ಮುಲ್ಕಿ: ಮುಲ್ಕಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯದೇವಸ್ಥಾನದ ಬೆಳ್ಳಾಯರು ಜಳಕದ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ, ಮಾಧ್ಯಮದವರೊಂದಿಗೆ ಮಾತನಾಡಿ ಮೂಡಾ ವತಿಯಿಂದ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಬೆಳ್ಳಾಯರು ಜಳಕದ ಕೆರೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು ಕೆರೆಯ ಅಭಿವೃದ್ಧಿ ಜೊತೆಗೆ ದೇವರ ಕೆಲಸಗಳಿಗೆ ಅಡ್ಡಿ ಬಾರದ ರೀತಿಯಲ್ಲಿ ಕೆರೆಯ ಬದಿಯಲ್ಲಿ ವಿಶ್ರಾಂತಿ ತಂಗುದಾಣ, ಹಾಗೂ ಕೆರೆಯ ಸುತ್ತಲೂ ಗಿಡಗಳನ್ನು ನೆಡುವುದರ ಮೂಲಕ ಸುಂದರ ಪರಿಸರ ನಿರ್ಮಾಣಕ್ಕೆ ಒತ್ತು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಮಸ್ಥರ ಸಹಕಾರದಿಂದ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
ಜಳಕದ ಕೆರೆ ಅಭಿವೃದ್ಧಿ ಅಧ್ಯಕ್ಷರಾದ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು ಮಾತನಾಡಿ ಜಲಕದ ಕೆರೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆರೆಯ ಬದಿಯಲ್ಲಿ ನೂತನ ಬಾವಿ ನಿರ್ಮಾಣದ ಯೋಜನೆ ಇದ್ದು ಅದರ ನೀರನ್ನು ಇಡೀ ಪಡುಪಣಂಬೂರು ಗ್ರಾಮಕ್ಕೆ ಕುಡಿಯುವ ನೀರು ಯೋಜನೆಗೆ ಬಳಸಲಾಗುವುದು ಎಂದರು.
ತೋಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರಿದಾಸ ಭಟ್, ಬಿಜೆಪಿ ಪ್ರಮುಖರಾದ ಲಕ್ಷ್ಮಣ್ ಸಾಲಿಯಾನ್ ಪುನರೂರು, ದಿವೇಶ್ ದೇವಾಡಿಗ, ಮೋಹನ್ದಾಸ್, ಸುಂದರ ಕೆರೆ ಕಾಡು, ಗಣೇಶ್, ಯತೀಶ್, ಹೇಮರಾಜ್, ಊರಿನ ಪ್ರಮುಖರಾದ ರಾಜೇಶ್ ಪಿಆರ್, ಶ್ರೀನಿವಾಸ ಆಚಾರ್ಯ, ದೇವಳದ ಸಿಬ್ಬಂದಿ ಉಮೇಶ್ ದೇವಾಡಿಗ, ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.