ಒಬ್ಬೊಬ್ಬರನ್ನು ಒಂದೊಂದು ಸಂಗತಿಗಳು ಕಾಡುತ್ತವೆ,ಅದು ನಮ್ಮ ಬಾಲ್ಯವನ್ನು ಪ್ರಭಾವಿಸಿದ್ದಾದರೆ ಅದರ ಕಾಡುವಿಕೆ ಅತ್ಯಂತ ತೀವ್ರವಾಗಿರುತ್ತದೆ.
ನಾನು ದಟ್ಟ ಮಲೆನಾಡಿನ ಕುಗ್ರಾಮವೊಂದರಲ್ಲಿ ನನ್ನ ಬಾಲ್ಯವನ್ನು ಕಳೆದವನು.ನಾಗರಿಕತೆ ಕಳೆದ ದಶಕದಿಂದೀಚೆಗೆ ವಿಪರೀತವೇಗದಲ್ಲಿ ಬೆಳೆದಿರುವುದರಿಂದ ಹಲವರಿಗೆ ಕುಗ್ರಾಮವೆಂದರೆ ವಿವರಿಸಬೇಕಾಗುತ್ತದೆ,ಅಲ್ಲದೆ ಇವತ್ತಿನ ತಲೆಮಾರಿಗೆ ಕನ್ನಡ ಪದಸಂಪತ್ತು ತೀರಾಸಂಕುಚಿತ ಗೊಂಡಿರುವುದರಿಂದಲೂ ನಾನು ವಿವರಿಸುವ ಕೆಲಸವನ್ನು ಮಾಡಬೇಕು.
ಕುಗ್ರಾಮವೆಂದರೆ ಕೆಟ್ಟಗ್ರಾಮವಲ್ಲ,ಬದಲಿಗೆ ಯಾವುದೇ ಮೂಲಭೂತ ಸೌಲಬ್ಯಗಳಿಲ್ಲದ ಹಳ್ಳಿ. ನಮ್ಮ ಹಳ್ಳಿಯಲ್ಲಿ ನಮ್ಮ ಮನೆಯ ಸುತ್ತ ಮೂರುಮೈಲಿ ದೂರದವರೆಗೆ ಮತ್ತೊಂದು ಮನೆಯಿಲ್ಲ, ವಿದ್ಯುತ್, ಸಾರಿಗೆ ಶೌಚಾಲಯ,ಆರೋಗ್ಯ,ಇತ್ಯಾದಿ ಯಾವ ಸೌಲಭ್ಯವೂ ಇರಲಿಲ್ಲ. ಶಾಲೆಗೋ, ಪೇಟೆಗೋ ನಡೆದೇ ಹೋಗಬೇಕಿತ್ತು.ಮಳೆಗಾಲದಲ್ಲಿ ಹಲವುದಿನಗಳ ಕಾಲ ಸಂಪರ್ಕ ವೇ ಇರುತ್ತಿರಲಿಲ್ಲ.
ಇಂತಹ ಕಡೆ ಜೀವಕ್ಕೇನಾದರೂ ಅನಾಹುತವಾದರೆ ಜೋರಾಗಿ ಜಾಗಟೆ ಬಡಿಯುವುದೋ, ಬಂದೂಕು ಉಢಾಯಿಸುವುದೋ ಮಾಡುತ್ತಿದ್ದರು. ಟೈಟಾನಿಕ್ ಅಪಾಯಕ್ಕೆ ಸಿಲುಕಿದಾಗ ಹಡಗಿನಿಂದ ಆಗಸದೆತ್ತರಕ್ಕೆ ಪಟಾಕಿ ಹಾರಿಸುವುದನ್ನು ನೋಡುತ್ತಿದ್ದಾಗ ನನ್ನ ಹಳ್ಳಿಯ ಜನರ ಬವಣೆ ಅರಿವಾಗಿತ್ತು.
ಇಂತಹ ಕುಗ್ರಾಮದ ನಮ್ಮನ್ನು ನಮ್ಮ ಸುತ್ತಮುತ್ತಲ ಸಂಗತಿಗಳೇ ಪ್ರಭಾವಿಸಬೇಕಲ್ಲದೆ ಅನ್ಯವಿಚಾರಗಳು ನಮ್ಮನ್ನು ಸೋಂಕುತಿರಲಿಲ್ಲ.
ಇಂತಹ ಪ್ರಭಾವಗಳನ್ನು ಗಮನಿಸುವಾಗ ನನಗೆ ಕಾಡು ನೆನಪಾಗುತ್ತದೆ.
ನಾವು ಮನೆಯ ನಿತ್ಯ ವ್ಯವಹಾರಗಳಿಗೆ ಈ ಕಾಡನ್ನೇ ಅವಲಂಭಿಸಿದ್ದೆವು, ಮನೆಯ ಉರುವಲಿಗಾಗಿ ನಾವು ದಿನನಿತ್ಯ ಕಾಡಿಗೆ ಹೋಗುತ್ತಿದ್ದೆವು, ಹಟ್ಟಿಗೆ ಸೊಪ್ಪು,ತರಗೆಲೆಗಾಗಿ ಕಾಡನ್ನೇ ಅವಲಂಭಿಸಿದ್ದೆವು, ನಾವು ಪೂಜಿಸುವ ನಾಗ, ಚೌಡಿ, ಜೇನಕಲ್ಲಮ್ಮ, ಮಾರಿಗಳು ಕಾಡಿನಲ್ಲಿಯೇ ವಾಸವಾಗಿದ್ದರಿಂದ ವರ್ಷದ ನಿಗಧಿತ ದಿನದಲ್ಲಿ ನಾವು ಶೃದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿದ್ದೆವು. ನಮ್ಮಲ್ಲಿ ಹಲವರು ತಮ್ಮ ಆಹಾರಮೂಲವಾದ ಕಾಡುಪ್ರಾಣಿಗಳ ಬೇಟೆಗಾಗಿ ಆಗಾಗ ಕಾಡುಸೇರಿ ಹಳುವನ್ನು ಸೌರಿ, ಗೊತ್ತುಕೂತು ಶಿಕಾರಿ ಮಾಡುತ್ತಿದ್ದರು.ಬಾಲಕರು ಹಕ್ಕಿಪಕ್ಕಿ,ಮೊಲ,ಹುಂಡುಕೋಳಿಗಾಗಿ ಉರುಳು,ಸೆಬೆಯೇ ಮುಂತಾದ ಸ್ಥಳೀಯ ಉಪಾಯಗಳಿಂದ ಶಿಕಾರಿಯಲ್ಲಿ ಪಳಗಲು ಕಾಡುಸೇರುತ್ತಿದ್ದರು,ನಮ್ಮ ಅಮ್ಮನಿಗೆ ಉಪ್ಪಿನಕಾಯಿಗೆ ಬೇಕಾದ ಮಾವು,ನೆಲ್ಲಿ,ಕವಳೆಕಾಯಿಗಳಿಗಾಗಿ ಕಾಡು ಬೇಕಿತ್ತು.
ನಮ್ಮಬಾಲಕರ ಯಾವತ್ತೂ ರಮಣೀಯ ತಾಣ ಕಾಡೇ ಆಗಿರುತ್ತಿತ್ತು.ಅಲ್ಲಿನ ಸಂಪಗೆಹಣ್ಣು,ಜೀರ್ಕಲ, ಹುಳಿಗೆ,ಕಬಳೆಯೇ ಮುಂತಾದ ಹಣ್ಣುಗಳ ಬಯಕೆ ನಮಗೆ ಅವಕಾಶವಾದಾಗಲೆಲ್ಲ ನುಗ್ಗಲು ಪ್ರೇರೇಪಿಸುತ್ತಿತ್ತು, ಜೇನು,ಗಡ್ಡೆ ಗೆಣಸು ಲಭ್ಯವಾಗುತ್ತಿದ್ದುದು ಕಾಡಿನಲ್ಲಿ. ಜಾನುವಾರುಗಳನ್ನು ಮೇಯಿಸಲು,ಕಾಲಾಡಲು ಕಾಡಿಗೆ ಬಿಡುತ್ತಿದ್ದೆವು.ಈ ರೀತಿಯಲ್ಲಿ ಕಾಡು ನಮ್ಮಬದುಕಿನ ಭಾಗವಾಗಿತ್ತು, ಹಾಗಾಗಿ ಕಾಡಿನ ಯಾವುದೋ ಮೂಲೆಯಲ್ಲಿಯೇ ನಮ್ಮ ಮನೆಯಿರುತ್ತಿತ್ತು , ನಾವು ಬೆಳೆವ ಭತ್ತ, ಅಡಕೆ, ತರಕಾರಿಗಳಲ್ಲಿ ಕಾಡು ಪ್ರಾಣಿಗಳಿಗೂ ಪಾಲಿರುತ್ತಿತ್ತು.
ನಾವು ಇಂದು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದರೂ ನಮ್ಮ ಸ್ಮರಣೆಯ ಕೋಶದಲ್ಲಿ ಈ ಕಾಡು ಶಾಶ್ವತವಾಗಿ ಅಚ್ಚೊತ್ತಿನಿಂತಿದೆ.
ಆ ಕಾಡಿನ ನಿಗಿನಿಗಿ ಸೌಂದರ್ಯ. ಪಾತಾಳದ ಕೂಪಗಳು.ಮುಗಿಲಿಗೆ ರೆಂಬೆಗಳನ್ನು ಚಾಚಿನಿಂತ ವೃಕ್ಷಗಳು.ಕುರುಚಲು ಗಿಡಗಳು,ಕಾಲಿಗೆ ತೊಡರುವ ಬಳ್ಳಿ, ಅಂಗಾಲಿಗೆ ಚುಚ್ಚಿ ಹೊರಬರುವ ಕಲ್ಲಸಂಪಗೆ ಮುಳ್ಳು,ಕಾಲಬುಡದಲ್ಲಿಯೇ ಠಣ್ಣೆಂದು ನೆಗೆಯುವ ಮೊಲ ,ರಕ್ತಹೀರುವ ಜಿಗಣೆ, ಕಚ್ಚಿಕೊಳ್ಳುವ ಉಣುಗು,ಮುಟ್ಟಿದರೆ ತುರಿಸುವ ನಸುಗುನ್ನಿ,ಮುನಿವ ನಾಚಗೆಮುಳ್ಳು,ಕಿಚಪಚ ಮಂಗ,ಕಚಪಚ ಕೆಸರುಗಳ ಮೂಲಕ ಕಾಡು ರುದ್ರ ರಮಣೀಯವಾಗಿ ಕಂಗೊಳಿಸುತ್ತಿತ್ತು,
ಹಾಗಂತ ನಮಗೆಂದೂ ಕಾಡು ಭಯಜನಕವೆನಿಸಲಿಲ್ಲ. ಅಲ್ಲಿ ಮರಹತ್ತಿ ಆಡಿದೆವು, ಬಳ್ಳಿಯ ಉಯ್ಯಾಲೆಯಾಡಿದೆವು, ಎತ್ತರದಿಂದ ಜಾರಿದೆವು, ನೀರಿಗೆ ಧುಮುಕಿದೆವು. ಅಳಿಲು ಮೊಲವನ್ನು ಕಂಡು ಸಂಭ್ರಮಿಸಿದೆವು, ಕೋತಿಯನ್ನುಕಂಡು ಅಣಕಿಸಿದೆವು, ಓತಿಗಳನ್ನು ಕಂಡು ಕಲ್ಲೆಸೆದೆವು, ಹುಲಿಜೇಡನಿಗೆ ಭಯಗೊಂಡೆವು,ಹಕ್ಕಿರಟ್ಟೆ ಮುರಿವ ಆಟವಾಡಿದೆವು , ಮರಕೋತಿಯಾಡಿದೆವು, ಮರವನ್ನು ಹತ್ತಿ ಕೆಳಗೆ ಹೊಳೆಗೆ ಧುಮುಕಿದೆವು, ಆಗೆಲ್ಲಾ ಕಾಡಮ್ಮ ನಮ್ಮನ್ನು ಮಕ್ಕಳಂತೆ ಸಲಹಿದಳು.
ಬಾಲ್ಯದಲ್ಲಿ ಕಾಡು ಕತೆಯಾಗಿ ಕೂಡಾ ನಮ್ಮನ್ನು ಕಾಡಿತು. ಭಕ್ತದ್ರುವ, ಪ್ರಹ್ಲಾದರು ನಮಗೆ ಇಲ್ಲಿಯೇ ಸಿಕ್ಕಿದರು, ಶ್ರವಣ ಕುಮಾರ , ರಾಮ ಸೀತೆಯರು ನಮ್ಮ ಕಾಡಿನಲ್ಲಿಯೇ ಕೂತು ಎದ್ದು ಹೋದದ್ದರ ಗುರುತನ್ನೂ ನೋಡಿದೆವು, ರಾಮ ಮಾರೀಚನನ್ನು ವಧೆ ಮಾಡಿದ ಜಾಗವನ್ನೂ ನೋಡಿದೆವು, ವೆಂಕಟರಮಣ ನಮ್ಮೂರಿನ ಬೆಟ್ಟದ ಮೇಲೆಯೇ ಕೋಲೂರಿ ತಿರುಪತಿ ಗಿರಿಗೆ ನೆಗೆದದ್ದರ ಕುರುಹನ್ನೂ ಅಚ್ಚರಿಯಿಂದ ನೋಡಿದೆವು.
ಅಲ್ಲಿ ಯೆಣೆಯಾಡುವ ನಾಗ , ನರ್ತಿಸುವ ನವಿಲು, ಹಲ್ಲುಕಿರಿವ ಮಂಗ,ಬೆಳ್ಕೋರೆಯ ಒಂಟಿಗ ಹಂದಿ,ಮುದ್ದಾದ ಕಾಡುಕುರಿ ,ಅವುಗಳನ್ನು ಮುರಿವ ಕಿರುಬ ಹೀಗೆ ಎಲ್ಲವೂ ನಮ್ಮಪ್ರಜ್ಞೆಯ ಭಾಗವಾಯಿತು.
ಇನ್ನು ಕಾಡುಯೆಂದಾಗ ಭಯವೂ ಆಗುತ್ತಿತ್ತು, ಅಲ್ಲೊಂದು ಮರವಿದೆ ಅದಕ್ಕೆ ಹಸುವಿನ ಬಾಲ ಸಿಕ್ಕರೆ ಬಿಡೋದೇಯಿಲ್ಲ ಹಿಡಕೊಳ್ತದೆ, ಜೀವ ಬೇಕಾದರೆ, ಬಾಲವನ್ನು ತುಂಡರಿಸಿಕೊಂಡೇ ಬರಬೇಕು!! ಹೆಣವನ್ನು ಕಾಡ ಹಾದೀಲಿ ಕೊಂಡೊಯ್ಯುವ ಸಂದರ್ಭದಲ್ಲಿ ಹೆಣದ ಎಡಗಾಲುನ್ನು ತಾಗಿದ ಗಿಡಕ್ಕೆ ವಿಶೇಷ ಶಕ್ತಿ ಬರುತ್ತದೆ, ಯಾರಾದರೂ ರಾತ್ರಿ ಅಲ್ಲಿ ಪಯಣಿಸುವಾಗ ಅ ಗಿಡವನ್ನು ಮುಟ್ಟಿದರೆ,ಏನು ಮಾಡಿದರೂ ಮನೆಯ ದಾರಿ ಸಿಗದಂತೆ ತಪ್ಪಿಹೋಗಿ ,ಕೂಗಲೂ ಆಗದೇ ರಾತ್ರಿಯಿಡೀ ಕಾಡನ್ನು ಅಲೆಯ ಬೇಕು, ಬೆಳಗ್ಗೆ ನೋಡಿದರೆ !!ಅಲ್ಲಿಯೇ ಮಾರುದೂರದಲ್ಲಿ ಮನೆ!!
ಇನ್ನೊಂದು ಮರವಿದೆ ಅದು ಕೂಕೊಳುವ ಮರ ! ಕಾಡಿನಲ್ಲಿ ಯಾರಾದರೂ ಆ ಮರವನ್ನು ಮುಟ್ಟಿದರೆ ಅದು ಗಟ್ಟಿಯಾಗಿ ಹಿಡಕೊಂಡು ಸಿಳ್ಳೆ ಹಾಕುತ್ತದೆ . ನೀವು ಒದ್ದಾಡುತ್ತಿರುವಂತೆಯೇ ಹೆಬ್ಬಾವೊಂದು ಬಂದು ನಿಮ್ಮನ್ನು ನುಂಗುತ್ತದೆ ,ಬಚಾವಾಗಲು ಒಂದೇ ದಾರಿ, ಆಗ ನಿಮ್ಮಬಳಿ ಎರಡು ಕತ್ತಿಯಿದ್ದರೆ ಅವನ್ನು ಕತ್ತರಿಯಂತೆ ಭುಜದ ಅಕ್ಕಪಕ್ಕ ಯಿಟ್ಟುಕೊಳ್ಳಿ, ಹೆಬ್ಬಾವು ನಿಮ್ಮನ್ನು ನುಂಗಿದ ಹಾಗೂ ಇದು ಬಾಯಿಯ ಎರಡೂಕಡೆಯಿಂದ ಹಾವನ್ನು ಕತ್ತರಿಸುತ್ತದೆ, ಕಡೆಗೆ ಹಾವು ನಿಮ್ಮನ್ನು ಪೂರಾ ನುಂಗುವಷ್ಟರಲ್ಲಿ ಹಾವೇ ಎರಡು ತುಂಡಾಗಿ ಬೀಳುತ್ತದೆ!!ರಾತ್ರಿ ಕಾಡಿನಲ್ಲಿ ಪಯಣಿಸುವಾಗ ಪಕ್ಕದಲ್ಲಿಯೇ ಕೂತ ಹುಲಿ ಗುಢರೆನ್ನುತ್ತದೆ,ಆಗ ಹೆದರಬಾರದು “ಥೂ ನಿನ್ನ ಹೊಂಡಕಡ್ಯಾ, ಕಳ್ ನರಿನಾ ಬಿಸಾಕ” ಎನ್ನಬೇಕು. ತನಗೇ ನರಿ ಅಂದುಬಿಟ್ಟಾಂತ ಹುಲಿಗೆ ಅವಮಾನವಾಗಿ ಓಡಿ ಹೋಗುತ್ತದೆ!!!
ಈ ಕತೆಗಳು ರಾತ್ರಿ ನೆನಪಾಗಿ ಭಯವಾಗುತ್ತಿತ್ತು.
ಇಷ್ಟಾಗಿಯೂ ನಮಗೆ ಕಾಡು ಸದಾ ಪ್ರಿಯವೇ ಆಗಿರುತ್ತಿತ್ತು, ಮನೆಯ ಬಳಿಯ ಕಾಡು ಸಾಕಾಗದೇ ನಾವು ಕೊಡಚಾದ್ರಿ, ಕುಂದಾದ್ರಿ, ಕವಲೇದುರ್ಗಗಳತ್ತ ಆಗಾಗ ಹೋಗಿ ಅಲ್ಲಿನ ರುದ್ರ ಚೆಲುವನ್ನು ಆಸ್ವಾದಿಸುತ್ತಿದ್ದೆವು. ಸಾವಿರಾರು ಮೀಟರ್ ಎತ್ತರದಿಂದ ಕೆಳಗಿನ ಊರನ್ನು ನೋಡಿ ಸಂತೋಷ ಪಡುತ್ತಿದ್ದೆವು.ಅಲ್ಲಿಯೇ ರಾತ್ರಿ ಉಳಿದು ಮರುದಿನ ಮನದ ತುಂಬ ಉಲ್ಲಾಸದೊಂದಿಗೆ ಮರಳುತ್ತಿದ್ದೆವು,ಮತ್ತೆ ಮುಂದಿನ ವರ್ಷ!! ಕಾಡಿನಮರಗಳನ್ನ ಗುರುತಿಸುವ ಪಕ್ಷಿ ಪ್ರಾಣಿಗಳ ನಡೆವಳಿಕೆ ಯನ್ನು ಗಮನಿಸುವ , ಯಾವಕಾಲದಲ್ಲಿ ಯಾವ ಹೂವಾಗುತ್ತದೆ, ಹಣ್ಣು ಸಿಗುತ್ತದೆ,ಎಲ್ಲಿ ಹಲಸು,ಮಾವಿನಮರವಿದೆ, ಎಲ್ಲಿ ಉಗುಣೆ ಬಳ್ಳಿ ಯಿದೆ ಎಲ್ಲಿ ಪೆಟ್ಲಿನ ಜುಮ್ಮನ ಕಾಯಿಯಿದೆ ಯೆಂಬುದೆಲ್ಲ ನಮ್ಮ ತಲೆಯಲ್ಲಿ ದಾಖಲಾಗಿತ್ತು,
ನಾವು ಕಾಡಿನಮಕ್ಕಳಾಗಿ ಕಾಡಿನೊಂದಿಗೆ ಸಹಜೀವನ ನಡೆಸುತ್ತಿದ್ದೆವು .ಮರ,ಬಳ್ಳಿಗಳ ಪರಿಚಯ, ಪ್ರಾಣಿಗಳ ನೆಲೆ,ಜೇನಿನ ನಡೆ, ಹಾವಿನ ವಾಸನೆ,ಮಂಗಟ್ಟೆ ಹಕ್ಕಿಯ ಗೂಡು..ಹೀಗೆ ಪ್ರತಿಯೊಂದನ್ನೂ ನಾವು ಅಧ್ಯಯನ ಮಾಡಿ ಅದರಂತೆಯೇ ನಮ್ಮ ಬದುಕನ್ನು ರೂಪಿಸಿಕೊಂಡಿದ್ದೆವು.
ಬದಲಾದ ಕಾಲಘಟ್ಟದಲ್ಲಿ ಇವತ್ತಿನ ನಮ್ಮಮಕ್ಕಳಿಗೆ ನಾವು ಕಾಡನ್ನು ಉಳಿಸಲೇಯಿಲ್ಲ, ಅವರಿಗೆ ಅದನ್ನು ಅರಿಯಬೇಕೆಂಬ ಭಾವ ಉದ್ದೀಪನಗೊಳ್ಳಲೇಯಿಲ್ಲ, ಹಾಗಾಗಿ ಅವರನ್ನು ಕಾಡು ಕಾಡಲಿಲ್ಲ, “ಕಾಡಮೂಲಕವೇ ಪಥ ಆಗಸಕ್ಕೆ “ಎಂದರೆ ಅವರಿಗೆ ಅರ್ಥ ವಾಗುವುದೂಯಿಲ್ಲ.
– ಹರೀಶ್. ಟಿ.ಜಿ.