24 ಘಂಟೆಯಲ್ಲಿ 20,000 ಕ್ಕೂ ಅಧಿಕ ಕೊರೋನಾ ಪ್ರಕರಣಗಳ ದಾಖಲು!

0
91

ಭಾರತದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಇದೇ ಮೊದಲ ಬಾರಿಗೆ, ಒಂದೇ ದಿನದಲ್ಲಿ 20,000 ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳ ದಾಖಲಾಗಿ, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದೆ. ಹೆಚ್ಚು ಪೀಡಿತ ರಾಜ್ಯ ಮಹಾರಾಷ್ಟ್ರದಲ್ಲಿ , 24 ಘಂಟೆಯಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 6,000 ದಾಟಿದೆ.

ಭಾರತವು ಕೊರೋನಾ ಸಾಂಕ್ರಾಮಿಕ ರೋಗದಿಂದ ಅತಿ ಹೆಚ್ಚು ಹಾನಿಗೊಳಗಾದ ನಾಲ್ಕನೇ ದೇಶವಾಗಿ ಮುಂದುವರೆದಿದ್ದು, ನಿನ್ನೆಯ ಒಟ್ಟು 20,132 ಹೊಸ ಸೋಂಕಿತರು ಸೇರಿ, ಈವರೆಗೆ ಸೋಂಕಿತರ ಸಂಖ್ಯೆಯು 5,29,577 ಕ್ಕೆ ತಲುಪಿದೆ.

ಇದರ ಮಧ್ಯೆ, ನಿನ್ನೆ ದೇಶದಲ್ಲಿ ಒಟ್ಟು 14,229 ಸೋಂಕಿತರು ಗುಣಮುಖರಾಗಿದ್ದು, ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,10,146 ಕ್ಕೆ ಏರಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 414 ಜನ ಬಲಿಯಾಗಿದ್ದು, ದೇಶದಲ್ಲಿ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 16,103 ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಅದಲ್ಲದೆ, ದೇಶದಲ್ಲಿ ಇದುವರೆಗೆ, 79,96,907 ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗೋವಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ 24 ಘಂಟೆಗಳಲ್ಲಿ ಗರಿಷ್ಠ ಪ್ರಕರಣಗಳು ದಾಖಲಾದವು. ದಿನೇ ದಿನೇ ಸೋಂಕಿನ ಪರೀಕ್ಷೆಗೆ ಒಳಪಡಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ, ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಸುಮಾರು 2.2 ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದುವರೆಗಿನ ದಾಖಲೆಯಾಗಿದೆ.

ಮಹಾರಾಷ್ಟ್ರವು ಭಾರತದಲ್ಲಿ ಅತೀ ಹೆಚ್ಚು ಸೋಂಕಿತರು ಇರುವ ರಾಜ್ಯವಾಗಿ (1.59 ಲಕ್ಷ) ಮುಂದುವರಿದಿದೆ. ದೆಹಲಿ(80,188) ಮತ್ತು ತಮಿಳುನಾಡು(78,335) ನಂತರದ ಸ್ಥಾನದಲ್ಲಿದೆ. ಈ ಮೂರು ರಾಜ್ಯಗಳ ಹೊರತಾಗಿ, ಬೇರೆ ಯಾವ ರಾಜ್ಯದಲ್ಲೂ 40,000 ಕ್ಕೂ ಅಧಿಕ ಸೋಂಕಿತರ ಪತ್ತೆಯಾಗಲಿಲ್ಲ.
ದೇಶದಲ್ಲಿ ಮುಂಬೈ ನಗರವು ಅತೀ ಹೆಚ್ಚು ಸೋಂಕಿತರು (72,175) ಇರುವ ನಗರವಾಗಿದೆ. ದೇಶದ ಎಷ್ಟೋ ರಾಜ್ಯಗಳ ಸೋಂಕಿತರಿಗಿಂತ ಹೆಚ್ಚು ಸೋಂಕಿತರು ಮುಂಬೈ ನಗರದಲ್ಲಿದ್ದಾರೆ.

ಪ್ರಸ್ತುತ ದೇಶದಲ್ಲಿ 2,03,272 ಸಕ್ರಿಯ ಪ್ರಕರಣಗಳು ಇದ್ದು, 3,10,146 ಸೋಂಕಿತರು ಗುಣಮುಖರಾಗಿದ್ದಾರೆ. ಭಾರತದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ಸದ್ಯ ದೇಶದಲ್ಲಿ ಚೇತರಿಕೆ ಪ್ರಮಾಣವು ಶೇ.58.56 ಕ್ಕೆ ಏರಿದೆ ಮತ್ತು ಸಾವಿನ ಪ್ರಮಾಣವು ಶೇ. 3.04 ನಷ್ಟಿದೆ.

ಕೊರೋನಾ ಸೋಂಕಿಗೆ ವಿಶ್ವದಲ್ಲಿ ಭಾರತವು ನಾಲ್ಕನೇ ಅತೀ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದ್ದು, ಅಮೇರಿಕಾ (25.9 ಲಕ್ಷ), ಬ್ರೆಜಿಲ್ (13.1 ಲಕ್ಷ) ಮತ್ತು ರಷ್ಯಾ (6.2 ಲಕ್ಷ ) ಮಾತ್ರ ಭಾರತಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ. ಭಾರತದಲ್ಲಿ ಜನಸಂಖ್ಯೆಯೂ ಹೆಚ್ಚಿರುವುದರಿಂದ, ಪ್ರತಿ 10 ಲಕ್ಷಕ್ಕೆ ದೇಶದಲ್ಲಿ ಕೇವಲ 384 ಸೋಂಕಿತರಿರುತ್ತಾರೆ. ಇದು ಎಷ್ಟೋ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ.

ದೇಶದ ಕೊರೋನಾ ಸೋಂಕಿನ ಕುರಿತು ವಿಸ್ತೃತವಾದ ವಿವರಗಳು ಇಲ್ಲಿದೆ ನೋಡಿ

LEAVE A REPLY

Please enter your comment!
Please enter your name here