ಕೋವಿಡ್ ೨ನೇ ಅಲೆ ತಡೆಗೆ ಲಾಕ್​ಡೌನ್ ಹೇರುವ ಬಗ್ಗೆ ಸರ್ಕಾರ ಆಲೋಚಿಸಬೇಕು: ಸುಪ್ರೀಂ ಕೋರ್ಟ್ ಸೂಚನೆ

0
401
Tap to know MORE!

ದೆಹಲಿ: ‘ದೇಶದಲ್ಲಿ ಕೊರೊನಾ 2ನೇ ಅಲೆಯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಹೆಚ್ಚು ಜನರು ಸೇರುವ, ಸೂಪರ್ ಸ್ಪ್ರೆಡರ್ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಲಾಕ್​ಡೌನ್ ಹೇರುವ ಬಗ್ಗೆಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಲೋಚಿಸಬೇಕು’ ಎಂದು ಸುಪ್ರೀಂಕೋರ್ಟ್​ ಭಾನುವಾರ ರಾತ್ರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಭಾನುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ‘ಲಾಕ್​ಡೌನ್​ನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ. ಆದರಲ್ಲಿಯೂ ಬಡವರ ಮೇಲೆ ಲಾಕ್​ಡೌನ್​ನ ಪರಿಣಾಮಗಳು ತೀವ್ರತರವಾಗಿರುತ್ತವೆ ಎಂಬುದು ನಮಗೆ ತಿಳಿದಿದೆ. ಲಾಕ್​ಡೌನ್ ಹೇರಿದರೆ ಈ ಸಮುದಾಯದ ಹಿತ ಕಾಪಾಡಲು ಅಗತ್ಯ ಕ್ರಮಗಳನ್ನೂ ಸರ್ಕಾರಗಳು ತೆಗೆದುಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್​ ಹೇಳಿದೆ.

‘ಸ್ಥಳೀಯ ಗುರುತಿನ ಪುರಾವೆಗಳು ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು. ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡಿಕೊಳ್ಳುವ ಕುರಿತು ಕೇಂದ್ರ ಸರ್ಕಾರವು ಇನ್ನು 2 ವಾರಗಳ ಒಳಗೆ ರಾಷ್ಟ್ರೀಯ ನೀತಿಯೊಂದನ್ನು ರೂಪಿಸಬೇಕು. ಇದನ್ನು ಎಲ್ಲ ರಾಜ್ಯ ಸರ್ಕಾರಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸುಪ್ರೀಂಕೋರ್ಟ್​ ಸೂಚಿಸಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ದಾಸ್ತಾನು ಇರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಊಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾದರೆ, ಅದನ್ನು ಎದುರಿಸಲು ಬೇಕಿರುವಷ್ಟು ತುರ್ತು ಬಳಕೆ ವಸ್ತುಗಳ ದಾಸ್ತಾನು ಇರಿಸಿಕೊಳ್ಳಬೇಕು. ಮುಂದಿನ ನಾಲ್ಕು ದಿನಗಳ ಒಳಗೆ ತುರ್ತು ದಾಸ್ತಾನು ಸಿದ್ಧವಾಗಬೇಕು. ಇದನ್ನು ಪ್ರತಿದಿನವೂ ಪರಿಶೀಲಿಸಬೇಕು. ಯಾವುದೇ ರಾಜ್ಯಕ್ಕೆ ಆಕ್ಸಿಜನ್ ಸರಬರಾಜಿನಲ್ಲಿ ತೊಂದರೆಯಾಗಬಾರದು’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್​ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿತು. ಈ ವೇಳೆ ಆಕ್ಸಿಜನ್, ಜೀವರಕ್ಷಕ ಔಷಧಿಗಳು ಮತ್ತು ಲಸಿಕೆಗಳ ಪೂರೈಕೆ ಬಗ್ಗೆ ಸುಪ್ರೀಂಕೋರ್ಟ್​ ಪರಾಮರ್ಶೆ ನಡೆಸಿತು.

LEAVE A REPLY

Please enter your comment!
Please enter your name here