ಇಬ್ಬರು ವಯಸ್ಕರು ಮದುವೆಯಾಗಲು ಇಚ್ಛಿಸಿದರೆ, ಪೋಷಕರ ಒಪ್ಪಿಗೆ ಅಗತ್ಯವಿಲ್ಲ : ಸುಪ್ರೀಂಕೋರ್ಟ್

0
127
Tap to know MORE!

ನವದೆಹಲಿ (ಫೆ. 14): ಇಬ್ಬರು ವಯಸ್ಕರು ಪರಸ್ಪರ ಮದುವೆಯಾಗಲು ಒಪ್ಪಿಕೊಂಡಾಗ ಕುಟುಂಬ, ಸಮುದಾಯ ಅಥವಾ ಕುಲದ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕದ ಬೆಳಗಾವಿ ಜೋಡಿಯೊಂದರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕೌಲ್ ಮತ್ತು ನ್ಯಾ. ಹೃಷಿಕೇಶ್ ರಾಯ್ ಅವರಿದ್ದ ದ್ವಿಸದಸ್ಯ ಪೀಠವು, ತಮಗಿಷ್ಟವಾದ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡು ಮದುವೆಯಾಗಬಯಸುವ ವಯಸ್ಕರ ಹಕ್ಕನ್ನು ಪೋಷಕರು ಗೌರವಿಸಬೇಕು ಎಂದು ಸಲಹೆ ನೀಡಿದೆ. ಅಲ್ಲದೆ, ವಯಸ್ಕರಿಗಿರುವ ಹಕ್ಕನ್ನು ‘ವರ್ಗ ಗೌರವ’ ಅಥವಾ ‘ಗುಂಪು ಚಿಂತನೆ’ ಎಂಬ ಪರಿಕಲ್ಪನೆಗಳಿಂದ ಪ್ರಭಾವಿಸಬಾರದು ಎಂದು ಸೂಚಿಸಿದೆ.

ಈ ಪ್ರಕರಣದಲ್ಲಿ ಯುವತಿಯು ತನ್ನ ಪೋಷಕರಿಗೆ ಮಾಹಿತಿ ನೀಡದೆ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದಳು. ಆದರೆ ಆಕೆಯ ಪೋಷಕರು ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಆಕೆ ಇರುವ ಸ್ಥಳ ಮತ್ತು ವಿವಾಹದ ಬಗ್ಗೆ ತಿಳಿದ ನಂತರವೂ ತನಿಖಾಧಿಕಾರಿ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ಮುರ್ಗೋಡ್ ಪೊಲೀಸ್ ಠಾಣೆಯ ಮುಂದೆ ಹಾಜರುಪಡಿಸಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲು ಒತ್ತಾಯಿಸಿದ್ದರು. ಹೀಗಾಗಿ ಈ ಜೋಡಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ತನಿಖಾಧಿಕಾರಿಯು ಯುವತಿಗೆ ಮರಳಿ ಕರ್ನಾಟಕಕ್ಕೆ ಬರಬೇಕು, ಇಲ್ಲದ್ದಿದ್ದರೆ ನಿನ್ನ ಪತಿಯ ವಿರುದ್ಧ ಕಿಡ್ನಾಪ್ ಕೇಸ್ ದಾಖಲಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಳು.

ಇದನ್ನೂ ಓದಿ: ಸಾಂಕ್ರಾಮಿಕದ ಕಾರಣ ಶಾಲಾ ಶುಲ್ಕದಲ್ಲಿ ವಿನಾಯಿತಿ ಇಲ್ಲ – ಶೈಕ್ಷಣಿಕ ವರ್ಷದ ಪೂರ್ತಿ ಶುಲ್ಕವನ್ನು ಕಟ್ಟಬೇಕು: ಸುಪ್ರೀಂ ಕೋರ್ಟ್

ಇಂದಿನ ಯುವ ಜನತೆಗೆ ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹೀಗಾಗಿ ಪೋಷಕರು ಮತ್ತು ಸಮಾಜ ಅಂತರ್ಜಾತಿ ಮತ್ತು ಅಂತರ ಧರ್ಮಿಯ ವಿವಾಹಗಳನ್ನು ಒಪ್ಪಿಕೊಳ್ಳುವುದು ಕಲಿತುಕೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಕಾನೂನು ಉಲ್ಲಂಘಿಸದೇ ವಿವಾಹವಾದ ಜೋಡಿಗಳಿಗೆ ಭದ್ರತೆ ನೀಡಬೇಕು. ಈ ಪ್ರಕರಣದಲ್ಲಿ ಜೋಡಿಗೆ ಬೆದರಿಕೆ ಹಾಕಿದ ತನಿಖಾಧಿಕಾರಿಗೆ ಸಲಹೆ ನೀಡುವುದು ಮಾತ್ರವಲ್ಲದೆ, ಇಂತಹ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಪೊಲೀಸರಿಗೆ ಅಗತ್ಯ ತರಬೇತಿ ಕಾರ್ಯಕ್ರಮ ರೂಪಿಸಬೇಕು, ಸಾಮಾಜಿಕವಾಗಿ ಸೂಕ್ಷ್ಮ ಪ್ರಕರಣಗಳನ್ನು ನೋಡಿಕೊಳ್ಳಲು ಕೆಲ ಮಾರ್ಗಸೂಚಿಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ನ್ಯಾಯಪೀಠವು ಹೇಳಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಪ್ರಕರಣದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠವು ಡಾ.ಬಿ.ಆರ್.ಅಂಬೇಡ್ಕರ್ ಅವರ ‘ಜಾತಿನಾಶ’ ವಿಚಾರವನ್ನು ಉಲ್ಲೇಖಿಸಿದೆ. ‘ನಿಜವಾದ ಪರಿಹಾರವೆಂದರೆ ಅಂತರ್ ವಿವಾಹ ಎಂದು ನನಗೆ ಮನವರಿಕೆಯಾಗಿದೆ. ರಕ್ತದ ಸಮ್ಮೀಳನವು ಕೇವಲ ಸಂಬಂಧಿ ಮತ್ತು ರಕ್ತಸಂಬಂಧಿ ಎಂಬ ಭಾವನೆಯನ್ನುಂಟು ಮಾಡುತ್ತದೆ. ಈ ಭಾವನೆ ಹೊರತುಪಡಿಸಿ ರಕ್ತಸಂಬಂಧ, ಸಂಬಂಧಿಕರು, ಅತ್ಯುನ್ನತವಾದುದು, ಪ್ರತ್ಯೇಕತಾವಾದಿ ಭಾವನೆ, ವಿದೇಶಿಯರು ಎಂಬ ಭಾವನೆ ಜಾತಿಯಿಂದ ಸೃಷ್ಟಿಯಾಗುವುದಿಲ್ಲ’ ಎಂಬ ಸಾಲುಗಳನ್ನು ನ್ಯಾಯಪೀಠವು ಪ್ರಸ್ತಾಪಿಸಿದೆ.

LEAVE A REPLY

Please enter your comment!
Please enter your name here