ಬೆಂಗಳೂರಿನಲ್ಲಿ ದೇಶದ ಮೊದಲ ಮೊಬೈಲ್ ಕೋವಿಡ್ ಲ್ಯಾಬ್‌ಗೆ ಚಾಲನೆ

1
350
Tap to know MORE!

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು, ನೂತನವಾಗಿ ಆರ್‌ಟಿ-ಪಿಸಿಆರ್ (ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್)‌ ಮೂಲಕ ಕೊರೋನಾ ಪರೀಕ್ಷೆ ನಡೆಸುವ ಮೊಬೈಲ್‌ ಲ್ಯಾಬ್‌ಅನ್ನು ಸಿದ್ಧಪಡಿಸಿದೆ. ಪ್ರಯೋಗಾಲಯಗಳಲ್ಲಿ ಸೋಂಕು ಪರೀಕ್ಷೆ ತಡವಾಗುತ್ತಿರುವ ಹಿನ್ನೆಲೆ, ಇದನ್ನು ಸಿದ್ಧಪಡಿಸಿದ್ದು, ಈ ಮೂಲಕ ಕೇವಲ ನಾಲ್ಕು ಗಂಟೆಯೊಳಗೆ ಫಲಿತಾಂಶ ಸಿಗಲಿದೆ.

ದೇಶದ ಪ್ರಪ್ರಥಮ ಮತ್ತು ಏಕೈಕ ಮೊಬೈಲ್‌ ಆರ್‌ಟಿ-ಪಿಸಿಆರ್‌ ಕೊರೊನಾ ಪರೀಕ್ಷಾ ಲ್ಯಾಬ್‌ ಇದಾಗಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ (ಐಸಿಎಂಆರ್‌) ಅನುಮೋದನೆ ಪಡೆದಿದೆ. ಐಐಎಸ್‌ಸಿಯು ಈ ಲ್ಯಾಬ್‌ನ್ನು ಶಣ್ಮುಖ ಇನ್ನೋವೇಶನ್ಸ್ ಜೊತೆಗೆ ಅಭಿವೃದ್ಧಿಪಡಿಸಿದ್ದಾರೆ. ಮೊದಲ ಮೊಬೈಲ್‌ ಲ್ಯಾಬ್‌ ಅನ್ನು ಈಗಾಗಲೇ, ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಹಸ್ತಾಂತರಿಸಲಾಗಿದೆ.

ಮೊಬೈಲ್ ಆರ್‌ಟಿ-ಪಿಸಿಆರ್ ಲ್ಯಾಬ್ ಗೆ ಚಾಲನೆ ನೀಡಿದ ಡಾ|ಸುಧಾಕರ್

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಲ್ಯಾಬ್‌ಗ ಚಾಲನೆ ನೀಡಿದರು. ಸದ್ಯ ಬೆಂಗಳೂರು ವೈದ್ಯಕೀಯ ಕಾಲೇಜು ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಸುತ್ತಮುತ್ತಲು ಕಾರ್ಯಚಟುವಟಿಕೆ ಆರಂಭಿಸಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

“ವ್ಯಾನ್‌ಗಳಲ್ಲೇ ಇರುವ ಈ ಮೊಬೈಲ್ ಲ್ಯಾಬ್‌ಗಳು, ಆರೋಗ್ಯ ಕಾರ್ಯಕರ್ತರಿಗೆ ಆರ್‌ಟಿ-ಪಿಸಿಆರ್ ಬಳಸಿ ಮಾದರಿಗಳನ್ನು ಸಂಗ್ರಹಿಸಿ, ಪ್ರಕ್ರಿಯೆಗೊಳಿಸಲು ಮತ್ತು ಪರೀಕ್ಷಿಸಲು ಸಹಕಾರಿಯಾಗಿದೆ. ಅದಲ್ಲದೆ, ಫಲಿತಾಂಶಗಳನ್ನು ಐಸಿಎಂಆರ್ ಪೋರ್ಟಲ್‌ಗೆ ಅಪ್‌ಲೋಡ್ ಮಾಡಲೂ ಅನುವು ಮಾಡಿಕೊಡುತ್ತದೆ” ಎಂದು ಪ್ರಕಟಣೆ ತಿಳಿಸಿದೆ.

“ಪ್ರಯೋಗಾಲಯಗಳು ತಿಂಗಳಿಗೆ 6,000-9,000 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ. ಉಪಕರಣಗಳು ಮತ್ತು ಸಿಬ್ಬಂದಿಗಳು ಹೆಚ್ಚಾದಂತೆ, ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ” ಎಂದು ಅಧಿಕಾರಿ ಹೇಳಿದರು.

ಏನಿದು ಮೊಬೈಲ್‌ ಲ್ಯಾಬ್‌?

ಮೊಬೈಲ್‌ ಲ್ಯಾಬ್‌ ಎಂಬುದು ಪ್ರಯೋಗಾಲಯಗಳ ಸಲಕರಣೆಗಳನ್ನು ಒಳಗೊಂಡ ಮೂರು ವಾಹನಗಳ (ವ್ಯಾನ್‌) ಒಂದು ಯೂನಿಟ್‌ ಆಗಿದೆ. ಒಂದರಲ್ಲಿ ಶಂಕಿತ ವ್ಯಕ್ತಿಯ ಮಾದರಿ ಸಂಗ್ರಹ ಮಾಡಲಾಗುತ್ತದೆ. ಮತ್ತೊಂದರಲ್ಲಿ ಬಿಎಸ್‌ ಎಲ್‌-2 ಲ್ಯಾಬ್‌ ಇದ್ದು, ಮಾದರಿಗಳ ಸಂಸ್ಕರಣೆ, ಪರೀಕ್ಷಾ ಪ್ರಕ್ರಿಯೆ ಆಗಲಿದೆ. ಮೂರನೇ ವಾಹನ ದಲ್ಲಿ ಮೋಲಿಕ್ಯೂಲರ್‌ ಟೆಸ್ಟಿಂಗ್‌, ಮಾದರಿ ವಿಶ್ಲೇಷಣೆ, ವರದಿ ತಯಾರಿ ಕಾರ್ಯ ನಡೆಯಲಿವೆ. ಮೊದಲ ವಾಹನವು ನಗರದ ವಿವಿಧ ಪ್ರದೇಶಕ್ಕೆ ತೆರಳಿ ಮಾದರಿ ಸಂಗ್ರಹಿಸಿದರೆ, ಉಳಿದ ಎರಡು ವಾಹನ ಗಳು ಒಂದು ಸ್ಥಳದಲ್ಲೇ ನಿಂತು ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಐಐಎಸ್ಸಿ ಪ್ರಾಧ್ಯಾಪಕರು ಮಾಹಿತಿ ನೀಡಿದರು.

1 COMMENT

LEAVE A REPLY

Please enter your comment!
Please enter your name here