ಎಂ.ಎಸ್.ಧೋನಿ – ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ

0
115
Tap to know MORE!

ಕಳೆದ ವರ್ಷ ಜುಲೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತವು ಸೆಮಿಫೈನಲ್ ನಲ್ಲಿ ಸೋತ ನಂತರ ವಿರಾಮ ತೆಗೆದುಕೊಂಡ ಧೋನಿ, ಬಳಿಕ ಭಾರತಕ್ಕಾಗಿ ಸೀಮಿತ ಓವರ್‌ಗಳ ಪಂದ್ಯವನ್ನು ಆಡಲೇ ಇಲ್ಲ. ನಿನ್ನೆ, ಸ್ವಾತಂತ್ರ್ಯ ದಿನಾಚರಣೆಯಂದು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಏನೇ ಆದರೂ, ಪ್ರತಿಯೊಬ್ಬನೂ ಒಂದಲ್ಲ ಒಂದು ದಿನ ತನ್ನ ವೃತ್ತಿ ಜೀವನಕ್ಕೆ ಪೂರ್ಣ ವಿರಾಮವನ್ನು ಹಾಕಲೇಬೇಕು. ಈ ಸಮಯದಲ್ಲಿ ಧೋನಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಪ್ರಮುಖ ಘಟ್ಟಗಳನ್ನು ಮೆಲುಕು ಹಾಕುವ!

ಡಿಸೆಂಬರ್ 2004: ಚಿತ್ತಗಾಂಗ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ, ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ಅಕ್ಟೋಬರ್ 2005: ಧೋನಿ 145 ಎಸೆತಗಳಲ್ಲಿ ಅಜೇಯ 183 ರನ್ ಗಳಿಸಿದರು. ಇದು ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್. ಐದು ಪಂದ್ಯಗಳ ಸರಣಿಯಲ್ಲಿ, ಭಾರತದ 3-0 ಜಯಗಳಿಸಿದ ನಂತರ, ಧೋನಿ “ಮ್ಯಾನ್ ಆಫ್ ದಿ ಸೀರೀಸ್” ಪ್ರಶಸ್ತಿಯನ್ನೂ ಪಡೆದರು.

ಡಿಸೆಂಬರ್ 2005: ಚೆನ್ನೈನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

ಸೆಪ್ಟೆಂಬರ್ 2007: ಎಂ.ಎಸ್.ಧೋನಿ, ರಾಹುಲ್ ದ್ರಾವಿಡ್ ಅವರಿಂದ ಏಕದಿನ ಕ್ರಿಕೆಟ್‌ ನಾಯಕತ್ವದ ಅಧಿಕಾರ ವಹಿಸಿಕೊಂಡರು.

ಸೆಪ್ಟೆಂಬರ್ 2007: ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ವಿಶ್ವ ಟ್ವೆಂಟಿ -20ಯಲ್ಲಿ ಧೋನಿ ಭಾರತೀಯ ತಂಡದ ನಾಯಕರಾಗುತ್ತಾರೆ. ಭಾರತದ ಯುವ ತಂಡವನ್ನು ಅವರು ಫೈನಲ್‌ಗೆ ತಲುಪಿಸದಲ್ಲದೇ, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯವನ್ನೂ ಗೆಲ್ಲಿಸಿದರು. ಕೊನೆಯ ಓವರ್ ಬೌಲಿಂಗ್ ಮಾಡಲು ಹರ್ಭಜನ್ ಸಿಂಗ್ ಬದಲಿಗೆ ಅನಾನುಭವಿ ವೇಗಿ ಜೋಗಿಂದರ್ ಶರ್ಮಾ ಅವರನ್ನು ಆಯ್ಕೆ ಮಾಡುವ ಕಠಿಣ ನಿರ್ಧಾರವನ್ನೂ ತೆಗೆದು ಅದರಲ್ಲಿ ಅವರು ಯಶಸ್ವಿಯಾದರು.

ಆಗಸ್ಟ್ 2008: ಧೋನಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು.

ನವೆಂಬರ್ 2008: ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ, ಅನಿಲ್ ಕುಂಬ್ಳೆ ಗಾಯಗೊಂಡಿದ್ದರಿಂದ, ಧೋನಿಯನ್ನು ಭಾರತದ ಪೂರ್ಣ ಪ್ರಮಾಣದ ಟೆಸ್ಟ್ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ.

ಡಿಸೆಂಬರ್ 2008: ಧೋನಿ “ಐಸಿಸಿ ಏಕದಿನ ಆಟಗಾರ” ಪ್ರಶಸ್ತಿಗೆ ಭಾಜನರಾದರು.

ಮಾರ್ಚ್ 2009: ಧೋನಿ ನಾಯಕತ್ವದಲ್ಲಿ, ನ್ಯೂಜಿಲೆಂಡ್‌ ನೆಲದಲ್ಲಿ ಭಾರತವು ತನ್ನ ಮೊದಲ ದ್ವಿಪಕ್ಷೀಯ ಏಕದಿನ ಸರಣಿಯನ್ನು ಗೆದ್ದಿತು.

ಏಪ್ರಿಲ್ 2009: ಧೋನಿ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಸೆಂಬರ್ 2009: ಭಾರತವು ಮೊದಲ ಬಾರಿಗೆ ಐಸಿಸಿ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆಯುತ್ತದೆ.

ಡಿಸೆಂಬರ್ 2009: ಧೋನಿ “ಐಸಿಸಿ ಏಕದಿನ ಆಟಗಾರ” ವರ್ಷದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಆ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೇ 2010: ಐಪಿಎಲ್‌ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಐಪಿಎಲ್ ಪ್ರಶಸ್ತಿ ಗೆದ್ದಿತು.

ಏಪ್ರಿಲ್ 2011: ಭಾರತವು 28 ವರ್ಷಗಳ ಬಳಿಕ, ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತು. ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 79 ಎಸೆತಗಳಲ್ಲಿ 91 ರನ್‌ಗಳನ್ನು ಹೊಡೆದ ಧೋನಿ ಅಜೇಯವಾಗಿ ಉಳಿದರು.

ಮೇ 2011: ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

ನವೆಂಬರ್ 2011: ಭಾರತೀಯ ಪ್ರಾದೇಶಿಕ ಸೈನ್ಯವು, ಧೋನಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ನೀಡಿತು.

ಮಾರ್ಚ್ 2013: ಧೋನಿ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಕರಾಗಿ ಗುರುತಿಸಿಕೊಂಡರು. ಸೌರವ್ ಗಂಗೂಲಿ ನಾಯಕತ್ವದಲ್ಲಿ 49 ಟೆಸ್ಟ್ ಪಂದ್ಯಗಳಿಂದ 21 ಪಂದ್ಯದಲ್ಲಿ ಜಯಗಳಿಸಿದ ದಾಖಲೆಯನ್ನು ಧೋನಿ ಮೀರಿಸುತ್ತಾನೆ.

ಜೂನ್ 2013: ಧೋನಿ ನಾಯಕತ್ವದಲ್ಲಿ ಭಾರತವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು.
ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು.

ಫೆಬ್ರವರಿ 2013: ಧೋನಿ ಟೆಸ್ಟ್‌ನಲ್ಲಿ ತನ್ನ ಮೊದಲ ದ್ವಿಶತಕ ಹೊಡೆದರು. ಅವರು 365 ಎಸೆತಗಳಲ್ಲಿ 224 ರನ್ ಗಳಿಸಿದರು‌. (ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಭಾರತೀಯ ವಿಕೆಟ್ ಕೀಪರ್ ಗಳಿಸಿದ ಹೆಚ್ಚಿನ ರನ್)

ಮಾರ್ಚ್ 2013: ಭಾರತವು ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು 4-0 ಯಿಂದ ಸೋಲಿಸಿತು.

ಏಪ್ರಿಲ್ 2018: ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣಕ್ಕೆ ಧೋನಿ ಭಾಜನರಾದರು.

ಮೇ 2018: ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

LEAVE A REPLY

Please enter your comment!
Please enter your name here