ಬ್ರಿಟಿಷ್ ದೌರ್ಜನ್ಯದ ವಿರುದ್ಧ ಮೊದಲ ಬಾಂಬ್ ಎಸೆದ 18 ರ ತರುಣ

1
388
Tap to know MORE!

ಸ್ವಾತಂತ್ರ್ಯ ಹೋರಾಟ ಎಂಬ ಮಹಾಯಜ್ಞದಲ್ಲಿ ಅದೆಷ್ಟೋ ದೇಶಭಕ್ತ ತರುಣರು ತಮ್ಮನ್ನು ಸಮಿದೆಯಂತೆ ದೇಶಕ್ಕಾಗಿ ಅರ್ಪಿಸಿಕೊಂಡಿದ್ದಾರೆ. ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ವಿರುದ್ದ ಹೋರಾಡಿ ಗಲ್ಲಿಗೇರಿದ ಭಾರತದ 2ನೇ ಕಿರಿಯ ಕ್ರಾಂತಿಕಾರಿಗಳಲ್ಲಿ ಶಹೀದ್ ಖುದಿರಾಮ್ ಬೋಸ್ ಒಬ್ಬ‌ರು.

1889 ರ ಡಿಸೆಂಬರ್ 3ರಂದು ಬಂಗಾಳದ ಮದನಿಪುರ ಜಿಲ್ಲೆಯ ಕೇಶಪುರದ ಮಹೋಬಾನಿ ಎಂಬ ಸಣ್ಣ ಹಳ್ಳಿಯಲ್ಲಿ ಖುದಿರಾಮ್ ಬೋಸ್ ಜನಿಸಿದರು. ಇವರ ತಂದೆ ತ್ರೈಲೋಕನಾಥ ಬೋಸ್ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತಾಯಿ ಲಕ್ಷ್ಮಿಪ್ರಿಯದೇವಿ ಮಹಾನ್ ದೇಶಭಕ್ತೆ. ಖುದಿರಾಮ್ 6 ವರ್ಷದವರಾಗಿದ್ದಾಗಲೇ ಹೆತ್ತವರನ್ನು ಕಳೆದುಕೊಂಡು ಅಕ್ಕ ಅನುರೂಪದೇವಿಯ ಆಶ್ರಯದಲ್ಲಿ ಬೆಳೆಯುತ್ತಾರೆ. ಖುದಿರಾಮ್ಗೆ ವಿದ್ಯೆ ಹತ್ತಲಿಲ್ಲ, ಹಾಗೆಂದು ಅವರೇನೂ ದಡ್ಡರಾಗಿರಲಿಲ್ಲ. ಸ್ವತಂತ್ರ ದೇಶದ ಕನಸು ಸಣ್ಣವಯಸ್ಸಿನಲ್ಲೇ ಅವರು ಕ್ರಾಂತಿರಂಗಕ್ಕೆ ಇಳಿಯುವಂತೆ ಮಾಡಿತು.

ಇದನ್ನೂ ಓದಿ : ಆಂಗ್ಲರ ವಿರುದ್ಧ ಅಬ್ಬರಿಸಿ, ಸ್ವಾತಂತ್ರ್ಯದ ಕಹಳೆ ಊದಿದ ಮಂಗಲ್ ಪಾಂಡೆ

ಬಂಗಾಳದ ಮೇದಿನಿಪುರದಲ್ಲಿ 1906ರ ಫೆಬ್ರವರಿ ತಿಂಗಳಲ್ಲಿ ಬ್ರಿಟಿಷರು ತಮ್ಮ ಕ್ರೌರ್ಯವನ್ನು ಮರೆಮಾಚಿ ಭಾರತೀಯರನ್ನು ಓಲೈಸಲೆಂದೇ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಇದರ ವಿರುದ್ಧ ಖುದಿರಾಮ್ ಕರಪತ್ರಗಳನ್ನು ಹಂಚಿ ಬ್ರಿಟಿಷರ ನೈಜಮುಖ ಬಯಲುಮಾಡುವ ಪ್ರಯತ್ನ ಮಾಡಿದರು. ಪೋಲಿಸರು ಖುದಿರಾಮ್ನನ್ನು ಬಂಧಿಸಲು ಮುಂದಾಗುತ್ತಾರೆ. ʼವಾರೆಂಟ್ ಇಲ್ಲದೆ ನನ್ನನ್ನು ಮೈಮುಟ್ಟಿದರೆ ಜೋಕೆ’ ಎಂದು ಅಬ್ಬರಿಸಿದ ಆತ ಪೊಲೀಸ್ ಅಧಿಕಾರಿಯ ಮೂಗಿಗೆ ಬಲವಾಗಿ ಹೊಡೆಯುತ್ತಾರೆ. ಬ್ರಿಟಿಷರ ವಿರುದ್ಧ ಕ್ರಾಂತಿಸಮರವೇ ಸರಿ ಎಂದು ಬಲವಾಗಿ ನಂಬಿದ್ದರು ಖುದಿರಾಮ್.

ಬಂಗಾಳದಲ್ಲಿ ‘ವಂದೇ ಮಾತರಂ’ ಪತ್ರಿಕೆಯ ಅಬ್ಬರ ಬ್ರಿಟಿಷರ ನಿದ್ದೆಗೆಡಿಸಿತ್ತು. ಹೀಗಾಗಿ ಕಲ್ಕತ್ತಾದ ಲಾಲ್ ಬಜಾರ್ ನ್ಯಾಯಾಲಯ ಪತ್ರಿಕೆಯ ಮೇಲೆ ರಾಜದ್ರೋಹದ ಆರೋಪ ಹೊರಿಸಿತು. ಬ್ರಿಟಿಷ್ ಸರ್ಕಾರ ‘ವಂದೇ ಮಾತರಂ’ ಘೋಷಣೆ ಕೂಗಿದವರನ್ನು ಬಂಧಿಸಿ ಭಾರತೀಯರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿತ್ತು. ಇದೇ ಸಮಯದಲ್ಲಿ ನ್ಯಾಯಾಲಯದ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಬ್ರಿಟಿಷ್ ಅಧಿಕಾರಿಯೊಬ್ಬ ಲಾಠಿ ಬೀಸುತ್ತಾನೆ. ಇದರಿಂದ ಕೋಪಗೊಂಡ ಸುಶೀಲ್ ಕುಮಾರ್ ಎಂಬ ಯುವಕ ಪೋಲಿಸರ ಲಾಠಿ ಕಸಿದುಕೊಂಡು ತಿರುಗಿ ಅವರಿಗೇ ಹೊಡೆಯುತ್ತಾನೆ. ಆತನನ್ನು ಬಂಧಿಸಿದ ಪೋಲಿಸರು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ. ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಚಿತ್ರಹಿಂಸೆ ನೀಡುತ್ತಾರೆ.
ಇದನ್ನು ಗಮನಿಸಿದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡ್ನ ಹತ್ಯೆಗೆ ಸಂಚು ರೂಪಿಸುತ್ತಾರೆ. ಈ ವಿಚಾರ ತಿಳಿದ ಬ್ರಿಟಿಷ್ ಸರ್ಕಾರ ಅವನನ್ನು ಮುಜಾಫರ್ ನಗರಕ್ಕೆ ವರ್ಗಾಯಿಸುತ್ತಾರೆ. ಆದರೂ ಬುದ್ದಿ ಕಲಿಯದ ಕಿಂಗ್ಸ್ ಫೋರ್ಡ್, ಭಾರತೀಯರ ವಿರುದ್ಧ ಅಮಾನುಷ ತೀರ್ಪು ನೀಡುತ್ತಿರುತ್ತಾನೆ. ಹೇಗಾದರು ಇವನನ್ನು ಹತ್ಯೆ ಮಾಡಲೇಬೇಕೆಂದು ನಿರ್ಧರಿಸಿದ ಕ್ರಾಂತಿಕಾರಿಗಳು ಈ ಕೆಲಸವನ್ನು ಖುದಿರಾಮ್ ಮತ್ತು ಪ್ರಫುಲ್ಲಾ ಚಾಕಿಗೆ ವಹಿಸಿದರು.

ಅದು 1908 ಎಪ್ರೀಲ್ 30ರ ರಾತ್ರಿಯ ಸಮಯ. ಖುದಿರಾಮ್ ಮತ್ತು ಪ್ರಫುಲ್ಲರಿಬ್ಬರೂ ಮುಜಾಫರ್ ನಗರದ ಯುರೋಪಿಯನ್ ಕ್ಲಬ್ನಲ್ಲಿ ಬಾಂಬ್ ಮತ್ತು ರಿವಾಲ್ವರ್ ಹಿಡಿದುಕೊಂಡು ಕಾಯುತ್ತಿರುತ್ತಾರೆ. ಕಿಂಗ್ಸ್ ಫೋರ್ಡ್ನ ಕುದುರೆಗಾಡಿ ಬರುತ್ತಿದ್ದಂತೆ ಖುದಿರಾಮ್ ಕೈಯಲ್ಲಿದ್ದ ಬಾಂಬ್ ಎಸೆಯುತ್ತಾರೆ. ಅದು ಬ್ರಿಟಿಷರ ವಿರುದ್ಧ ಭಾರತೀಯನೊಬ್ಬ ಎಸೆದ ಮೊದಲ ಬಾಂಬ್ ಆಗಿತ್ತು. ಬಾಂಬ್ ಸಿಡಿಯುತ್ತಿದ್ದಂತೆ ಗಾಡಿ ಛಿದ್ರವಾಗಿ ಹೋಗಿತ್ತು. ಖುದಿರಾಮ್ ಮತ್ತು ಪ್ರಫುಲ್ಲರು ಒಂದೊಂದು ದಿಕ್ಕಿಗೆ ಓಡುತ್ತಾರೆ ಆ ದಿನ ಕಿಂಗ್ಸ್ ಫೋರ್ಡ್ನ ಅದೃಷ್ಟ ಚೆನ್ನಾಗಿತ್ತು. ಆ ಗಾಡಿಯಲ್ಲಿ ಅವನಿರಲ್ಲಿಲ್ಲ, ಬದಲಾಗಿ ಆತನ ಸಂಬಂಧಿ ಮಹಿಳೆಯರಿಬ್ಬರು ಸಾವನಪ್ಪಿದರು.

ಮುಜಾಫರ್ಪುರದಿಂದ 25 ಮೈಲುಗಳಾಚೆ ಜನರ ನಂಬಿಕೆದ್ರೋಹದ ಪರಿಣಾಮವಾಗಿ ಖುದಿರಾಮ್ ಬಂಧಿತನಾದರು. ಇತ್ತ ಪ್ರಫುಲ್ಲಾ ಚಾಕಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ ತನ್ನ ರಿವಾಲ್ವರ್ನಿಂದ ಗುಂಡು ಹೊಡೆದುಕೊಂಡು ಅಮರನಾದ. ಬ್ರಿಟಿಷ್ ನ್ಯಾಯಾಲಯದಲ್ಲಿ ವಿಚಾರಣೆಯ ನಾಟಕ ನಡೆಸಿ ಕೊನೆಯ ಮಾತೂ ಆಡಲು ಬಿಡದೆ ಖುದಿರಾಮ್ಗೆ ಮರಣದಂಡನೆ ವಿಧಿಸಿತು. 1908ರ ಆಗಸ್ಟ್ 11ರಂದು ಅವರನ್ನು ಗಲ್ಲಿಗೇರಿಸಲಾಯಿತು.

ಗಲ್ಲಿಗೇರಿಸುವ ಸಮಯದಲ್ಲಿ ಖುದಿರಾಮ್ ಗೆ ಕೇವಲ 18 ವರ್ಷ ವಯಸ್ಸು. ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಮಾಡಿದ ಹಲವು ಅನ್ಯಾಯಗಳಲ್ಲಿ ಇದೂ ಒಂದು. ಭಾರತಮಾತೆಯ ಕಿರಿಯ ಪುತ್ರನೊಬ್ಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಮೂಲಕ ಜನರಲ್ಲಿ ದೇಶ ಪ್ರೇಮ ಹುಟ್ಟುಹಾಕಿದ್ದ.

ಸುರೇಶ್‌ರಾಜ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

1 COMMENT

LEAVE A REPLY

Please enter your comment!
Please enter your name here