ಗಾಂಧಿ ಕುಟುಂಬದ ನಾಯಕತ್ವಕ್ಕೆ ಪಕ್ಷದ ಕಾರ್ಯಕರ್ತರ ಬೆಂಬಲವಿದೆ : ಕರ್ನಾಟಕ ಕಾಂಗ್ರೆಸ್

0
332
Tap to know MORE!

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದೆಡೆ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದು, ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡರು “ಗಾಂಧಿ” ಕುಟುಂಬದವರೇ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳುತ್ತಿದ್ದಾರೆ. ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯೂ ನಡೆಯುತ್ತಿದ್ದು, ಈ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಗಾಂಧಿ ಕುಟುಂಬದವರು ದೇಶ ಮತ್ತು ಪಕ್ಷಕ್ಕಾಗಿ ಪ್ರಾಣವನ್ನೇ ಅರ್ಪಿಸಿದ್ಧಾರೆ. ಅವರು ಪಕ್ಷ ಮುನ್ನಡೆಸಬೇಕೆಂಬುದು ಎಲ್ಲಾ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

“ಒಂದು ಶತಮಾನಕ್ಕೂ ಹೆಚ್ಚು ಕಾಲ ನೆಹರೂ-ಗಾಂಧಿ ಕುಟುಂಬ ಪಕ್ಷ ಮತ್ತು ದೇಶಕ್ಕಾಗಿ ತ್ಯಾಗ ಮಾಡಿದೆ. ದೇಶಕ್ಕಾಗಿ ಹಲವು ಕೊಡುಗೆ ನೀಡಿದೆ. ಭಾರತದ ಅಭಿವೃದ್ಧಿಯ ಕಲ್ಪನೆಗೆ ಬಂಡೆಯಂತೆ ನಿಂತ ಸೋನಿಯಾ ಗಾಂಧಿ ತಮಗೆ ವೈಯಕ್ತಿಕವಾಗಿ ಸಾಕಷ್ಟು ತೊಂದರೆಗಳಿದ್ದರೂ ಪಕ್ಷದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ದೇಶದ ಹಿತಾಸಕ್ತಿಗೆ ಕೆಲಸ ಮಾಡಿದ್ದಾರೆ. ಗಾಂಧಿ- ನೆಹರು ಕುಟುಂಬ ಶತಮಾನಗಳ ಕಾಲ ಪಕ್ಷಕ್ಕಾಗಿ ಮಾಡಿದ ತ್ಯಾಗವನ್ನು ಕಾಂಗ್ರೆಸ್ ಮರೆಯಬಾರದು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“2004 ಮತ್ತು 2009 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸೋನಿಯಾ ಗಾಂಧಿಯವರ ಶ್ರಮ ಮರೆಯಲಾಗದು. ಈಗ ಪಕ್ಷದ ಎಲ್ಲಾ ನಾಯಕರು ಸೋನಿಯಾ ಗಾಂಧಿ ಜೊತೆಗೆ ನಿಲ್ಲಬೇಕು. ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರೆಯಲು ಇಷ್ಟವಿಲ್ಲವೆಂದರೆ ರಾಹುಲ್ ಗಾಂಧಿ ಅವರೇ ತಕ್ಷಣ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು”

– ಮಲ್ಲಿಕಾರ್ಜುನ ಖರ್ಗೆ

ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ. ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ‌ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ ಎಂದು ಹೇಳಿದ್ದರು.

– ಸಿದ್ದರಾಮಯ್ಯ

ಗಾಂಧಿ ಕುಟುಂಬದ ನಾಯಕತ್ವವನ್ನ ಕಾರ್ಯಕರ್ತರು ಒಪ್ಪಿದ್ದಾರೆ. ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ತಾವೇ ಪ್ರಧಾನಿ ಆಗಿ ಎಂದು ಮನಮೋಹನ್ ಸಿಂಗ್ ಹೇಳಿದರೂ ಸೋನಿಯಾ ಗಾಂಧಿ ಪಿಎಂ ಆಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿ ರೀತಿಯಲ್ಲಿ ಬೇರೆ ಯಾರೋ ಕಂಟ್ರೋಲ್ ಮಾಡುವುದಿಲ್ಲ

– ದಿನೇಶ್ ಗುಂಡೂರಾವ್

ಗಾಂಧಿ ಕುಟುಂಬದ ಹಿರಿಯರು ದೇಶಕ್ಕಾಗಿ ಅಪಾರವಾದ ತ್ಯಾಗ, ಬಲಿದಾನ ಮಾಡಿದ್ದಾರೆ. ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಣೆ ಮಾಡಿದ್ದಾರೆ. ಅಲ್ಲದೆ, ದೀರ್ಘವಾದ ಸೆರೆವಾಸವನ್ನೂ ಅನುಭವಿಸಿದ್ದಾರೆ. ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟುವಲ್ಲಿಯೂ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದೆ. ಗಾಂಧಿ ಕುಟುಂಬದಿಂದಲೇ ನಾಯಕತ್ವ ಮುಂದುವರಿದರೆ ಒಳ್ಳೆಯದು. ಎಐಸಿಸಿ ಹೊಣೆಗಾರಿಕೆಯನ್ನು ಅವರೇ ವಹಿಸಿಕೊಳ್ಳುವುದು ಸೂಕ್ತ

– ಎಸ್.ಆರ್. ಪಾಟೀಲ್

ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಗಾಂಧಿ ಕುಟುಂಬದ ಪರ ಇದೆ. ರಾಹುಲ್ ಗಾಂಧಿಯೇ ಎಐಸಿಸಿ ಅಧ್ಯಕ್ಷರಾದರೆ ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ.

– ಯು.ಟಿ. ಖಾದರ್

ಶ್ರೀಮತಿ ಸೋನಿಯಾಗಾಂಧಿ ಅವರ ಘನ ಮಾರ್ಗದರ್ಶನದಲ್ಲಿ ಶ್ರೀ ರಾಹುಲ್ ಗಾಂಧಿ ಅವರೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಬೇಕು ಎಂಬುದು ನನ್ನ ಮತ್ತು ಕೋಟ್ಯಂತರ ಕಾರ್ಯಕರ್ತರ ಅಭಿಲಾಷೆಯಾಗಿದೆ.

– ಈಶ್ವರ್ ಖಂಡ್ರೆ

LEAVE A REPLY

Please enter your comment!
Please enter your name here