ ಸಂತೋಷ ನೆಮ್ಮದಿ ಇಂದು ಇನ್ಯಾವುದೋ ದೂರದ ಊರಿನಲ್ಲಿರುವ ಅದ್ಭುತವಾದ ಬೃಹತ್ ಆಕಾರದ ದೇವರ ಪ್ರತಿಮೆ ಯೊಳ ದೇಗುಲ ಕೋದರು ಸಿಗುವುದಿಲ್ಲವೇ? ಸದಾ ಕ್ಷೀರ ಅಭಿಷೇಕ ದಲ್ಲಿ ಮುಳುಗಿ ಈ ಮೂರ್ತಿಗಿಂತ ಯಾವಾಗಲೂ ನೀರಿನಲ್ಲಿ ತೊಳೆಯುತ್ತಿದ್ದ ಆ ಮೂರ್ತಿ ನಮ್ಮ ಮನಸ್ಸಿನಲ್ಲಿ ಉಳಿದಿದೆ ಏಕೆ? ನಾವು ಇರುವ ಸ್ಥಳದಲ್ಲಿಯೇ ದೇವರನ್ನು ಕಾಣುವ ಶಕ್ತಿ ಅಷ್ಟು ಚಿಕ್ಕ ವಯಸ್ಸಿನಲ್ಲಿ ನಮಗೆ ಬಂದಿದ್ದಾದರೂ ಹೇಗೆ? ಆದರೆ ಈಗ ಪುರಾತನಕಾಲದಿಂದಲೂ ತಮ್ಮ ಹಿರಿಮೆಯನ್ನು ಕಾಪಾಡಿಕೊಂಡು ಬಂದಿರುವ ದೇವಾಲಯಗಳಿಗೆ ಆದರೂ ದೇವರಿಲ್ಲ ಎಂಬ ಭಾಸ ಬರುವುದಾದರೂ ಏಕೆ? ಯಾರು ಕಲಿಸದ ಮಂತ್ರ ನಾವು ಕಟ್ಟಿದ ಗುಡಿಯಲ್ಲಿ ವೇಳೆಗೆ ನಮ್ಮ ತಲೆಗೆ ತುಂಬಿದವರಾರು? ಹೀಗೆ ಹೇಳುತ್ತಾ ಬಂದರೆ ಸುಮಾರು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ ನಿಂತಲ್ಲೇ ದೇವರನ್ನು ಸೃಷ್ಟಿಸುವ ಆಗೋ ಕಾಣುವ ಸಾಮರ್ಥ್ಯ ನಮಗಿದೆ ಆದರೆ ಕಷ್ಟ ಬಂದಾಗ ನಮ್ಮ ಮನೆಯಲ್ಲೇ ಇರುವ ದೇವರಕೋಣೆ ನಮ್ಮ ಬುದ್ಧಿಗೆ ಹೊಳೆಯುವುದೇ ಇಲ್ಲ, ದೂರದ ಊರಿನಲ್ಲಿ ಏಳು ಬೆಟ್ಟಗಳ ಮೇಲಿರುವ ತಿರುಪತಿ ತಿಮ್ಮಪ್ಪನು ಅಥವಾ ಕೈಲಾಸದಲ್ಲಿ ಗಿರಿಯಲ್ಲಿರುವ ಶ್ರೀ ಮಂಜುನಾಥನ ನೆನಪಾಗುತ್ತಾರೆ. ಕಾರಣ ಇಷ್ಟೇ ನಮ್ಮನ್ನು ನಾವೇ ನಮ್ಮ ಬುದ್ಧಿಗೆ ಅಡಿಯಾಳಾಗಿಸಿದ್ದೇವೆ.
ಹಂಡೆಯನ್ನು ಸೀಳುವ ಸಾಮರ್ಥ್ಯವುಳ್ಳ ನಾವು ಇಲ್ಲಿಗೆ ಹೆದರಿ ಕೈಮುಗಿಯುವ ಪರಿಸ್ಥಿತಿಯನ್ನು ತಲುಪಿದ್ದೇವೆ. ನಾವೇ ಸೃಷ್ಟಿ ಮಾಡಿದ ದೇವರ ಮುಂದೆ ನಿಂತು ನಿನ್ನನ್ನು ಸೃಷ್ಟಿ ಮಾಡಿದವರು ಯಾರು ಎಂದು ಗಂಟೆಗಟ್ಟಲೆ ಭಾಷಣ ಮಾಡುವಷ್ಟು ಮೂರ್ಖರು ನಾವೆಂದು ಅನಿಸುತ್ತದೆ. ಇದು ಮನುಷ್ಯನ ಬದಲಾಗುತ್ತಿರುವ ಬುದ್ಧಿಗೆ ನನ್ನದೊಂದು ಉದಾಹರಣೆಯಷ್ಟೇ. ಒಂದು ವೇಳೆ ನಾನು ಬರೆದದ್ದು ನಿಮಗೆ [ಓದುಗರಿಗೆ] ಸರಿ ಅನಿಸಿದಲ್ಲಿ ಇಂದಿನ ದೇವಾಲಯಗಳಲ್ಲಿರುವ ದೇವರಿಗೆ ಸಲ್ಲಲಿ, ತಪ್ಪಾದಲ್ಲಿ ನಾನು ಕಟ್ಟಿದ ಇಟ್ಟಿಗೆ ಗುಡಿಯ ದೇವರಿಗೆ ಸಲ್ಲಲಿ ಎಂದು ಭಾವಿಸುತ್ತೇನೆ.
–ತೇಜಸ್ವಿನಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ