ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು: ಪ್ರೋ.ಪಿ.ಎಸ್.ಯಡಪಡಿತ್ತಾಯ

0
120
????????????????????????????????????
Tap to know MORE!

ಮಂಗಳೂರು: ಮನಸ್ಸಿನ ಒಳಗಿನಿಂದ ಸಹಾನುಭೂತಿಯಿದ್ದರೆ ಮಾತ್ರ ಸಾಮರ್ಥ್ಯ, ಇಚ್ಚಾಶಕ್ತಿ ಮತ್ತು ಅವಕಾಶ ಬಳಸಿ ಸಾಧಿಸಿ, ಇತರರಿಗೆ ಮಾದರಿಯಾಗಬಹುದು. ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ವಿವಿಧ ಯೋಜನೆಗಳ ಉದ್ಘಾಟನೆ ಬಳಿಕ ಡಾ. ಡಿ. ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಸಮಾಜದಿಂದ ಪಡೆದದ್ದನ್ನು ಹಿಂದಿರುಗಿಸುವುದು ನಮ್ಮ ಕರ್ತವ್ಯ. ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು, ಎಂದರು. ಇದೇ ವೇಳೆ ವಿಶ್ವವಿದ್ಯಾನಿಲಯವು ಆರಂಭಿಸಿರುವ ‘ವಾತ್ಸಲ್ಯ ನಿಧಿ’ ಯೋಜನೆ ಉದ್ಘಾಟಿಸಿದ ಬ್ಯಾಂಕ್‌ ಆಫ್‌ ಬರೋಡಾದ ಸಿಟಿ ವಲಯ ಮಂಗಳೂರು ಇಲ್ಲಿನ ಪ್ರಾದೇಶಿಕ ವ್ಯವಸ್ಥಾಪಕ ಸುನಿಲ್ ಕೆ. ಪೈ, ವಿಶ್ವವಿದ್ಯಾನಿಲಯದ ಸಮಾಜಮುಖಿ ಕೆಲಸಗಳಿಗೆ ಬ್ಯಾಂಕ್‌ ಸದಾ ನೆರವಾಗುತ್ತದೆ, ಎಂದರು.

ಇದನ್ನೂ ಓದಿ: ಮಂಗಳೂರು: ವಿವಿ ಕಾಲೇಜಿನಲ್ಲಿ ʼಕ್ಯಾಂಪಸ್ ಕ್ಲೀನ್ ಡ್ರೈವ್ʼ

ಕುಲಪತಿಗಳು ವಿಶ್ವವಿದ್ಯಾನಿಲಯದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಗಿರುವ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು, ಹಾಜರಿ ಪುಸ್ತಕವನ್ನು ಸಮಿತಿಯ ಅಧ್ಯಕ್ಷೆ ಪ್ರೊ. ಬಿ ಕೆ ಸರೋಜಿನಿ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕುಲಪತಿಗಳು ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್‌ ಹಸ್ತಾಂತರಿಸಿದರು.

ಕುಲಸಚಿವ ಕೆ ರಾಜು ಮೊಗವೀರ ಅವರು ಮಾತನಾಡಿ, ʼವಾತ್ಸಲ್ಯ ನಿಧಿʼ ಯೋಜನೆಯ ಸದುಪಯೋಗವಾಗಬೇಕು. ಆರ್ಥಿಕವಾಗಿ ಕುಸಿತ ಅನುಭವಿಸಿರುವ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಶುಲ್ಕದ ಪ್ರತಿ ರೂಪಾಯಿ ಸದುಪಯೋಗವಾಗಬೇಕು, ಎಂದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸುವ ಮೂಲಕ 2021-22 ನೇ ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಕೊಣಾಜೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಒ) ಶ್ರೀಮತಿ ಸವಿತಾ, ಬ್ಯಾಂಕ್ ಆಫ್ ಬರೋಡಾ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್‌) ಕೊಣಾಜೆ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿದರು.

ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ, ಕಾರ್ಯಕಾರೀ ಎಂಜಿನಿಯರ್‌ ಉಮೇಶ್‌ ಭಟ್‌ ವೈ, ಎನ್‌ಎಸ್‌ಎಸ್‌ ಸಂಯೋಜಕ ಡಾ. ಗೋವಿಂದರಾಜ್‌ ಬಿ ಎಂ, ಬ್ಯಾಂಕ್ ಆಫ್ ಬರೋಡಾ ಹಿರಿಯ ಶಾಖಾ ವ್ಯವಸ್ಥಾಪಕ ಲಕ್ಷ್ಮಿಕಾಂತ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಪ್ರಶಾಂತ್‌ ನಾಯ್ಕ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಾಂಜಿ ಮತ್ತು ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here