ಅಯೋಧ್ಯೆ : ಪ್ರಧಾನಿಯೊಂದಿಗೆ ವೇದಿಕೆ ಹಂಚಲಿದ್ದಾರೆ ಐವರು ಗಣ್ಯರು!

0
161
Tap to know MORE!

ಅಯೋಧ್ಯೆಯಲ್ಲಿ ಬುಧವಾರ (ಆಗಸ್ಟ್ 5) ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆ ಸಮಾರಂಭಕ್ಕೆ 135 ಮಂದಿ ಸ್ವಾಮೀಜಿಗಳು ಸೇರಿದಂತೆ, ಒಟ್ಟು 175 ಮಂದಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.  ಕೇಸರಿ ಬಣ್ಣದಲ್ಲಿ ಮೂಡಿ ಬಂದಿರುವ ಆಮಂತ್ರಣ ಪತ್ರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಸೋಮವಾರ ಅನಾವರಣಗೊಳಿಸಿತ್ತು. ಇದರಲ್ಲಿ ಶ್ರೀ ರಾಮನ ವಿಗ್ರಹದ ಚಿತ್ರಣವೂ ಸಹ ಹೊಂದಿದೆ.

ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇನ್ನೂ ಮೂರು ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಕೊರೋನಾ ಸೋಂಕಿನ ಭೀತಿಯಿಂದಾಗಿ, ಸಮಾರಂಭದ ಅತಿಥಿಗಳ ಪಟ್ಟಿಯನ್ನು ಆದಷ್ಟು ಚೊಕ್ಕವಾಗಿ ಇಡಲಾಗಿದೆ.

ಸಮಾರಂಭದ ಅತಿಥಿ ಪಟ್ಟಿಯ ಪ್ರಮುಖ ಹೆಸರುಗಳಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಮಾಜಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ಮುಖಂಡರಾದ ಉಮಾ ಭಾರತಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದ್ದಾರೆ.

ಅತಿಥಿ ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಶಾಸಕ ಲಲ್ಲು ಸಿಂಗ್, ಬಿಜೆಪಿ ಮುಖಂಡ ವಿನಯ್ ಕಟಿಯಾರ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, ಉತ್ತರ ಪ್ರದೇಶದ ಕ್ಯಾಬಿನೆಟ್ ಮಂತ್ರಿಗಳಾದ ಸುರೇಶ್ ಖನ್ನಾ ಮತ್ತು ವಿಹಿಂಪ ನಾಯಕ ಅಶೋಕ್‌ ಸಿಂಘಾಲ್ ಕುಟುಂಬದಿಂದ ಪವನ್ ಸಿಂಘಾಲ್, ಅಖಾಡಾ ಪರಿಷತ್‌ನ ನರೇಂದ್ರ ಗಿರಿ, ಸಾಧ್ವಿ ರಿತಂಭರ, ಯೋಗ ಗುರು ರಾಮದೇವ್, ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥ ವಿನಯ್ ಪಾಂಡೆ ಸೇರಿದ್ದಾರೆ.

ವಿಹಿಂಪ ನಾಯಕ, ದಿವಂಗತ ಅಶೋಕ್ ಸಿಂಘಾಲ್ ಅವರ ಸೋದರಳಿಯ ಸಲಿಲ್ ಸಿಂಘಾಲ್ ಅವರು ಸಮಾರಂಭದಲ್ಲಿ “ಯಜ್ಮಾನ್” (ಧಾರ್ಮಿಕ ಪೋಷಕ) ಆಗಿರುತ್ತಾರೆ. ಜನಕ್ಪುರ್ ಬಿಹಾರ, ಉತ್ತರ ಪ್ರದೇಶ ಮತ್ತು ಅಯೋಧ್ಯೆಗಳೊಂದಿಗೆ ಸಂಬಂಧ ಹೊಂದಿದ್ದರಿಂದ ನೇಪಾಳದ ಕೆಲ ಹಿಂದೂ ಸ್ವಾಮೀಜಿಗಳಿಗೂ ಆಹ್ವಾನಿಸಲಾಗಿದೆ.

ವರದಿಗಳ ಪ್ರಕಾರ,  ಪ್ರಧಾನಿ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಂತ್ ನೃತ್ಯ ಗೋಪಾಲ್ದಾಸ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಅಯೋಧ್ಯೆ ವಿವಾದದ ಮುಸ್ಲಿಂ ದಾವೆದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಅವರಿಗೆ ಈ ಕಾರ್ಯಕ್ರಮದ ಮೊದಲ ಆಹ್ವಾನವನ್ನು ಕಳುಹಿಸಲಾಗಿದೆ. ಅವರೊಂದಿಗೆ, ಹಕ್ಕು ಪಡೆಯದ 10 ಸಾವಿರಕ್ಕೂ ಹೆಚ್ಚು ದೇಹಗಳನ್ನು ಅಂತ್ಯಸಂಸ್ಕಾರ ಮಾಡಿದ್ದಕ್ಕಾಗಿ, ಪದ್ಮಶ್ರೀ ಪುರಸ್ಕೃತ ಮೊಹಮ್ಮದ್ ಷರೀಫ್ ಅವರನ್ನು ಸಹ ಆಹ್ವಾನಿಸಲಾಗಿದೆ.

“ನಾವು ಇಕ್ಬಾಲ್ ಅನ್ಸಾರಿ ಮತ್ತು ಪದ್ಮಶ್ರೀ, ಮೊಹಮ್ಮದ್ ಷರೀಫ್ ಅವರನ್ನು ಅಡಿಪಾಯ ಹಾಕುವ ಸಮಾರಂಭಕ್ಕೆ ಆಹ್ವಾನಿಸಿದ್ದೇವೆ” ಎಂದು ರೈ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 11: 30 ಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ರೈ ಹೇಳಿದರು. ಪಿಎಂ ಆವರಣದಲ್ಲಿ ‘ಪಾರಿಜಾತ್’ ಮರವನ್ನು ನೆಡಲಿದ್ದಾರೆ. ಅಲ್ಲದೆ, ದೇವಾಲಯದ ಶಾಸನವೊಂದನ್ನು ಉದ್ಘಾಟಿಸಲಾಗುವುದು. ಎಂದು ವರದಿಯಾಗಿದೆ.

ದೇವಾಲಯದ ವಿನ್ಯಾಸವನ್ನು ಆಧರಿಸಿದ ಅಂಚೆ ಚೀಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ.

ಇದಕ್ಕೂ ಮುನ್ನ ಸೋಮವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿ ಭೂಮಿ ಪೂಜೆಗೆ ಸಿದ್ಧತೆಗಳನ್ನು ಪರಿಶೀಲಿಸಿದರು.

LEAVE A REPLY

Please enter your comment!
Please enter your name here