ಇನ್ನು ಮುಂದೆ ಜಾತ್ರೆ, ರಥೋತ್ಸವಗಳನ್ನು ನಡೆಸಬಹುದು | ಅನುಮತಿ ನೀಡಿದ ರಾಜ್ಯ ಸರ್ಕಾರ

0
20

ಬೆಂಗಳೂರು: ದೇವಸ್ಥಾನ, ಮಠ, ಮಂದಿರಗಳಲ್ಲಿ ಬೃಹತ್ ಜಾತ್ರೆ, ಬ್ರಹ್ಮರಥೋತ್ಸವ, ವಿಶೇಷ ಉತ್ಸವ, ಅನ್ನ ದಾಸೋಹ, ಪ್ರಸಾದ ವಿತರಣೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರವು ಈ ಸಂಬಂಧ ಆದೇಶವನ್ನು ಹೊರಡಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿತ್ತು. 2020ರ ಸೆಪ್ಟೆಂಬರ್ 1 ರಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ವಿಧಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಲಕ್ಷಾಂತರ ಜನರು ಸೇರುವ ಜಾತ್ರೆ, ಬ್ರಹ್ಮರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳಿಗೆ ನಿಷೇಧ ಮುಂದುವರಿದಿತ್ತು.

ಇದನ್ನೂ ಓದಿ: ಕೋವಿಡ್-19| ಕೇಂದ್ರ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ – ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶ!

ಮಠ, ಮಂದಿರಗಳಲ್ಲಿ ವಾರ್ಷಿಕ ಜಾತ್ರೆಗಳಿಗೆ ಅವಕಾಶ ನೀಡುವಂತೆ ಕೋರಿ ಮನವಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ಇಲಾಖೆಗಳ ಜೊತೆ ಪರಾಮರ್ಶೆ ನಡೆಸಿತ್ತು. ಆರೋಗ್ಯ ಇಲಾಖೆಯ ಅಭಿಪ್ರಾಯವನ್ನೂ ಕೂಡಾ ಪರಿಗಣಿಸಿತ್ತು. ಬಳಿಕ ಧಾರ್ಮಿಕ ಉತ್ಸವಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿತ್ತು.

ಈಗ ರಾಜ್ಯದ ಎಲ್ಲಾ ಮಠ, ಮಂದಿರ, ದೇಗುಲಗಳಲ್ಲಿ ವಾರ್ಷಿಕ ಉತ್ಸವಗಳನ್ನು ಆಯೋಜಿಸಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಕೊರೋನಾ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾಗಿದೆ. ಈ ಷರತ್ತನ್ನು ಪಾಲಿಸುವುದಾದರೆ ಮಾತ್ರ ದೇವಾಲಯಗಳಲ್ಲಿ ಬೃಹತ್ ಜಾತ್ರೆ ಆಯೋಜಿಸಬಹುದಾಗಿದೆ.

LEAVE A REPLY

Please enter your comment!
Please enter your name here