ಮೂಡುಬಿದಿರೆ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ತಲುಪಿಸಲು ಒಬ್ಬ ಸರ್ಕಾರಿ ಅಧಿಕಾರಿಯಿಂದ ಸಾಧ್ಯವಾಗುತ್ತದೆ. ಇಂತಹ ಹುದ್ದೆಯನ್ನು ಏರಲು ನಾಗರಿಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ಸುನ್ನು ಪಡೆಯುವುದು ಮುಖ್ಯ ಎಂದು ನಿವೃತ್ತ ಕಂದಾಯ ಅಧಿಕಾರಿ ಜಯಪ್ರಕಾಶ ರಾವ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಾನವಿಕ ವಿಭಾಗದಿಂದ ಆಯೋಜಿಸಲಾಗಿದ್ದ ನಾಗರಿಕ ಸೇವೆಗೆ ಆಯ್ಕೆಯಾಗುವ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, “ಯಶಸ್ಸು ಗಳಿಸಬೇಕಾದರೆ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕನಸುಗಳಿಗೆ ಭಾವನಾತ್ಮಕ ರೂಪ ನೀಡಿ ಅದನ್ನು ಭಿನ್ನವಾಗಿ ಕಾರ್ಯ ರೂಪಕ್ಕೆ ತರುವುದರ ಬಗ್ಗೆ ಯೋಚನೆಯಿರಬೇಕು. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದೃಢ ಸಂಕಲ್ಪ, ಸ್ಪಷ್ಟತೆ, ಕ್ರಿಯಾತ್ಮಕ ಅಲೋಚನೆಗಳಿಂದ ಮಾತ್ರ ಸಾಧ್ಯ ಎಂದರು.
ಇದನ್ನೂ ಓದಿ: “ಮಹಿಳೆಯರ ರಕ್ಷಣೆ ಮತ್ತು ಸಮಾನತೆ”: ಬೀದಿನಾಟಕ ಸ್ಪರ್ಧೆ
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಒಂದು ತಪಸ್ಸಿನ ಹಾದಿ. ಪ್ರತಿಯೊಬ್ಬರು ಕಠಿಣ ಪರಿಶ್ರಮದಿಂದ ನಡೆದರೆ ಯಶಸ್ಸು ಸಾಧ್ಯ. ಇದರೊಂದಿಗೆ ಸರಿಯಾದ ಮಾರ್ಗದರ್ಶನ ಹಾಗೂ ಸತತ ಪ್ರಯತ್ನ ಇದ್ದಲ್ಲಿ ನೆನೆಸಿದ ಗುರಿಯನ್ನು ತಲುಪಬಹುದು ಎಂದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಐಎಎಸ್ ಆಕಾಡಮಿ ನಿರ್ದೇಶಕ ಸುನಿಲ್ ಬಿ ಎನ್., ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ ಎಸ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿ ಜೇಸನ್ ಸ್ವಾಗತಿಸಿ, ರೇಷಲ್ ಫೆರ್ನಾಂಡೀಸ್ ವಂದಿಸಿ, ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ರೇಷಲ್ ಕೆ ಎಸ್ ನಿರೂಪಿಸಿದರು.