ಬೆಂಗಳೂರು : ಶಾಸಕರ ಮನೆ ಮೇಲೆ ದಾಳಿ – ಗೋಲಿಬಾರ್‌ನಲ್ಲಿ ಮೂವರ ಸಾವು!

4
162
Tap to know MORE!

ಬೆಂಗಳೂರು: ಮಧ್ಯರಾತ್ರಿಯಲ್ಲಿ ಸುಮಾರು 600 ಕಿಡಿಗೇಡಿಗಳು ನಗರದ ಪುಲಕೇಶಿ ನಗರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಹೊರಗೆ ಜಮಾಯಿಸಿ ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಿಸಲು ಪ್ರಾರಂಭಿಸಿದರು. ಶಾಸಕರ ಸಂಬಂಧಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಒಂದು ಪೋಸ್ಟ್ ಇದಕ್ಕೆಲ್ಲ ಕಾರಣ ಎಂದು ಹೇಳಲಾಗಿದೆ.

ಶಾಸಕರ ಸಂಬಂಧಿ ಮೊಹಮ್ಮದ್ ಪೈಗಂಬರ್ ವಿರುದ್ಧ ಆಕ್ರಮಣಕಾರಿ ಮತ್ತು ಅವಹೇಳನಕಾರಿ ಪೋಸ್ಟ್ ಅನ್ನು ಹಾಕಿದ್ದರು. ಇದುವೇ, ಈಗ ಪೂರ್ವ ಬೆಂಗಳೂರಿನಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿದೆ. ಕೆ ಜಿ ಹಳ್ಳಿ ಪೊಲೀಸ್ ಠಾಣೆ ಹೊರಗೆ ಸಾವಿರಕ್ಕೂ ಅಧಿಕ ಜನರು ಸೇರಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಶಾಸಕರ ಸಂಬಂಧಿ ಪಿ.ನವೀನ್ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.

ಗೋಲಿಬಾರ್ ಒಂದೇ ಪರಿಹಾರ!
ಶಾಂತಿಯುತ ವಿಧಾನಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ಅಲ್ಲಿ ನೆರೆದಿದ್ದ ಜನರಲ್ಲಿ ಕೇಳಿದ್ದರು. ಆದರೂ, ಅವರು ಹಿಂಸಾಚಾರವನ್ನು ಆಯ್ಕೆ ಮಾಡಿದರು.

ನೆರೆದಿದ್ದ ಜನರು ಪೋಲೀಸರ ಮಾತು ಮೀರಿದ್ದರಿಂದ ಮತ್ತು ಅಲ್ಲಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ತೀವ್ರಗೊಳಿಸಿದಾಗ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ, ಈ ಎಚ್ಚರಿಕೆಯ ಕರೆ ಗಂಟೆಗೆ ಯಾರೂ ಗಮನ ಕೊಡಲಿಲ್ಲ.

ಅಂತಿಮವಾಗಿ, ಪೊಲೀಸರು ‘ಗೋಲಿಬಾರ್’ ಅನ್ನು ಆಯ್ಕೆ ಮಾಡಿದರು. ಒಬ್ಬನು ಅಲ್ಲೇ ಸಾವನ್ನಪ್ಪಿದ್ದು, 5-6 ಮಂದಿಗೆ ತೀವ್ರತರವಾದ ಗಾಯಗಳಾದವು. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಇನ್ನೂ ಪರಿಸ್ಥಿತಿ ಉದ್ವಿಗ್ನವಾಗಿದೆ ಮತ್ತು ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಲಾಗುತ್ತಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

ಮೂವರ ಸಾವು – ಅಪಾರ ಹಾನಿ
ಈ ಏಕಾಏಕಿ ಗಲಭೆಯು ನಿನ್ನೆ ರಾತ್ರಿ ಇಬ್ಬರು ಮತ್ತು ಇಂದು ಮುಂಜಾನೆ ಓರ್ವ ಸೇರಿದಂತೆ ಮೂವರ ಬಲಿ ತೆಗೆದುಕೊಂಡಿದೆ. ಕೆಲವರಿಗೆ ತೀವ್ರ ಗಾಯವಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಕಿಡಿಗೇಡಿಗಳು ಕಲ್ಲು ತೂರಾಟವನ್ನು ನಡೆಸಿದ್ದರಿಂದ ಹಲವಾರು ಪೊಲೀಸರೂ ಗಾಯಗೊಂಡಿದ್ದಾರೆ.

ಹಿಂಸಾತ್ಮಕ ಘಟನೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೋಲಿಸರ ವಾಹನಗಳನ್ನು ಸೇರಿದಂತೆ ಸಿಕ್ಕ ಸಿಕ್ಕಲ್ಲಿ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಭಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಶಾಸಕರು “ಸೇಫ್”
ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾವಲ್‌ಬೈರಸಂದ್ರದಲ್ಲಿರುವ ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮತ್ತು ಹಲವೆಡೆ ಬೆಂಕಿ ಹಚ್ಚಿದರೂ, ಶಾಸಕರು ಮತ್ತು ಅವರ ಕುಟುಂಬ ಸದಸ್ಯರು, ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ

ಶಾಸಕರ ಪ್ರತಿಕ್ರಿಯೆ
ಇನ್ನು, ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ, ಏನೇ ಆಗಿದ್ದರೂ ನಾವೆಲ್ಲಾ ಅಣ್ಣ-ತಮ್ಮಂದಿರಂತೆ ಇರೋಣ. ಪೋಸ್ಟ್‌ ಹಾಕಿದ್ದ ಕಿಡಿಗೇಡಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಹೇಳಿದ್ದು, ಗಲಾಟೆ ಮಾಡಬೇಡಿ. ತನಿಖೆಯಿಂದ ಎಲ್ಲಾ ಹೊರಬರಲಿದೆ ಎಂದು ಕ್ಷೇತ್ರದ ಮತದಾರರದಲ್ಲಿ ಮನವಿ ಮಾಡಿದ್ದಾರೆ.

ಕೊನೆಗೂ ನಿಯಂತ್ರಣ – ಕರ್ಫ್ಯೂ ಜಾರಿ

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಉಂಟಾದ ಗಲಭೆ ತಡರಾತ್ರಿ 2ರ ಸುಮಾರಿಗೆ ನಿಯಂತ್ರಣಕ್ಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಸಹ ಜಾರಿ ಮಾಡಲಾಗಿದೆ.

ಈ ಸಂಬಂಧ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಗುಂಪು ಸೇರಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಗಲಭೆ ಕೋರರನ್ನು ಬಂಧಿಸಲಾಗುತ್ತಿದೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಲ್‌ ಪಂಥ್‌ ಹೇಳಿದ್ದಾರೆ .

ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕರ್ನಾಟಕ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ವಿಧ್ವಂಸಕತೆಯು ಪರಿಹಾರವಲ್ಲ ಎಂದು ಅವರು ಹೇಳಿದರು.