ವೃತ್ತಿಪರ ವಿದೇಶಿಯರಿಗೆ ಪೌರತ್ವ ಕೊಡಲು ಮುಂದಾದ ಯುಎಇ

0
35

ಅಬುಧಾಬಿ: ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ) ಇತಿಹಾಸದಲ್ಲೇ ಮೊದಲ ಬಾರಿಗೆ ಆಯ್ದ ವಿದೇಶಿಗರಿಗೆ ಪೌರತ್ವ ನೀಡಲು ಮುಂದಾಗಿದೆ. ಒಂದು ವೇಳೆ ಈ ನೀತಿ ಜಾರಿಯಾದರೆ ವಿದೇಶಿಗರಿಗೆ ಪೌರತ್ವ ನೀಡಿದ ಮೊದಲ ಗಲ್ಫ್ ದೇಶ ಎನಿಸಿಕೊಳ್ಳಲಿದೆ. ಯುಎಇನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರಿಗೆ ಇದರಿಂದ ಲಾಭ ಆಗುವ ಸಾಧ್ಯತೆ ಇದೆ.

ಟ್ವಿಟ್ಟರ್‌‌ನಲ್ಲಿ ಈ ವಿಷಯ ಪ್ರಕಟಿಸಿರುವ ಯುಎಇ ಪ್ರಧಾನಿ ಶೇಖ್‌ ಮೊಹಮ್ಮದ್‌ ಬಿನ್‌ ರಷೀದ್‌ ಅಲ್‌ ಮಕ್ತೋಂ, ‘ಹೂಡಿಕೆದಾರರು, ಪ್ರತಿಭಾವಂತರು, ವಿಜ್ಞಾನಿಗಳು ವೈದ್ಯರು, ಎಂಜಿನಿಯರ್‌ಗಳು, ಕಲಾವಿದರು ಮತ್ತಿತರ ವೃತ್ತಿಪರರಿಗೆ ಯುಎಇ ಪೌರತ್ವ ಕಲ್ಪಿಸಲು ಕಾನೂನು ತಿದ್ದುಪಡಿ ತರಲಾಗುತ್ತದೆ’ ಎಂದು ಹೇಳಿದ್ದಾರೆ. ಅಲ್ಲದೇ ಪ್ರತಿಯೊಂದು ವಿಭಾಗದಲ್ಲಿ ಪೌರತ್ವಕ್ಕೆ ಅರ್ಹರಾದ ವ್ಯಕ್ತಿಗಳನ್ನು ಯುಎಇ ಸಂಪುಟ ಸದಸ್ಯರು, ಸ್ಥಳೀಯ ಎಮಿರಿ ಕೋರ್ಟ್‌ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ನಾಮನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಯುಎಇಯಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇದೆ. ಅವರಲ್ಲಿ ಶೇ.80ರಷ್ಟುಮಂದಿ ವಿದೇಶಿಗರಾಗಿದ್ದಾರೆ. ದಶಕಗಳಿಂದ ಯುಎಇ ಆರ್ಥಿಕತೆಗೆ ವಿದೇಶೀಯರು ಗಣನೀಯ ಪ್ರಮಾಣದ ಕೊಡುಗೆ ನಿಡುತ್ತಿದ್ದಾರೆ. ಹೀಗಾಗಿ ಹೂಡಿಕೆದಾರರು ಹಾಗೂ ಪ್ರತಿಭಾನ್ವಿತರನ್ನು ಆಕರ್ಷಿಸಲು ವಿದೇಶಿಗರಿಗೆ ದೀರ್ಘಾವಧಿ ವೀಸಾ ನೀಡುವ ಕ್ರಮವನ್ನು ಇತ್ತೀಚೆಗೆ ಜಾರಿಗೆ ತರಲಾಗಿತ್ತು. ಆದರೆ ಪೌರತ್ವಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ವಿದೇಶೀಯರಿಗೂ ಪೌರತ್ವ ನೀಡುವ ಕ್ರಮಕ್ಕೆ ಈಗ ಸರ್ಕಾರ ಮುಂದಾಗಿದೆ.

LEAVE A REPLY

Please enter your comment!
Please enter your name here