ತುಳುವಲ್ಲೂ ಸಿಗಲಿ ಮಾತೃ ಭಾಷೆಯ ಶಿಕ್ಷಣ

3
495
Tap to know MORE!

‘’ಅಯ್ಯಯ್ಯ ಎಂಚ ಪೋರ್ಲಾಂಡ್ ಎಂದು ತುಳುವರು ಮೈಯುಬ್ಬಿ ಕೇಳಬೇಕಣ್ಣ”. ಇದು ಕವಿ ರತ್ನಾಕರ ವರ್ಣಿ “ಭರತೇಶ ವೈಭವ”ದಲ್ಲಿ ಬರುವ ತುಳು ಭಾಷೆ ಹಾಗೂ ತುಳುವರ ಬಗೆಗಿನ ಉಲ್ಲೇಖ. ಅವರು ಹೇಳಿದ ಈ ವಾಕ್ಯದ ಸಂಧರ್ಭ ಬೇರೆಯಿರಬಹುದು ಆದರೆ, ತುಳುವರಿಗೆ ಮಾತ್ರ ಅವರ ಭಾಷೆಯ ಬಗ್ಗೆ ಹೀಗೆ ಹೆಮ್ಮೆಯಿಂದ ಹೇಳುವ ಪ್ರಮೇಯ ಬರಲೇ ಇಲ್ಲಾ?! ತುಳುವರು ಉತ್ಕಟ ಭಾಷಾ ಪ್ರೇಮಿಗಳು. ಹೊರಗಿನವರು ಇಲ್ಲಿಗೆ ಬಂದು ಒಂದು ವಾಕ್ಯ ತುಳು ಕಲಿತು ಮಾತಾಡಿದರು ನಾವು ಅವರನ್ನು ನಮ್ಮವರೆಂದು ಭಾವಿಸಿಬಿಡುತ್ತೇವೆ. ಪರ ಊರಿನಲ್ಲಿ ತುಳು ಕಿವಿಗೆ ಬಿದ್ದರೆ ನಿಧಿ ಸಿಕ್ಕಿದಷ್ಟು ಸಂತೋಷಪಡುತ್ತೇವೆ. ನಿಮಗೆ ತುಳುವರ ಭಾಷೆಯ ಪ್ರೇಮದ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ – ನನ್ನ ಇಬ್ಬರು ಸ್ನೇಹಿತರು ಮುಸ್ಲಿಮರು, ಅವರ ಮಾತೃಭಾಷೆ “ಬ್ಯಾರಿ” ಇಬ್ಬರೂ ಇರುವುದು ಹೊರದೇಶದಲ್ಲಿ ಅವರು ಊರಿಗೆ ಬಂದಾಗ ಬ್ಯಾರಿಯಲ್ಲಿ ಮಾತಾಡುತ್ತಾರೆ ಆದರೆ ಅಲ್ಲಿ ಇರುವಾಗ ತುಳುವಿನಲ್ಲಿ ಮಾತಾಡುತ್ತಾರೆ. ಯಾಕೆಂದು ಒಮ್ಮೆ ಕೇಳಿದೆ ಅವಾಗ ಅವರಿಂದ ಬಂದ ಉತ್ತರ -“ತುಳು ಮಾತಾಡಿದರೆ ಊರಲ್ಲಿ ಇದ್ದ ಹಾಗೆ ಅನಿಸುತ್ತದೆ ಮತ್ತು ಮನಸಿಗೆ ಸ್ವಲ್ಪವಾದರೂ ಸಮಾಧಾನ ಸಿಗುತ್ತದೆ ” ಎಂದು. ಹೀಗೆ ಅವನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಿರಲಿ ಅವರಿಗೆ ಮನೆಯಲ್ಲಿ ಮಾತಾಡುವ ಭಾಷೆ ಬೇರೆಯಿರಬಹುದು ಆದರೆ ತುಳು ಅವರಿಗೇ ಗೊತ್ತಿಲ್ಲದ ಹಾಗೆ ಆ ಭಾಷೆಗಳಿಗಿಂತ ಮೇಲಿನ ಸ್ಥಾನವನ್ನು ಪಡೆದಿರುತ್ತದೆ. ಇಷ್ಟೆಲ್ಲ ಭಾಷಾಪ್ರೇಮ ಇರುವ ನಾವು ಇವತ್ತಿನವರೆಗೆ ನಮಗೆ ತುಳುವಿನಲ್ಲಿ ಶಿಕ್ಷಣ ಬೇಕು ಅಥವಾ ತುಳುವಿಗೆ ಕನಿಷ್ಠಪಕ್ಷ ರಾಜ್ಯ ಭಾಷೆಯ ಸ್ಥಾನಮಾನ ಲಭಿಸಲು ದೊಡ್ಡ ಮಟ್ಟದ ಹೋರಾಟ ಮಾಡದಿರಲು ಕಾರಣವೇನು?

ನಾನು ಮೇಲೆ ಹೇಳಿದ ಮಹಾನ್ ಕವಿ ರತ್ನಾಕರ ವರ್ಣಿ ಒಬ್ಬ ತುಳುವರು ಅವರು ಈಗಿನ ಮೂಡುಬಿದ್ರೆಯ ಬೆಟಗೇರಿ ಪ್ರದೇಶದವರು. “ಭರತೇಶ ವೈಭವ”ದಂತಹ ಮೇರು ಕೃತಿಯನ್ನು ರಚನೆ ಮಾಡಿದ ಅವರು ತನ್ನ ಮಾತೃಭಾಷೆಯಲ್ಲಿ ಕೃತಿಯನ್ನು ಏಕೆ ರಚಿಸಲಿಲ್ಲ?. ಇದು ಕೇವಲ ಇವರೊಬ್ಬರ ಕತೆಯಲ್ಲ ಪಂಜೆ ಮಂಗೇಶರಾಯರು, ಗೋವಿಂದ ಪೈ, ಗಿರೀಶ್ ಕಾರ್ನಾಡ್, ಯು ಆರ್ ಅನಂತಮೂರ್ತಿ, ಶಿವರಾಮ ಕಾರಂತರು ಇವರೆಲ್ಲ ತುಳುವರು ಅಥವಾ ತುಳುನಾಡಿನವರು. ಕನ್ನಡ ಸಾರಸ್ವತ ಲೋಕಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿ ಕನ್ನಡ ತಾಯಿಯ ಮುಕುಟಕ್ಕೆ ಜ್ಞಾನಪೀಠ, ಸರಸ್ವತಿ ಸಮ್ಮಾನ ಇಂತಹ ಗರಿಗಳನ್ನು ಸೇರಿಸಿದ ಇವರುಗಳು ತುಳುಭಾಷೆಯಲ್ಲಿ ಕೃತಿಗಳನ್ನು ಏಕೆ ರಚಿಸಲಿಲ್ಲ? ಭಾಷೆಯ ಮೇಲೆ ಅಸಡ್ಡೆಯೇ? ಅಲ್ಲವೇ ಅಲ್ಲಾ. ಇವಿಷ್ಟೂ ಚಿಕ್ಕಂದಿನಿಂದ ಒಬ್ಬ ತುಳುವನಾಗಿ ನನಗೆ ಕಾಡುತ್ತಿದ್ದ ಪ್ರಶ್ನೆಗಳು. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ ತುಳುವಿಗೆ ಇರುವ ರಾಜಾಶ್ರಯದ ಕೊರತೆ.

ಅರಸರ ಕಾಲದಲ್ಲಿ ಅವರ ಸಾಮ್ರಾಜ್ಯಗಳು ಭಾಷೆಯ ಗಡಿಗಳನ್ನು ಮೀರಿ ವಿಸ್ತಾರವಾಗಿರುತ್ತಿತ್ತು. ಹಾಗಾಗಿ ಎಲ್ಲಾ ಭಾಷೆಯ ಕವಿಗಳಿಗೆ ಆಸ್ಥಾನದಲ್ಲಿ ರಾಜಾಶ್ರಯ ಸಿಗುತ್ತಿತ್ತು. ರನ್ನ, ಪೊನ್ನ, ಜನ್ನ ಮುಂತಾದ ಕವಿಗಳು ಹಾಗೂ ಜಗಜ್ಯೋತಿ ಬಸವೇಶ್ವರರಿಗೆ ರಾಜಾಶ್ರಯ ಸಿಕ್ಕಿದ ಕಾರಣಕ್ಕೆ ಇವರು ತಮ್ಮ ಕೃತಿ ಅಥವಾ ತತ್ವಗಳನ್ನು ಪಸರಿಸಲು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಿತ್ತು. ಆದರೆ ತುಳು ಭಾಷೆಯಲ್ಲಿ ಇದ್ದ ಕವಿಗಳಾದ ವಿಷ್ಣುತುಂಗ, ಅರುಣೊಬ್ಬ ಮುಂತಾದವರಿಗೆ ಯಾರ ಆಶ್ರಯವೂ ಇರಲಿಲ್ಲ. ಆದ್ದರಿಂದ ಲಿಪಿ ಇದ್ದರೂ ತುಳು ಭಾಷೆಯಲ್ಲಿ ಕೃತಿಗಳ ರಚನೆಯಾಗಲಿಲ್ಲ. ಆದ್ದರಿಂದಲೇ ತುಳುವಿನಲ್ಲಿ ರಚನೆಯಾದ ಕೃತಿಗಳನ್ನು ಕೈಬೆರಳಲ್ಲಿ ಲೆಕ್ಕಮಾಡುವ ಪರಿಸ್ಥಿತಿ ಬಂದಿದ್ದು. ತುಳು ಕೇವಲ ಮೌಖಿಕ ಭಾಷೆಯಲ್ಲ ಅದಕ್ಕೊಂದು ಲಿಪಿ ಇದೆ. ಆ ಲಿಪಿಯಲ್ಲಿ ಬರೆದ ತಾಳೆಗರಿಗಳನ್ನು ಹಿಡಿದು ತೋರಿಸಿದರೂ ಕೆಲವರು ನಂಬಲು ತಯಾರಿಲ್ಲ. ಸ್ವಾತಂತ್ರ ನಂತರದ ಭಾರತದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗುವ ಸಂದರ್ಭದಲ್ಲಿ ಎಲ್ಲಾ ಭಾಷೆಗಳಂತೆ ನಮ್ಮ ಭಾಷೆಗಳಿಗೂ ಸ್ಥಾನಮಾನ ಸಿಗಲಿ ಎಂದು ತುಳುವರು ಆಸೆಪಟ್ಟರೆ ಹೊರತು ಯಾವೊಬ್ಬ ತುಳುವನೂ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡಲಿಲ್ಲ. ಬದಲಾಗಿ ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿದ್ದ ನಮ್ಮ ಜಿಲ್ಲೆಗಳು ಕರ್ನಾಟಕಕ್ಕೆ ಸೇರಿದಾಗ ಖುಷಿಪಟ್ಟರು. ಆದರೆ ತಮ್ಮದೇ ಜನರಿರುವ ಕಾಸರಗೋಡು ಬೇರೆಯಾದಾಗ ನೋವುಂಡು ಮನಸಿನಲ್ಲೇ ಅದುಮಿಟ್ಟುಕೊಂಡರು ಬಹುಪಾಲು ಜನರು. ಕಯ್ಯಾರ ಕಿಞ್ಞಣ್ಣ ರೈ ಒಬ್ಬರನ್ನು ಬಿಟ್ಟರೆ ಬೇರೆ ಯಾರು ಇದರ ಬಗ್ಗೆ ಧ್ವನಿ ಎತ್ತಲಿಲ್ಲ. ತುಳು ಭಾಷೆಗೆ ಒಂದು ಅಕಾಡೆಮಿ ಸ್ಥಾಪನೆ ಮಾಡಲು ಹರಸಾಹಸ ಪಡಬೇಕಾಗಿ ಬಂತು. 2009ರಲ್ಲಿ ವಿಶ್ವ ತುಳು ಸಮ್ಮೇಳನ ನಡೆದಾಗ ಅದು ವಿಶ್ವದ ಗಮನವನ್ನೇ ಸೆಳೆಯಿತು. ಅವಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ತುಳುವಿಗೆ ರಾಜ್ಯಭಾಷಾ ಸ್ಥಾನಮಾನವನ್ನು ನೀಡುವುದಾಗಿ ಹೇಳಿದರು. ರಾಜ್ಯಭಾಷೆ ಸ್ಥಾನ ನೀಡದಿದ್ದರೂ ತುಳು ಅಧ್ಯಯನ ಪೀಠಗಳ ಸ್ಥಾಪನೆಗೆ ಅವರು ನೆರವಾದರು.

 

ವೀರಪ್ಪ ಮೊಯಿಲಿ ಮತ್ತು ಸದಾನಂದ ಗೌಡ ಈ ಇಬ್ಬರೂ ಕರಾವಳಿಯ ಮೂಲದವರು ಮತ್ತು ಕಾನೂನು ಸಚಿವರಾಗಿದ್ದವರು. ಆದರೂ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಆಗಲಿಲ್ಲ. ಅನಾದಿಕಾಲದಿಂದಲೂ ತನ್ನವರಿಂದಲೇ ನಿರ್ಲಕ್ಷಿಸಲ್ಪಟ್ಟ ತುಳುಭಾಷೆಯ ಪರಿಸ್ಥಿತಿ ಹೇಗಿದೆಯೆಂದರೆ ಎಷ್ಟೋ ತುಳು ಮಕ್ಕಳಿಗೆ ತುಳುವ ನರಸನಾಯಕ, ಕೃಷ್ಣದೇವರಾಯ, ರಾಣಿ ಅಬ್ಬಕ್ಕ ಇಂತವರು ತಮ್ಮವರೆಂದೇ ತಿಳಿದಿಲ್ಲ. ಅಲ್ಲಿ ಇಲ್ಲಿ ಕೆಲವು ರಾಜಕಾರಣಿಗಳು ತುಳುವಿಗೋಸ್ಕರ ಧ್ವನಿ ಎತ್ತಿದರೂ ಯಾವುದಾದರು ಒಂದು ಕಾರಣಕ್ಕೆ ಆ ಧ್ವನಿ ಹುದುಗಿಹೋಗುತ್ತದೆ. ಒಂದು ಆಸಕ್ತಿಕರ ವಿಷಯ ಏನೆಂದರೆ ತನ್ನ ಜನರಿಂದಲೇ ನಿರ್ಲಕ್ಷಕ್ಕೆ ಒಳಗಾದ ಭಾಷೆಯ ಬಗ್ಗೆ ಪಕ್ಕದ ರಾಜ್ಯದವರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ ಏನ್ ಅಣ್ಣಾದೊರೈ ಲೋಕಸಭೆಯಲ್ಲಿ ತುಳುವಿನ ಬಗ್ಗೆ ಮಾತಾಡಿದ್ದರು. ತುಳು ಪಂಚದ್ರಾವಿಡ ಭಾಷೆಗಳಲ್ಲಿ ಒಂದು ಮತ್ತು ಅದರ ಬೆಳವಣಿಗೆಗೆ ಸರ್ಕಾರ ನೆರವಾಗಬೇಕು ಎಂದಿದ್ದರು. ಕಾಸರಗೋಡಿನ ಸಂಸದರಾಗಿದ್ದ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಪಿ. ಕರುಣಾಕರನ್ ಲೋಕಸಭೆಯಲ್ಲಿ ತುಳುವಿನ ಬಗ್ಗೆ ಮಾತಾಡುತ್ತ ಮಲಯಾಳಿಗಳು ತುಳುವಿಗೆ ಎಂದಿಗೂ ಚಿರಋಣಿಗಳು ಯಾಕೆಂದರೆ ಮಲಯಾಳಂ ಲಿಪಿ ತುಳುವಿಂದಲೇ ಬಂದಿದ್ದು ಎಂದಿದ್ದರು. ಅದರಂತೆ ಕೇರಳದ ಕುಂಜ್ಞರಂಬು, ಅಬ್ದುಲ್ ರಝಕ್ಪಾರ್ಲಿಮೆಂಟ್ ಮತ್ತು ಕೇರಳ ಅಸೆಂಬ್ಲಿಯಲ್ಲಿ ಧ್ವನಿ ಎತ್ತಿದ್ದರು. ಆದರೆ ಅವರು ಮಾಡಿದ ಒಂದಿನಿತು ಕೆಲಸವನ್ನು ತುಳುನಾಡಿನಿಂದ ಆಯ್ಕೆಯಾದ ಸಂಸದರು ಮಾಡಲಿಲ್ಲ. ಸದಾನಂದ ಗೌಡರಂತೂ ಕಾನೂನು ಸಚಿವರಾಗಿದ್ದಾಗಲೇ ತುಳು 8ನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಟ್ವೀಟ್ ಮಾಡಿದ್ದರು!. ಆದರೀಗ ತುಳುವರಿಗೆ ಜ್ಞಾನೋದಯವಾಗಿದೆ ಕೆಲವೊಂದು ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ. ಪದವಿಯಲ್ಲೂ ತುಳು ಒಂದು ಭಾಷೆಯಾಗಿದೆ. ತುಳು ಬಿ. ಎ ಮತ್ತು ಎಂ. ಎ ತರಗತಿಗಳು ಪ್ರಾರಂಭವಾಗಿದೆ. ಇದು ಮಾತ್ರ ತುಳು ಜನರಿಗೆ ಈವರೆಗೆ ಆಗಿರುವ ನೆಮ್ಮದಿಯ ಬೆಳವಣಿಗೆ. ಆದರೆ, ಈಗ ಹೊಸ ಶಿಕ್ಷಣ ನೀತಿ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟಿರುವುದರಿಂದ ಜನರು ತುಳುವಿನಲ್ಲೇ ಶಿಕ್ಷಣ ಬೇಕೆಂದು ಅದೊಂಲನಗಳು ಶುರುವಾಗಿದೆ ಮೊನ್ನೆಯಷ್ಟೇ #Educationintulu ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ತಮ್ಮ ಬೇಡಿಕೆಯನ್ನು ತುಳುವರು ಸರ್ಕಾರದ ಮುಂದಿಟ್ಟರು ಆದರೆ ಯಾವ ಜನಪ್ರತಿನಿಧಿಗಳು ಪ್ರತಿಕ್ರಿಯಿಸಲಿಲ್ಲ. ಇಷ್ಟೆಲ್ಲ ನಿರ್ಲಕ್ಷಕ್ಕೆ ಒಳಪಟ್ಟಿರುವ ಭಾಷೆಗೆ ಇನ್ನಾದರೂ ಮಾನ್ಯತೆ ಸಿಗಲಿ ಮತ್ತು ಈ ಚಳುವಳಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಚಳುವಳಿಯಂತಾಗದಿರಲಿ ಅಷ್ಟೇ..

– ಕಾರ್ತಿಕ್ ರಾವ್

3 COMMENTS

LEAVE A REPLY

Please enter your comment!
Please enter your name here