ಆಕ್ಸಿಜನ್ ಕುರಿತು ಜನರಿಗೆ ಯಾವುದೇ ಗೊಂದಲ ಬೇಡ: ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಕೋಟ ಪೂಜಾರಿ

0
85

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಮಾಹಿತಿ ಪ್ರಕಟವಾಗುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶಾಸಕರು ಮತ್ತು ಸಂಸದರೊಂದಿಗೆ ತುರ್ತು ಸಭೆ ನಡೆಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ. ವಿ‌. ಆಕ್ಸಿಜನ್ ಸ್ಥಿತಿಗತಿಯ ಬಗ್ಇ ವಿವರಿಸಿದರು. ಸದ್ಯ ಜಿಲ್ಲೆಯಲ್ಲಿ ಬಳ್ಳಾರಿ ಮತ್ತು ಪಾಲಕ್ಕಾಡ್‌ನಿಂದ 25 ಟನ್ ಆಕ್ಸಿಜನ್ ಸರಬರಾಜು ಆಗುತ್ತಿದ್ದು, ಈವರೆಗೆ ಸರಬರಾಜಿನಲ್ಲಿ ಕೊರತೆಯಾಗಿಲ್ಲ. ಪಾಲಕ್ಕಾಡ್‌ನಿಂದ ಬರುವ ಸರಾಸರಿ 06 ಟನ್ ಆಕ್ಸಿಜನ್ ವಿಳಂಬವಾಗದಂತೆ ಕ್ರಮ ಕೈಳ್ಳಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಸದ್ಯಕ್ಕೆ ಜಿಲ್ಲೆಯಲ್ಲಿ 430 ಮಂದಿ ಆಕ್ಸಿಜನ್‌ಯುಕ್ತ ಚಿಕಿತ್ಸೆ ಪಡೆಯುತ್ತಿದ್ದು ಐಸಿಯು ಮತ್ತು ವೆಂಟಿಲೇಟರ್ ಸೌಲಭ್ಯದಲ್ಲಿ 200ಕ್ಕೂ ಅಧಿಕ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೆನ್ಲಾಕ್‌ನಲ್ಲಿ ಹೆಚ್ಚು ವೆಂಟಿಲೇಟರ್ ಜೋಡಿಸಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

ಹೊಸ ಆಕ್ಸಿಜನ್ ಉತ್ಪಾದನಾ ಘಟಕವೂ ಸೇರಿದಂತೆ, ಜಿಲ್ಲೆಯಲ್ಲಿ ಕೊರೋನಾ ಎದುರಿಸಲು ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕಿಶೋರ್ ಮತ್ತು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ| ಸದಾಶಿವ ಶ್ಯಾನುಭೋಗ್ ವಿವರಿಸಿದರು.

ಎಂತಹ ಕಠಿಣ ಪರಿಸ್ಥಿತಿಯನ್ನು ಜಿಲ್ಲಾಡಳಿತ ಸರ್ವ ತಯಾರಾಗಿರಬೇಕೆಂದು ಉಸ್ತುವಾರಿ ಸಚಿವ ಕೋಟ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ತುರ್ತು ಸಭೆಯಲ್ಲಿ ಶಾಸಕ ಡಾ| ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here