ಆಸ್ಟ್ರೇಲಿಯದ ಆಲ್ರೌಂಡರ್, ಮಾಜಿ ನಾಯಕ ಕ್ಯಾಮರೂನ್ ವೈಟ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. 3 ದಿನಗಳ ಹಿಂದಷ್ಟೇ 37ನೇ ವರ್ಷಕ್ಕೆ ಕಾಲಿಟ್ಟಿದ್ದ ಕ್ಯಾಮರೂನ್ ವೈಟ್ ಆಸ್ಟ್ರೇಲಿಯ ಪರ 4 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ಎಲ್ಲ ಪಂದ್ಯಗಳನ್ನು ಅವರು 2008ರ ಭಾರತ ಪ್ರವಾಸದ ವೇಳೆ ಆಡಿದ್ದರು. ವೈಟ್ 91 ಏಕದಿನ, 47 ಟಿ20 ಪಂದ್ಯಗಳಲ್ಲೂ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದಾರೆ. 7 ಸೀಮಿತ ಓವರ್ ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದರು. ಟೆಸ್ಟ್ನಲ್ಲಿ 146 ರನ್, ಏಕದಿನದಲ್ಲಿ 2,072 ರನ್, ಟಿ20ಯಲ್ಲಿ 984 ರನ್ ಬಾರಿಸಿದ್ದಾರೆ.
“ನಾನು ಕ್ರಿಕೆಟ್ ಆಡುವುದನ್ನು ಕೊನೆಗೊಳಿಸಿದ್ದೇನೆ. ನನ್ನ ಕಾಲ ಮುಗಿದಿದೆ. ಸ್ಟ್ರೈಕರ್ ತಂಡದೊಂದಿಗಿನ ನನ್ನ ಒಂದು ವರ್ಷದ ಒಡಂಬಡಿಕೆ ಮುಕ್ತಾಯಗೊಂಡ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮುಂದೆ ಕೋಚಿಂಗ್ನತ್ತ ಗಮನ ಹರಿಸಲು ನಿರ್ಧರಿಸಿದ್ದೇನೆ” ಎಂದು ವೈಟ್ ಹೇಳಿದ್ದಾರೆ.