ಕನ್ನಡ BIGGBOSS 8ನೇ ಆವೃತ್ತಿ ಪುನರಾರಂಭ? ಮುನ್ಸೂಚನೆ ನೀಡಿದ ಪರಮೇಶ್ವರ್ ಗುಂಡ್ಕಲ್

0
343
Tap to know MORE!

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ತೀವ್ರತೆಗೆ ಅರ್ಧಕ್ಕೇ ಸ್ಥಗಿತವಾಗಿದ್ದ ಬಿಗ್‌ಬಾಸ್‌ (Biggboss) ರಿಯಾಲಿಟಿ ಶೋನ ಎಂಟನೇ ಆವೃತ್ತಿ ಶೀಘ್ರದಲ್ಲೇ ಪುನರಾರಂಭವಾಗುವ ಸೂಚನೆಯನ್ನು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ನೀಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಂತೆ ಬಿಗ್‌ಬಾಸ್‌ 8ನೇ ಆವೃತ್ತಿಯ ಎರಡನೇ ಇನಿಂಗ್ಸ್‌ ಇದೇ ಜೂನ್‌ನಲ್ಲೇ ಆರಂಭದ ಮಾಹಿತಿಯನ್ನು ಅವರು ನೀಡಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಗುಂಡ್ಕಲ್‌, ‘ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ’ ಎಂದು ಉಲ್ಲೇಖಿಸಿದ್ದಾರೆ.

ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ…

Parameshwar Gundkal ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 15, 2021

‘ಇದೊಂಥರಾ ಎರಡನೇ ಇನಿಂಗ್ಸ್‌. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್‌ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು. ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಸ್ಪರ್ಧಿಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ. ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ’ ಎಂದು ಗುಂಡ್ಕಲ್‌ ಹೇಳಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದ ವೇಳೆ ಮುಂಜಾಗ್ರತಾ ಕ್ರಮವಾಗಿ ಮೇ 8ರಂದು ಬಿಗ್‌ಬಾಸ್‌ 8ನೇ ಆವೃತ್ತಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕಲರ್ಸ್‌ ಕನ್ನಡ ಚಾನೆಲ್‌ ತೆಗೆದುಕೊಂಡಿತ್ತು. ಬಿಗ್‌ಬಾಸ್‌ ಕನ್ನಡ ಆವೃತ್ತಿಯ ಇತಿಹಾಸದಲ್ಲೇ ಈ ರೀತಿ ಶೋ ಅರ್ಧಕ್ಕೇ ತಿಂತಿರುವ ಘಟನೆ ಇದೇ ಮೊದಲಾಗಿತ್ತು. ಈ ಸಂದರ್ಭದಲ್ಲಿ ‘ಸ್ಪರ್ಧೆಯಲ್ಲಿ ಉಳಿದಿರುವ ಎಲ್ಲರೂ ವಿಜೇತರೇ’ ಎಂದು ನಿರೂಪಕ, ನಟ ಸುದೀಪ್‌ ಸ್ಪರ್ಧಿಗಳಿಗೆ ವಿಡಿಯೊ ಸಂದೇಶದ ಮುಖಾಂತರ ತಿಳಿಸಿದ್ದರು. ಜೊತೆಗೆ ಬಿಗ್‌ಬಾಸ್‌ ಹಾಗೂ ಸುದೀಪ್‌ ಕೊನೆಯಲ್ಲಿ ಆಡಿರುವ ಮಾತು 8ನೇ ಆವೃತ್ತಿ ಮತ್ತೆ ಪ್ರಾರಂಭವಾಗುವ ಸೂಚನೆಯನ್ನೂ ಆಗಲೇ ನೀಡಿತ್ತು. ‘ಈ ಪ್ರಯಾಣ ಪೂರ್ತಿ ಆಗಿಲ್ಲ ಎಂಬ ಬೇಸರ ಬೇಡ. ಹಾಗೆ ನೋಡಿದರೆ, ಯಾವುದೇ ಪ್ರಯಾಣಕ್ಕೂ ಕೊನೆ ಇಲ್ಲ. ಒಂದರ ಕೊನೆ ಇನ್ನೊಂದರ ಆರಂಭ ಎಂಬುದು ನೆನಪಿರಲಿ’ ಎಂದು ಬಿಗ್‌ಬಾಸ್‌ ಹೇಳಿದ್ದರು.

ಕೋವಿಡ್‌ ಕಾರಣದಿಂದಾಗಿ 2020ರಲ್ಲಿ ಬಿಗ್‌ಬಾಸ್‌ ನಡೆದಿರಲಿಲ್ಲ. ಪ್ರಸ್ತುತ ನಡೆಯುತ್ತಿರುವ ಎಂಟನೇ ಆವೃತ್ತಿ ಪೂರ್ಣಗೊಂಡ ಕೂಡಲೇ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ 9ನೇ ಆವೃತ್ತಿ ನಡೆಸುವುದಕ್ಕೂ ಕಲರ್ಸ್‌ ಕನ್ನಡ ಚಿಂತನೆ ನಡೆಸಿದೆ.

LEAVE A REPLY

Please enter your comment!
Please enter your name here