ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ನಡೆಸುತ್ತಿರುವ ಭರದ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ, ಕರ್ನಾಟಕದ ‘ಸಿಂಘಮ್’ ಖ್ಯಾತಿಯ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರಲಿದ್ದಾರೆ.
ಸುಮಾರು ಒಂದು ದಶಕ ಕಾಲ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿ “ಜನರ ನಡುವೆ ಕೆಲಸ” ಮಾಡಲು ಶುರು ಹಚ್ಚಿದ್ದರು.
39 ವರ್ಷದ ಮಾಜಿ ಐಪಿಎಸ್ ಅಧಿಕಾರಿ ನವದೆಹಲಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ.
“ಬಿಜೆಪಿ ರಾಷ್ಟ್ರೀಯತಾವಾದಿ ಪಕ್ಷ ಮತ್ತು ನಾನು ಒಬ್ಬ ರಾಷ್ಟ್ರೀಯವಾದಿ. ಬಿಜೆಪಿಯು ತಮಿಳುನಾಡಿಗೆ ಹೊಸ ದೃಷ್ಟಿ ಮತ್ತು ನಿರ್ದೇಶನ ನೀಡಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಅಣ್ಣಾಮಲೈ ಅವರು ತಮಿಳುನಾಡು ರಾಜ್ಯದ ಕರೂರು ಮತ್ತು ಕೊಯಮತ್ತೂರಿನಲ್ಲಿ ರೈತರೊಂದಿಗೆ ಕೆಲಸ ಮಾಡಲು ಒಂದು ಸಂಘಟನೆಯನ್ನು ಪ್ರಾರಂಭಿಸಿದರು. ಅವರು ಯಾವುದೇ ಕಾರಣಕ್ಕೂ ರಾಜಕೀಯ ಸೇರುವುದಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು.
“ಬಿಜೆಪಿಗೆ ಸೇರ್ಪಡೆಗೊಳ್ಳುವ ಕರೆಯನ್ನು ಬಹಳ ತಡವಾಗಿ ತೆಗೆದುಕೊಳ್ಳಲಾಗಿದೆ. ಸಾಮಾಜಿಕ ಬದಲಾವಣೆಗಿಂತ ರಾಜಕೀಯ ಬದಲಾವಣೆ ಮುಖ್ಯ ಎಂದು ನಾನು ಭಾವಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ಈಗ ರಾಜಕೀಯ ಸೇರುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಹೇಳಿದರು.