ಕೂಡಿಬಾಳುವ ಸುಖ

0
187
Tap to know MORE!

ನಮ್ಮಲ್ಲೊಂದು ಸುಂದರವಾದ ಉಕ್ತಿಯಿದೆ”ನಾಲ್ಪೇ ಸುಖಮಸ್ತಿ.ಭೂಮೈವ ಸುಖಂ”ಸಣ್ಣದರಲ್ಲಿ ಸುಖವೇನು?ಭವ್ಯವಾದದ್ದರಲ್ಲಿಯೆ ಸುಖವಿದೆ.
ಆಲೋಚನೆಯಲ್ಲಿ ಭವ್ಯತೆ,ಬದುಕಿನಲ್ಲಿ ಭವ್ಯತೆ,ಆಚಾರವಿಚಾರಗಳಲ್ಲಿ ಭವ್ಯತೆ….ಇದನ್ನು ಇನ್ನೂ ಬೆಳೆಸಬಹುದಾದ ಪಟ್ಟಿಗೆ ಇನ್ನೊಂದನ್ನು ಸೇರಿಸುವೆ ,ಅದು ಅವಿಭಕ್ತ ಕುಟುಂಬವು ನಮಗೆ ಕೊಡುವ ಭವ್ಯತೆಯ ಅನುಭವ.
ನಾವು ನೋಡುತ್ತಿರುವ ಕಾಲಮಾನ ಎಷ್ಟೊಂದು ವೇಗದಲ್ಲಿ ಬದಲಾಗುತ್ತಿದೆಯೆಂಬುದನ್ನು ನಮಗೆ ಊಹಿಸಲೇ ಸಾಧ್ಯವಾಗುತ್ತಿಲ್ಲ, ಸಮಾಜದಲ್ಲಿ ನಿನ್ನೆ ಮೊನ್ನೆ ಚಾಲ್ತಿಯಲ್ಲಿದ್ದ ಮೌಲ್ಯಗಳು ಬದಲಾಗಿವೆ ಕೆಲವು ಅಪಹಾಸ್ಯಕ್ಕೆ ಒಳಗಾಗಿವೆ,ಇನ್ನು ಕೆಲವು ಈ ಮೊದಲು ಇದ್ದಿದ್ದರ ಕುರುಹೇ ಯಿಲ್ಲದಂತೆ ಮಾಯವಾಗಿವೆ, ಇನ್ನು ಕೆಲವು ಹೊಂದಿಕೊಳ್ಳುವ ,ಬದಲಾಗುವ ಯತ್ನದಲ್ಲಿ ಕುಟುಕು ಜೀವವನ್ನುಳಿಸಿಕೊಂಡು ಏದುಸಿರು ಬಿಡುತ್ತಿವೆ.
ಇಂತಹ ಮೌಲ್ಯಗಳಲ್ಲಿ ಮಾಯವಾದ ಒಂದನ್ನು ಹೇಳುವುದಿದ್ದರೆ ಅದು ನಮ್ಮ “ಅವಿಭಕ್ತ ಕುಟುಂಬ”ದ ಬದುಕು.ನಾವು ಓದಿದ್ದ,ಅರಿತಿದ್ದ,ಬಾಳಿ ಬದುಕಿದ್ದ
ಕುಟುಂಬ ಇಂದು ಮಾಯವಾಗಿದೆ ,ನ್ಯೂಕ್ಲಿಯರ್ ಕುಟುಂಬವೆಂಬ ಹೊಸ ಕಾನ್ಸೆಪ್ಟ್ ಬಂದು ಕೂತಿದೆ,
ನಾನು ಅವಿಭಕ್ತ ಕುಟುಂಬದಲ್ಲಿ ಬೆಳೆದವನು . ಮೂರುಜನ ಅಣ್ಣತಮ್ಮದಿರ ಹೆಂಡತಿ,ಮಕ್ಕಳು,ಅಜ್ಜಿಯರ ಸುಂದರ ಸಮ್ಮಿಳಿತ ಸಂಸಾರದ ಸುಖವನ್ನ ಅನುಭವಿಸಿದ ನೆನಪು ನನ್ನದು.
ಮೂರು ವರ್ಷವಾಗುತ್ತಿದ್ದ ಹಾಗೆಯೇ ,ಒಂದು ವರ್ಷದ ತಮ್ಮನೋ,ತಂಗಿಯನ್ನೋ ನಾವೇ ನೋಡಿಕೊಳ್ಳಬೇಕಿತ್ತು.ಮನೆಯ ಸಣ್ಣಪುಟ್ಟ ಒರೆಸುವುದು,ಗುಡಿಸುವುದು ,ಊಟಕ್ಕೆ ಎಲೆಹಾಕುವುದು,ಎಲೆಗೆ ಉಪ್ಪು ಬಡಿಸುವುದು ನಮ್ಮ ಹೊಣೆ,ಒಟ್ಟಿಗೆ ಶಾಲೆಗೆ ಹೋಗುವುದು.ಸಂಜೆ ಬಾಯಿಪಾಠ,ಭಜನೆ ಮಾಡಿ ಅಂದಿನ ಕೆಲಸದ ಹೊಣೆಯೂ ನಮ್ಮದೆ, ಹಬ್ಬ ,ಹರಿದಿನಗಳಲ್ಲಿ ಹೂವು,ಗಂಧ,,ದೇವರೆದಿರು ಶ್ಲೋಕ ನಮ್ಮ ಹೆಮ್ಮೆ, ಹಸುವಿಗೆ ಹಸಿಹುಲ್ಲು,ಹಂಬೆ-ಹೊಂಬಾಳೆ ನಮ್ಮ ಹೊಣೆ .
ಹೀಗಾಗಿ ನಮ್ಮ‌ಬಾಲ್ಯ ಕಳೆದದ್ದೇ ತಿಳಿಯಲಿಲ್ಲ.ಅದು ಕಳೆಯುವುದರೊಳಗೆ ನಮಗೆ ಕಲಿಸಿಕೊಟ್ಟ ಬದುಕಿನ‌ ರೀತಿನೀತಿಯನ್ನು ಇನ್ನೂ ಮರೆತಿಲ್ಲ.
ಆದರೆ ಕಾಲದ ವೇಗ ನೋಡಿ ನಮ್ಮ ಅನುಭವ,,ಸಂಬಂದಗಳ ಅರಿವು,ತಿಳಿವಳಿಕೆ ನಮ್ಮ ಮಕ್ಕಳಿಗಿಲ್ಲ. ಕಾರಣ ಇಂದಿನ ಧಾವಂತದ ಬದುಕಿನಲ್ಲಿ ನಾವು ಕಲಿತ ಮಂತ್ರವೆಂದರೆ ದುಡಿ,ಮುಂದೆ ಬಾ,ಹಿಂದೆ ತಳ್ಳು.ಹಾಗಾಗಿ ಇಂದಿನವರಿಗೆ ಅವರ ಅಜ್ಜ ಬಾಳಿ ಬದುಕಿದ ರೀತಿ ಆದರ್ಶವಾಗಲಿಲ್ಲ, ಅವರ ನಂಬಿಕೆಗಳು ಗ್ರಾಹ್ಯವಾಗಲಿಲ್ಲ, ನಾನಿಂದು ದುಡಿಮೆ ಮಾಡುತ್ತಿದ್ದರೆ ಅದು ನನ್ನ ಗಳಿಕೆ,ಮತ್ತದು ಕೇವಲ ನನಗೆ ಮಾತ್ರ.ಹಾಗಾಗಿ ನಾವು ನಮಗರಿವಿಲ್ಲದೇ ನಾನು ,ನನ್ನ ಹೆಂಡತಿ ,ನನ್ನ‌ಮಗು ಎಂಬ ವೃತ್ತವನ್ನೆಳೆದುಕೊಂಡು ಅದರೊಳಗೆ ಬಂದಿಯಾದೆವು. ಸುಖ ನೆಮ್ಮದಿಯನ್ನು ಬೂಧಿಮಾಡಿದೆವು.
ಹಿರಿಯರು,ಅವರ ಕರಕರೆ,ಖಾಯಿಲೆ,ನಡವಳಿಕೆಗಳು ಅವರಿಗೇಯಿರಲಿ ನಮಗೆ ಅದು ಹೊಂದುವುದಿಲ್ಲ. ನಮ್ಮ ಸಂತೋಷ ನಮ್ಮದು.ಹಾಗಾಗಿ ನಾವು ಬೇರೆಯಿರೋಣ ವೆಂಬ ಕಲ್ಪನೆಯ ಮೂರ್ತರೂಪಕ್ಕೆ ನ್ಯೂಕ್ಲಿಯರ್ ಫ್ಯಾಮಿಲಿ ಯೆಂಬ ಹೆಸರು .
ಇದು ಈ ಕಾಲದ ಗುಣ ಅದನ್ನು ತಪ್ಪುಸರಿಯೆನ್ನಲಾಗದು.ಆದರೂ ಮನಸ್ಸು ಅವಿಭಕ್ತ‌ ಕುಟುಂಬದ ಅನುಭವಗಳನ್ನು ಆಗಾಗ ನೆನಪಿಸಿಕೊಂಡು ಮರುಗುತ್ತದೆ,ಅಯ್ಯೋ ನಮ್ಮ ಮಕ್ಕಳಿಗೆ ಈ ಸುಖದ ಯಾವ ಅನುಭವವೂ ಯಿಲ್ಲವಾಯ್ತಲ್ಲವೆಂಬ ವೇದನೆ ಯೂ ಬರುತ್ತದೆ.
ನಾವದಕ್ಕೆ ಕೂಡುಕುಟುಂಬ ವೆನ್ನುತ್ತಿದ್ದೆವು . ಮನೆಯಲ್ಲಿ ಅಣ್ಣತಮ್ಮದಿರ ತುಂಬು ಸಂಸಾರ ,ಅಂತಹ ಸಂಸಾರದಲ್ಲಿ ಜವಬ್ದಾರಿಗಳ ಸೂಕ್ತ ಹಂಚಿಕೆ, ಹಿರಿಯರ ಮಾತನ್ನು ಪ್ರಶ್ನಿಸುವ ಹಾಗಿಲ್ಲವೆಂಬ ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳುವ ಮೂಲಕ ವೈಮನಸ್ಸಿಗೆ ಅವಕಾಶ ನೀಡದಿರುವುದು, ಯಜಮಾನರು ಸದಾ ಗಂಭೀರ ವಧನರಾಗಿರುವ ಮೂಲಕ ಸಲುಗೆದೂರ,ಮನೆಯ ಸದಸ್ಯರಲ್ಲಿ ಯಾವ ಬೇಧಭಾವ ಮೂಡದಿರುವುದು. ಸಾಮೂಹಿಕ ದುಡಿಮೆ,ಸಾಮೂಹಿಕ ಬೋಜನ, ಮುಂತಾದ ನಿಯಮಗಳ ಮೂಲಕ ಇಡೀ ಕುಟುಂಬವು ಸುಲಲಿತ ವಾಗಿ ಎಲ್ಲರೂ ಸೇರಿ ಎಳೆವ ತೇರಿನಂತೆ ಸಾವಕಾಶವಾಗಿ ನಡೆವ ಸಂಸಾರದ ಸೊಗಸನ್ನು ನೋಡಬೇಕು.
ನನ್ನ ಹತ್ತಿರದ ಬಂಧುವೊಬ್ಬರ ಕೂಡುಕುಟುಂಬದ ಸೊಗಸನ್ನು ನಾನು ನೋಡಿದ್ದೇನೆ. ಮನೆಯ ಸದಸ್ಯರೇ ಇಪ್ಪತ್ತೈದು ಜನರಿದ್ದರು, ಅನಾಥನೊಬ್ಬ ಬಂದು ಸೇರಿದ್ದ, ಓದಲಿಕ್ಕಾಗಿ ಬಂದ ಒಂದಿಬ್ಬರಿದ್ದರು. ಬಾದರಾಯಣ ಸಂಬಂಧದ ನೆಂಟರು ಯಾರಾದರೂ ಇರುತ್ತಿದ್ದರು. ಅವರ ಮನೆಯಲ್ಲಿ ರಾತ್ರಿ ಇಷ್ಟು ಜನರಲ್ಲದೆ ಇನ್ನೊಂದು ನಾಲ್ವರಿಗೆ ಅಡುಗೆಯನ್ನ ಪ್ರತಿನಿತ್ಯ ಹೆಚ್ಚುವರಿಯಾಗಿ ಮಾಡುತ್ತಿದ್ದರು.ಕಾರಣ ಬಂದೇ ಬರುತ್ತಿದ್ದ ನೆಂಟರು!!!
ಇಷ್ಟು ಜನರಿಗೆ ಅಡುಗೆ ಮಾಡುವ ಗುರುತರ ಜವ್ದಾರಿಯನ್ನು ಹೊತ್ತು ಮುಖದ ನಗು ಮಾಸದಂತೆ ಉಪಚರಿಸುವ ಹಿರಿಯ ಹೆಂಗಸು,ಮನೆಯ ಹೊರಕೆಲಸಗಳನ್ನು, ಅಚ್ಚುಕಟ್ಟುತನದಿಂದ ನಿಭಾಯಿಸುವ ಇನ್ನೊಬ್ಬ ಸೊಸೆ.ತೊಟತುಡಿಕೆಯ ಜವಬ್ದಾರಿ ಒಬ್ಬರಿಗೆ,ಪೇಟೆ ಮಂಡಿ ವ್ಯವಹಾರ ಇನ್ನೊಬ್ಬರಿಗೆ, ….ಇನ್ನು ಸಣ್ಣ ಮುಸುಕಿನ ಗುದ್ದಾಟ,ವೈಮನಸ್ಸು ಬೇಸರ ಬೇಗುದಿ ,ಕಣ್ಣೀರು, ಈರ್ಷ್ಯೆ.ಸಹಜವೇ ಆಗಿತ್ತು.ಸಂಜೆಗೆ ಹಿರಿಯರ ಮಾತು,ಚರ್ಚೆ,ಇಸ್ಪೇಟಾಟ,ಮಕ್ಕಳಕೇಕೆ.ಗದ್ದಲ,ಕೂಗು…..ಹೀಗೆ ಆ ಒಂದು ಕುಟುಂಬವನ್ನು ನೋಡಿದರೆ ನಮ್ಮ‌ಕಣ್ಣೆದಿರು ಸಣ್ಣದೊಂದು ಭಾರತವೇ ಮೂಡುವುದು.
ಇದನ್ನೆಲ್ಲವನ್ನೂ ಒಟ್ಟಂದದಲ್ಲಿ ನೋಡಿದರೆ ನಮಗೆ ಜೇನುಗೂಡಿನ ಚಿತ್ರ ಮನದಲ್ಲಿ ಮೂಡುತ್ತದೆ.
ಒಟ್ಟಿಗೆ ದುಡಿಯುವ,ಒಟ್ಟಿಗೆ ಉಣ್ಣುವ ನಮ್ಮ ಕೂಡುಕುಟುಂಬದ ಖುಷಿ ಯಾವತ್ತು ನೆನಪಾದರೂ ಖುಷಿಯ ಉಲ್ಲಾಸವನ್ನೇ ತರುತ್ತದೆ.
ಇದು ನಮ್ಮ ಮಕ್ಕಳಿಗಿಲ್ಲ.ಮತ್ತು ನಮಗೆ ಮಕ್ಕಳೂ ಹೆಚ್ಚಿಲ್ಲ. ಇರೋ ಒಂದು ಮಗುವನ್ನೂ ನೋಡಿಕೊಳ್ಳಲೂ ಆಗದಷ್ಟು ಹೊಟ್ಟೆಪಾಡಿನ ಉದ್ಯೋಗದೊತ್ತಡ. ಈ ಒತ್ತಡವನ್ನು ಕಡಿಮೆ ಮಾಡಲೋಯೆಂಬಂತೆ ಹೆಂಡತಿಗೂ ಉದ್ಯೋಗ. ಇಬ್ಬರಿಗೂ ಬೀಳುವ ಒತ್ತಡದ ಪರಿಣಾಮವಾಗಿ ಬತ್ತಿಹೋದ ಸಂತಾನದ ಅಪೇಕ್ಷೆ.ಆಗುವ ಒಂದೇ ಮಗುವಿಗೂ ಗಮನ ಕೊಡಲಾಗದ ಉಮ್ಮಳ,ಈ ಉಮ್ಮಳ,ಒತ್ತಡದ ಸೆಣೆಸಾಟದ ಪರಿಣಾಮವಾಗಿ ನಲವತ್ತಕ್ಕೇ ಬಂದೆರಗುವ ನರೆ,ಮಧುಮೇಹ. ಪ್ರೆಷರ್,ಇದನ್ನು ಕಡಿಮೆಮಾಡಲು ಯೋಗ, ಧ್ಯಾನ ,ಕಪಾಲಬಾತಿ,ಅದು ಯಾವುದೂ ಆಗದೆ ಐಟಿ ಬಿಟಿಯನ್ನು ತೊರೆದು ಮರಳಿ ಮೇಟಿಯನ್ನೇ ಹಿಡಿಯುವ ಬಯಕೆ. ಮನೆಯಲ್ಲಿ ಮಾತುಕೇಳದ ಮಗ, ಗೊಣಗುವ ಪತ್ನಿ,ನನಗೆ ಬೇಜಾರೂ, ನನಗೆ ನೀವು ಟೈಮ್ ಕೊಡಲ್ಲವೆಂಬ ಮಗಳ ತಕರಾರು.
ಯಾವುದೂ ಕೈಗೂಡದೇ ಮಧ್ಯವಯಸ್ಸಿಗೇ ಅಕಾಲ ವೃದ್ದಾಪ್ಯ,
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಸುಖ ,ಸವಲತ್ತು ಕಡಿಮೆಯಿದ್ದರೂ ನಮ್ಮ ಹಿರಿಯರ ಬದುಕು ನೆಮ್ಮದಿಯಿಂದ ಕೂಡಿತ್ತು.ಅದು ಜೇನಿನ ಗೂಡಾಗಿತ್ತು

ಹರೀಶ್ ಟಿ.ಜಿ

LEAVE A REPLY

Please enter your comment!
Please enter your name here