ಉಡುಪಿ: ಜೂನ್ 14 ರಿಂದ ಅನ್ಲಾಕ್ | ಮಾರ್ಗಸೂಚಿಗಳನ್ನು ಪ್ರಕಟಿಸಿದ ಜಿಲ್ಲಾಧಿಕಾರಿ

0
152
Tap to know MORE!

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಜೂನ್ 14ರ ಬೆಳಗ್ಗೆ 6 ಗಂಟೆಯಿಂದ ಕೋವಿಡ್ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲಿದ್ದು, ಈ ಸಂದರ್ಭದಲ್ಲಿ ಸರ್ಕಾರ ಸೂಚಿಸಿರುವ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಚಟುವಟಿಕೆಗಳನ್ನು ಕೈಗೊಂಡರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಅನ್‌ಲಾಕ್ ಸಮಯದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮರ್ಪಕ ಅನುಷ್ಠಾನ ಮಾಡುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಿರುವ ಕಾರಣ ರಾಜ್ಯ ಸರ್ಕಾರ ಪ್ರಸ್ತುತ ವಿಧಿಸಲಾಗಿದ್ದ ನಿರ್ಬಂಧಗಳಲ್ಲಿ ಸಡಿಲಿಕೆ ನೀಡಿ, ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಜೂನ್ 14 ರಿಂದ 21ರವರೆಗೆ ಜಿಲ್ಲೆಯಲ್ಲಿ ಈ ಮುಂದಿನಂತೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ,

  • ಎಲ್ಲಾ ಉತ್ಪಾದನಾ ಚಟುವಟಿಕೆ ನಿರ್ವಹಿಸುವ ಕೈಗಾರಿಕಾ ಸಂಸ್ಥೆಗಳು (ಶೇ.50ರಷ್ಟು ಕಾರ್ಮಿಕರು)
  • ಗಾರ್ಮೆಂಟ್ ಗಳಲ್ಲಿ (ಶೇ.30 ಸಿಬ್ಬಂದಿ)
  • ಕಟ್ಟಡ ನಿರ್ಮಾಣ ಮತ್ತು ರಿಪೇರಿ ಚಟುವಟಿಕೆಗಳಿಗೆ ಅಗತ್ಯವಿರುವ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯವಿರುವ ವಸ್ತುಗಳ ಮಾರಾಟ ಮಳಿಗೆಗಳು
  • ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ, ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ
  • ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು
  • ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ.
  • ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್
  • ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ
  • ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ ಹಿಂದಿನಂತೆ ಯಾವುದೇ ನಿರ್ಭಂಧಗಳಿಲ್ಲ
  • ಇದನ್ನು ಹೊರತುಪಡಿಸಿ ಇತರೇ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ

ಇನ್ನುಳಿದಂತೆ,

  • ಪಾರ್ಕ್ ಗಳು ಬೆಳಗಿನ ವಾಕಿಂಗ್ ಮಾಡಲು ಬೆ.5 ರಿಂದ 10 ರವರೆಗೆ ಮಾತ್ರ ತೆರೆಯಲು ಅವಕಾಶ ನೀಡಿದ್ದು, ಪಾರ್ಕ್ ನಲ್ಲಿ ಇತರೆ ಕ್ರೀಡೆಗಳು ಸೇರಿದಂತೆ ಇತರ ಯಾವುದೇ ಚಟುವಟಿಕೆಗೆ ಅನುಮತಿಯಿಲ್ಲ.
  • ಟ್ಯಾಕ್ಸಿ ಮತ್ತು ಆಟೋದಲ್ಲಿ ಗರಿಷ್ಠ 2 ಪ್ರಯಾಣಿಕರು ಮಾತ್ರ ಸಂಚರಿಸಲು ಅನುಮತಿಯಿದೆ.
  • ಕನ್ನಡಕದ ಅಂಗಡಿಗಳು ಬೆ.6 ರಿಂದ 10 ರವರೆಗೆ ತೆರೆಯಲು ಅವಕಾಶ
  • ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ನೈಟ್ ಕರ್ಫ್ಯೂ ಇರಲಿದ್ದು, ರಾತ್ರಿ 7 ಗಂಟೆಯಿಂದ ಮರುದಿನ ಬೆಳಗ್ಗೆ 5ರವರೆಗೆ ಓಡಾಟವನ್ನು ನಿರ್ಭಂಧಿಸಲಾಗಿದೆ.

ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವವರು , ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಂಸ್ಥೆಗಳ ನೌಕರರು ಸೂಕ್ತ ಗುರುತಿನ ಚೀಟಿಯೊಂದಿಗೆ, ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ನೌಕರರು, ವೈದ್ಯಕೀಯ ಸಿಬ್ಬಂದಿಗಳ ಸಂಚಾರಕ್ಕೆ ನಿರ್ಬಂಧಗಳಿಲ್ಲ, ಸರಕು ಸಾಗಾಣಿಕೆ ವಾಹನಗಳು, ಇ ಕಾಮರ್ಸ್ ಮತ್ತು ಹೋಂ ಡೆಲಿವರಿ ಸೇವೆ ನೀಡುವ ವಾಹನಗಳು ಹಾಗೂ ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ

ಜೂನ್ 21 ರಿಂದ ಕೋವಿಡ್ ಲಸಿಕೆ ಎಲ್ಲರಿಗೂ ಉಚಿತ: ಪ್ರಧಾನಿ ಮೋದಿ

ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಿರುವ ಎಲ್ಲಾ ಫೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತಹಸೀಲ್ದಾರ್ ಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.

ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಈ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು, ತುರ್ತು ಮತ್ತು ಅಗತ್ಯ ಸೇವೆ , ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ಇಲಾಖೆಗಳು ಮತ್ತು ಕೈಗಾರಿಕೆ ಕಾರ್ಯನಿರ್ವಹಿಸಲು ಅನುಮತಿಯಿದ್ದು, ಈ ಕಚೇರಿಗಳ ಮತ್ತು ಸಂಸ್ಥೆಗಳ ನೌಕರರು ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು ಸಹ ಈ ಸಮಯದಲ್ಲಿ ಕಾರ್ಯನಿರ್ವಹಿಸಬಹುದು.

ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ. ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್ ಗೆ ಅವಕಾಶವಿದೆ. ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ ಹಿಂದಿನಂತೆ ಯಾವುದೇ ನಿರ್ಭಂಧಗಳಿಲ್ಲ, ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದರು. ಸೂಕ್ತ ಅನುಮತಿಯೊಂದಿಗೆ ಗರಿಷ್ಠ 40 ಮಂದಿ ಮೀರದಂತೆ ಮದುವೆಗಳನ್ನು ಮನೆಗಳಲ್ಲಿ ನಡೆಸಲು ಅನುಮತಿಯಿದ್ದು, ಶವಸಂಸ್ಕಾರದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದಾಗಿದೆ ಎಂದು ಹೇಳಿದರು.

ಅನ್‌ಲಾಕ್ ಅವಧಿಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗದಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅನುಮತಿ ನೀಡಲಾದ ಚಟುವಟಿಕೆ ಹೊರತುಪಡಿಸಿ ಇತರೆ ಚಟುಚಟಿಕೆ ನಡೆಸುವವವರ ವಿರುದ್ದ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಎಎಸ್ಪಿ ಕುಮಾರ ಚಂದ್ರ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here