ತೋಟಗಾರಿಕೆ ದಿನದ ಅಂಗವಾಗಿ ರೈತ ಬಾಂಧವರಿಗೆ ಅಂತರ್ಜಾಲ ಕಾರ್ಯಗಾರ

0
221
Tap to know MORE!

ಮೂಡುಬಿದಿರೆ: ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ (ದ.ಕ.), ಕಂಕನಾಡಿ, ಮಂಗಳೂರಿನಲ್ಲಿ ತೋಟಗಾರಿಕಾ ಪಿತಾಮಹ ಡಾ. ಎಂ. ಎಚ್. ಮರಿಗೌಡ ಅವರ ಜನ್ಮದಿನದ ಅಂಗವಾಗಿ “ವೈಜ್ಞಾನಿಕ ಅಣಬೆ ಬೇಸಾಯ” ಕುರಿತು ಅಂತರ್ಜಾಲ ಕಾರ್ಯಗಾರವನ್ನು ಇತ್ತೀಚೆಗೆ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ. ಜೆ. ರಮೇಶರವರು ಕಾರ್ಯಗಾರವನ್ನು ಉದ್ಘಾಟಿಸಿ, ತೋಟಗಾರಿಕಾ ಪಿತಾಮಹ ಡಾ. ಎಂ. ಎಚ್. ಮರಿಗೌಡರವರು ತೋಟಗಾರಿಕಾ ಕೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ, ಅವರು ತೋಟಗಾರಿಕಾ ಸಸಿಗಳು, ಹಣ್ಣಿನ, ತರಕಾರಿ ಬೀಜಗಳನ್ನು ಸಂರಕ್ಷಿಸಿ ಸಸ್ಯಾಭಿವೃದ್ದಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳೆಗೆ ಪಸರಿಸುವಂತೆ ಮಾಡಿದ್ದಾರೆಂದು ಸ್ಮರಿಸಿದರು.

ಅಣಬೆ ಬೇಸಾಯವು ಅಲ್ಪಾವಧಿ ಬೆಳೆ ಮತ್ತು ಕೊಠಡಿಯೊಳಗೆ ಬೆಳೆಯುವ ಬೆಳೆ. ರೈತರು ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಜೊತೆಗೆ ಉಪ ಕಸುಬುಗಳನ್ನು ಮಾಡುವುದರ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದೆಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮೂಡಬಿದ್ರೆ ಆಳ್ವಾಸ್ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗ ಸಹ ಪ್ರಾಧ್ಯಾಪಕರಾದ ಡಾ. ಬಿ. ರಾಘವೇಂದ್ರ ರಾವ್ ರವರು ಅಣಬೆಗಳು ಶಿಲೀಂಧ್ರ ವರ್ಗಕ್ಕೆ ಸೇರಿದ ಸೂಕ್ಷ್ಮಜೀವಾಣುಗಳು. ಭಾರತದಲ್ಲಿ ಹಲವಾರು ವಿಧವಾದ ಅಣಬೆಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. ಅವುಗಳಲ್ಲಿ ಕೆಲವು ವಿಷಪೂರಿತವಾದವು ಮತ್ತು ಕೆಲವು ಅಣಬೆಗಳು ತಿನ್ನಲು ಯೋಗ್ಯವಾಗಿವೆ. ತಿನ್ನುವ ಅಣಬೆಗಳು ಇತರೆ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕಾಂಶ ಗಳನ್ನು ಹೊಂದಿರುತ್ತವೆ. ಅಣಬೆಗಳಲ್ಲಿ ಹೇರಳವಾಗಿ ಪ್ರೊಟೀನ್, ಜೀವಸತ್ವಗಳು, ಹೆಚ್ಚು ಸಾರಜನಕ, ಮುಖ್ಯವಾದ ಅನ್ನಾಂಗಗಳು ಮತ್ತು ಖನಿಜಗಳು ಇವೆ. ತಿನ್ನುವ ಅಣಬೆಗಳಲ್ಲಿ ಸಕ್ಕರೆ ಮತ್ತು ಕಬ್ಬಿಣ ಅಂಶ ಕಡಿಮೆ ಇರುವುದರಿಂದ ಮಧುಮೇಹ (ಸಕ್ಕರೆ ಪೀಡಿತ) ರೋಗಿಗಳಿಗೆ ಮತ್ತು ಹೃದಯ ರೋಗಿಗಳಿಗೆ ಅಣಬೆ ಒಂದು ಒಳ್ಳೆಯ ಆಹಾರ. ಅಣಬೆ ಬೇಸಾಯವು ಅಲ್ಪಾವಧಿ ಬೆಳೆ ಮತ್ತು ಕೊಠಡಿಯೊಳಗೆ ಬೆಳೆಯುವ ಬೆಳೆ. ಇವುಗಳನ್ನು ಸ್ವಂತಕ್ಕೆ ಹವ್ಯಾಸವಾಗಿ ಅಥವಾ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದೆಂದು ವೈಜ್ಞಾನಿಕ ಅಣಬೆ ಬೇಸಾಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು ವಾಣಿಜ್ಯ ಮಟ್ಟದಲ್ಲಿ ಅಣಬೆ ಬೇಸಾಯ ಮಾಡುತ್ತಿದ್ದ ರೈತರಾದಂತ ಶ್ರೀ. ಪ್ರಸನ್ನ, ಬಜ್ಪೆ ಮತ್ತು ರಾಧಾಕೃಷ್ಣ, ಪುತ್ತೂರು ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ 98 ರೈತರು, ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಡಾ. ಎನ್. ಚೇತನ್, ಡಾ. ಕೇದಾರನಾಥ್, ಡಾ. ಶೋಧನ್ ಕೆ. ವಿ. ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here