ಉಡುಪಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಹ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕಂದಾಯ ಸಚಿವ ಆರ್.ಅಶೋಕ ಅವರು, ಮಳೆ ಸಂಬಂಧಿತ ಯಾವುದೇ ತೊಂದರೆಗಳಿಂದ ತಪ್ಪಿಸಲು ಮತ್ತು ಪರಿಹಾರ ಕಾರ್ಯಗಳಿಗಾಗಿ 11 ಜಿಲ್ಲೆಗಳಿಗೆ ಹೆಚ್ಚುವರಿ ತಲಾ 5 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದರು.
“ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಹಾಸನ, ಮೈಸೂರು, ಚಾಮರಾಜನಗರ, ಧಾರವಾಡ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನೈಸರ್ಗಿಕ ವಿಪತ್ತು ನಿಧಿಯಡಿ ತಲಾ 5 ಕೋಟಿ ರೂ. ಸಿಗಲಿದೆ ಎಂದು ಸಚಿವರು ತಿಳಿಸಿದರು.
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸಲು ಕರಾವಳಿಗೆ ಸಚಿವ ಅಶೋಕ್ ಭೇಟಿ ನೀಡಿದ ಸಂದರ್ಭ, ಈ ಸಭೆಯಲ್ಲಿ ಪಾಲ್ಗೊಂಡರು.
ಕರಾವಳಿ ಜಿಲ್ಲೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮತ್ತು ಮಳೆಗೆ ಸಂಬಂಧಿಸಿದ ಯಾವುದೇ ಅಪಘಾತಗಳನ್ನು ತಪ್ಪಿಸಲು ಪರಿಹಾರಗಳನ್ನು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರಿಗೆ ನಿರ್ದೇಶನ ನೀಡಿದ್ದರು.
ಪ್ರವಾಹದ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡುವ ದೋಣಿಗಳಂತಹ ಉಪಕರಣಗಳನ್ನು ಖರೀದಿಸಲು, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ 20 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಅಶೋಕ್ ಮಾಹಿತಿ ನೀಡಿದರು.
“ತಗ್ಗು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತು ನದಿ ತೀರಗಳಲ್ಲಿ ವಾಸಿಸುವವರನ್ನು ರಕ್ಷಣಾ ಶಿಬಿರಗಳಿಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ” ಎಂದು ಇದೇ ವೇಳೆ ಅವರು ಹೇಳಿದರು.