ಬೆಂಗಳೂರು : ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ. ಜೊತೆಗೆ ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಾರಿಗೆ ಸಂಚಾರ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಸಹ ಶೇ.50ರಷ್ಟು ಜನರೊಂದಿಗೆ ತೆರೆಯೋದಕ್ಕೂ ಅವಕಾಶ ನೀಡಲಾಗುತ್ತಿದೆ. ಜುಲೈ 5ರವರೆಗೆ ಈ ಮಾರ್ಗಸೂಚಿ ಕ್ರಮಗಳು ಜಾರಿಯಲ್ಲಿದ್ದು, ನೈಟ್ ಹಾಗೂ ವಾರಾಂತ್ಯ ಕರ್ಪ್ಯೂ ರಾಜ್ಯಾಧ್ಯಂತ ಮುಂದುವರೆಯಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತಂತೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ದರ ಇದೆ. 13 ಜಿಲ್ಲೆಗಳಲ್ಲಿ 5-10 ಇದೆ. ಮೈಸೂರು ಜಿಲ್ಲೆಯಲ್ಲಿ 10ಕ್ಕಿಂತ ಹೆಚ್ಚು ಇದೆ. ಈ ಪಾಸಿಟಿವಿಟಿ ದರದ ಆಧಾರದ ಮೇಲೆ ನಿರ್ಭಂಧಗಳ ಸಡಿಲಿಕೆಯ ಆಧಾರ ಮೇಲೆ, ಶೇ.5ಕ್ಕಿಂತ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಸೇರಿದಂತೆ ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ, ಈ ಕೆಳಕಂಡಂತೆ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಎಸಿ ಚಾಲನೆಗೊಳಿಸದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಮಧ್ಯಪಾನ ಹೊರತುಪಡಿಸಿ ಸಂಜೆ 5 ಗಂಟೆಯವರೆಗೆ ಶೇ.50ರಷ್ಟು ಜನರನ್ನು ಒಳಗೊಂಡು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ. ಬಸ್ ಮತ್ತು ಮೆಟ್ರೋಗೆ ಶೇ.50ರಷ್ಟು ಜನರೊಂದಿಗೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಾಡ್ಜ್, ರೆಸಾರ್ಟ್ ಶೇ.50ರಷ್ಟು ಜನರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಜಿಮ್ ಗಳಲ್ಲಿ ಹವಾನಿಯಂತ್ರಣ ಇಲ್ಲದೇ ಅವಕಾಶ ನೀಡಲಾಗಿದೆ. ಶೇ.5ಕ್ಕಿಂತ ಹೆಚ್ಚು ಇರುವಂತ 13 ಜಿಲ್ಲೆಗಳಾದಂತ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಾವಣಗೆರೆ, ಧಾರವಾಡ, ಕೊಡಗು ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ದಿನಾಂಕ 11-06-2021ರ ಆದೇಶವೇ ಮುಂದುವರೆಯಲಿದೆ ಎಂದು ತಿಳಿಸಿದರು.
ನಿಯಮಗಳ ಸಂಕ್ಷಿಪ್ತ ರೂಪ
- ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳು ಮಾತ್ರವಲ್ಲದೇ ಎಲ್ಲಾ ಬಗೆಯ ಅಂಗಡಿಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ.
- ಬಸ್, ಮೆಟ್ರೋ ಓಡಾಟಕ್ಕೆ ಅನುಮತಿ: ಬಸ್ ಮತ್ತು ಮೆಟ್ರೋ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕೆಂದು ಸೂಚನೆ
- ಹೋಟೆಲ್ ರೆಸ್ಟೊರೆಂಟ್ಗಳಲ್ಲಿ ಸಂಜೆ 5ರವರೆಗೂ ತೆರೆದಿರಲು ಅನುಮತಿ – ಶೇ 50 ಸಾಮರ್ಥ್ಯದೊಂದಿಗೆ ಎಸಿ ಹಾಕದೇ ಹೋಟೆಲ್, ಕ್ಲಬ್ಸ್, ರೆಸ್ಟೋರೆಂಟ್ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತು ತಿನ್ನಲು ಸಂಜೆ 5 ಗಂಟೆವರೆಗೆ ಅನುಮತಿ
- ವೀಕೆಂಡ್, ನೈಟ್ ಕರ್ಫ್ಯೂ ಮುಂದುವರಿಕೆ
- ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ 50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ
- ದೇವಸ್ಥಾನಗಳಿಗೆ ಅವಕಾಶ ಇಲ್ಲ
ಶೇ.10ಕ್ಕಿಂತ ಹೆಚ್ಚಿರುವಂತ ಮೈಸೂರು ಜಿಲ್ಲೆಯಲ್ಲಿ ಈಗ ಇರುವಂತ ನಿಬಂಧನೆಗಳು ಯಥಾಸ್ಥಿತಿ ಮುಂದುವರೆಯಲಿದೆ. ರಾಜ್ಯಾಧ್ಯಂತ ನೈಟ್ ಕರ್ಪ್ಯೂ, ವಾರಾಂತ್ಯ ಕರ್ಪ್ಯೂ ಹಾಗೆಯೇ ಮುಂದುವರೆಯಲಿದೆ. ಬಸ್ ಸಂಚಾರ ಶೇ.50ರಷ್ಟು ಪ್ರಯಾಣಿಕರಿಗೆ ಮಿತಿಗೊಳಿಸಿ, ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಈಜುಕೊಳ, ಸಭೆ ಸಮಾರಂಭ, ಪೂಜಾ ಸ್ಥಳ, ಶಾಫಿಂಗ್ ಮಾಲ್, ಅಮ್ಯೂಸ್ ಮೆಂಟ್ ಪಾರ್ಕ್, ಪಬ್ ತೆರೆಯೋದಕ್ಕೆ ನಿರ್ಬಂಧಿಸಲಾಗಿದೆ. ಈ ಆದೇಶವು ಜುಲೈ.5ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೆ ವಾರಾಂತ್ಯ ಹಾಗೂ ನೈಟ್ ಕರ್ಪ್ಯೂ ಮುಂದುವರೆಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.