ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಹಾಡಿದ್ದ ಕೆಚ್ಚೆದೆಯ ವೀರ ಮಂಗಲ್ ಪಾಂಡೆ. ನೆಲದ ನಂಬಿಕೆಗೆ ಧಕ್ಕೆಯಾದಾಗ ತಾನು ಕರ್ತವ್ಯದಲ್ಲಿದ್ದ ಬ್ರಿಟಿಷ್ ಸೇನೆಯ ವಿರುದ್ದವೇ ಏಕಾಂಗಿಯಾಗಿ ಹೋರಾಡಲು ಸಿದ್ಧನಾಗಿದ್ದ…
ದೇಶದಲ್ಲಿ ಕ್ರಾಂತಿಯ ಕಿಡಿ ಹಚ್ಚಿದ ಮಂಗಲ್ ಪಾಂಡೆ ಹುಟ್ಟಿದ್ದು ಜುಲೈ 19, 1827ರಲ್ಲಿ. ಈಗಿನ ಉತ್ತರ ಪ್ರದೇಶದ ಬಾಲ್ಲಿಯಾ ಜಿಲ್ಲೆಯ ನಾಗ್ವ ಎಂಬ ಹಳ್ಳಿಯಲ್ಲಿ. ದಿವಾಕರ್, ಅಬೈರಾಣಿ ಪಾಂಡೆ ದಂಪತಿಯ ಮಗನಾಗಿ ಜನಿಸಿದ ಮಂಗಲ್ ಪಾಂಡೆ, 1849ರಲ್ಲಿ ಬೆಂಗಾಲ್ ನೇಟಿವ್ ಇನ್ಫೆಂಟ್ರಿಯ 34 ನೇ ರೆಜಿಮೆಂಟ್ ಗೆ ಸಿಪಾಯಿಯಾಗಿ ಸೇರಿದರು.
ಇದನ್ನೂ ಓದಿ : ಶಾಸ್ತ್ರ ಓದಿ, ಆಂಗ್ಲರ ವಿರುದ್ಧ ಶಸ್ತ್ರ ಹಿಡಿದ ಫಡ್ಕೆ!
ಅದು 1857 ರ ಮಾರ್ಚ್ ತಿಂಗಳು. ಕಂಪೆನಿ ಸರ್ಕಾರ ಭಾರತೀಯ ಸಿಪಾಯಿಗಳಿಗೆ ಹೊಸ ಎನ್ಫೀಲ್ಡ್ ರೈಫಲನ್ನು ಪರಿಚಯಿಸಿತು. ಇದಕ್ಕೆ ಬಳಸುತ್ತಿದ್ದ ಕಡತೂಸುಗಳನ್ನು ಬಾಯಲ್ಲಿ ಕಚ್ಚಿ ಬಳಸಬೇಕಾಗಿತ್ತು. ಈ ಕಡತೂಸುಗಳಿಗೆ ದನದ ಮತ್ತು ಹಂದಿಯ ಕೊಬ್ಬನ್ನು ಸವರಿರುವ ವಿಚಾರ ಇಡೀ ರೆಜಿಮೆಂಟ್ಗೆ ವ್ಯಾಪಕವಾಗಿ ಹರಡಿತು. ಹಿಂದೂಗಳ ಪಾಲಿಗೆ ದನದ ಕೊಬ್ಬು ನಿಷಿದ್ಧ, ಮುಸಲ್ಮಾನರ ಪಾಲಿಗೆ ಹಂದಿಯ ಕೊಬ್ಬು ನಿಷಿದ್ಧ. ಇವೆರಡನ್ನೂ ಬಳಸಿ ಏಕಕಾಲಕ್ಕೆ ಎರಡೂ ಧರ್ಮದವರನ್ನು ಧರ್ಮಭ್ರಷ್ಟಗೊಳಿಸಿ ನಿಶ್ಯಸ್ತ್ರೀಕರಣಗೊಳಿಸುವುದು ಬ್ರಿಟಿಷರ ಹುನ್ನಾರ.
ಈ ಕುತಂತ್ರ ತಿಳಿಯುತ್ತಿದ್ದಂತೇ ಸೈನಿಕರು ಕುಗ್ಗಿಹೋದರು. ಇಷ್ಟೂ ವರ್ಷ ಬ್ರಿಟಿಷರಿಗೆ ನಿಷ್ಠರಾಗಿ ತಮ್ಮ ಬಂಧು-ಬಾಂಧವರ ಮೇಲೆಯೇ ಗುಂಡು ಹಾರಿಸಿದ್ದ ಸೈನಿಕರು ಈಗ ಮಾತ್ರ ತಿರುಗಿಬಿದ್ದರು. ‘ಪ್ರಾಣ ಕೊಟ್ಟೇವು ಆದರೆ ಕಡತೂಸು ಮುಟ್ಟೇವುʼ ಎನ್ನುವ ಘೋಷಣೆ ರೆಜಿಮೆಂಟ್ನಲ್ಲಿ ಮೊಳಗಿತು. ಭಾರತೀಯ ಸೈನಿಕರೆಲ್ಲಾ ಚರ್ಚಿಸಿ ಇಡೀ ದೇಶ ಒಂದೇ ಬಾರಿ ಸಿಡಿದೇಳಬೇಕು. ಅಲ್ಲಿಯವರೆಗೂ ತಮಗಾಗುವ ಅವಮಾನ ಸಹಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತು. ಆದರೇ ಮಂಗಲ್ ಪಾಂಡೆಯ ವಿಚಾರವೇ ಬೇರೆ. ‘ದೇಶಕ್ಕಾಗಿ ಹುತಾತ್ಮನಾಗುವವನಿಗೆ ಸೋಲು ಗೆಲುವುಗಳ ಚಿಂತೆಯಿರಬಾರದು. ಅವುಗಳನ್ನೇ ಯೋಚಿಸುತ್ತಾ ಕೂರುವವನು ವೀರನಲ್ಲ ಅವನೊಬ್ಬ ಸಮಯಸಾಧಕ’, ಹೀಗೆಂದವನೇ ಚರ್ಚೆಯಿಂದ ಹೊರನಡೆದ.
ಮರುದಿನ ಬೆಳಿಗ್ಗೆ ಎದ್ದವನೇ ಮೈದಾನದ ಕಡೆಗೆ ಓಡಿದ. ಬ್ರಿಟಿಷರ ವಿರುದ್ದ ರೋಷಾವೇಷದಿಂದ ಘೋಷಣೆ ಕೂಗುತ್ತಾ ಉಳಿದ ಸೈನಿಕರನ್ನು ಹುರಿದುಂಬಿಸಲಾರಂಭಿಸಿದ .ಇದನ್ನು ಕಂಡ ಮೇಜರ್ ಸರ್ಜೆಂಟ್ ಹ್ಯೂಸನ್ ‘ಅರೆಸ್ಟ್ ಪಾಂಡೆ’ ಎಂದು ಆದೇಶಿಸಿದ. ಆದರೆ ಈ ಬಾರಿ ಯಾರೂ ಮುಂದೆ ಬರಲಿಲ್ಲ. ಬದಲಾಗಿ ಪಾಂಡೆಯೇ ಹ್ಯೂಸನ್ಗೆ ಹತ್ತಿರದಿಂದಲೇ ಗುಂಡು ಹಾರಿಸಿದ್ದ. ಭಾರತೀಯರ ರಕ್ತಕ್ಕಾಗಿ ಹಪಹಪಿಸಿದ್ದ ಆಂಗ್ಲ ಅಧಿಕಾರಿ, ಈಗ ಭಾರತೀಯ ಸಿಪಾಯಿಯ ಗುಂಡಿಗೆ ಸಿಕ್ಕಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಅದೇ ವೇಳೆಗೆ ಅಲ್ಲಿಗೆ ಬಂದ ಲೆಫ್ಟಿನೆಂಟ್ ಬಾಗ್ ತನ್ನ ಪಿಸ್ತೂಲ್ನಿಂದ ಪಾಂಡೆಯ ಕಡೆ ಗುರಿಯಿಟ್ಟ. ಗುರಿ ತಪ್ಪಿತು. ಅಷ್ಟರಲ್ಲಿ ಪಾಂಡೆ ನೆಗೆದು ಬಾಗ್ನ ಎದೆಯ ಮೇಲೆ ಯಮನಂತೆ ಕೂತಿದ್ದ. ಆ ಅಧಿಕಾರಿಗೆ ಆ ಕ್ಷಣಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಕರ್ನಲ್ ವೀಲರ್, ಪಾಂಡೆಯನ್ನು ಬಂಧಿಸುವಂತೆ ಆದೇಶ ನೀಡಿದ. ಅವನಿಗೆ ಪಾಂಡೆಗಿದ್ದ ಬೆಂಬಲದ ಅರಿವೇ ಇರಲ್ಲಿಲ್ಲ. ಅವನ ಆದೇಶ ಧಿಕ್ಕರಿಸಿ ಭಾರತೀಯ ಸೈನಿಕರು, ‘ಪವಿತ್ರಾತ್ಮನಾದ ಈ ಬ್ರಾಹ್ಮಣನನ್ನು ನಾವು ಬಂಧಿಸಲಾರೆವುʼ ಎಂದುಬಿಟ್ಟರು. ವೀಲರ್ ಓಡಿಹೋದ. ಭಾರತಮಾತೆಯ ದಾಸ್ಯ ವಿಮೋಚನೆಯ ಮೊದಲ ಗೆಲುವಿನಲ್ಲಿ ಪಾಂಡೆ ಕುಣಿಯತೊಡಗಿದ. ತನ್ನ ಗೆಳೆಯರನ್ನೆಲ್ಲ ಸೇರಿಸಿ ಮೈದಾನದ ತುಂಬೆಲ್ಲಾ ಓಡಾಡಿದ.
ಹೆದರಿ ಓಡಿದ್ದ ವೀಲರ್ ಬ್ರಿಟಿಷ್ ಸೇನೆಯನ್ನು ಕಟ್ಟಿಕೊಂಡು ಸ್ಥಳಕ್ಕೆ ಧಾವಿಸಿದ್ದ. ಸ್ವಾತಂತ್ರ್ಯದ ರುಚಿ ಅನುಭವಿಸಿದ್ದ ಪಾಂಡೆಗೆ ಮತ್ತೆ ಬ್ರಿಟಿಷರ ದಾಸನಾಗಲು ಇಷ್ಟವಿರಲಿಲ್ಲ. ತನ್ನ ಕೋವಿಯನ್ನು ನೆಲದ ಮೇಲೆ ನಿಲ್ಲಿಸಿ ನಳಿಕೆಯ ತುದಿಗೆ ತನ್ನ ಎದೆಯನ್ನು ಒಡ್ಡಿದ. ಇನ್ನೇನು ಬಿಳಿಯರು ಬಂಧಿಸುತ್ತಾರೆ ಅನ್ನುವಾಗಲೇ ಹೆಬ್ಬೆರಳಿನಿಂದ ಟ್ರಿಗರ್ ಒತ್ತಿದ. ಗುಂಡು ಪಾಂಡೆಯ ಎದೆ ಸೀಳಿತು. ಅಂಗಾತ ನೆಲದ ಮೇಲೆ ಬಿದ್ದ ಪಾಂಡೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಹಗಲು ರಾತ್ರಿ ಚಿಕಿತ್ಸೆ ನೀಡಿ ಪಾಂಡೆಯನ್ನು ಉಳಿಸಿದರು. ಆತನನ್ನು ಉಳಿಸಿದ್ದು ಆತನ ಮೇಲಿನ ಕರುಣೆಯಿಂದಲ್ಲ, ಬದಲಾಗಿ ಆತನ ಸಹವರ್ತಿಗಳ ಹೆಸರು ತಿಳಿದು ಅವರನ್ನೂ ನೇಣಿಗೇರಿಸಿ ಕೊಲ್ಲಲು!
ಪೋಲಿಸರು ಪಾಂಡೆಯನ್ನು ಮನಬಂದಂತೆ ಹೊಡೆದರು. ಆದರೂ ಪಾಂಡೆ ಯಾರೊಬ್ಬನ ಹೆಸರನ್ನೂ ಹೇಳಲಿಲ್ಲ. ಪಾಂಡೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಆತನಿಗೆ ಮಾತನಾಡಲೂ ಅವಕಾಶ ಕೊಡದೆ ನೇರವಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು. 1857ರ ಎಪ್ರಿಲ್ 8ನೇ ತಾರೀಖಿಗೆ ನೇಣಿಗೆ ಹಾಕುವ ತೀರ್ಮಾನವಾಗಿತ್ತು. ಆದರೆ ಅಂದು ಯಾವೊಬ್ಬ ಕಟುಕನು ಪಾಂಡೆಯನ್ನು ನೇಣಿಗೇರಿಸಲು ಮುಂದೆ ಬರಲಿಲ್ಲ. ಅಷ್ಟರ ಮಟ್ಟಿಗೆ ಪಾಂಡೆ ಜನರ ಮನಸ್ಸಿನಲ್ಲಿ ನೆಲೆಸಿದ್ದ. ಬ್ರಿಟಿಷರು ಕಲ್ಕತ್ತಾದಿಂದ ಕಟುಕರನ್ನು ಕರೆಸಿದರು. ಆ ದಿನವೇ ನೇಣಿಗೇರಿಸಬೇಕೆಂಬ ಹಠ ಅವರದ್ದು.
ಆ ದಿನ ಇಡೀ ಬ್ಯಾರಕ್ಪುರ ಅಲ್ಲಿ ನೆರೆದಿತ್ತು. ಪಾಂಡೆಯನ್ನು ಪೋಲಿಸರು ಕರೆತಂದರು. ಆ ವೇಳೆಯಲ್ಲೂ ಎದೆನಡುಗದ ವ್ಯಕ್ತಿತ್ವ ಅವನದ್ದು. ತನ್ನವರ ಹೆಸರು ಬಿಟ್ಟುಕೊಡಲ್ಲಿಲ್ಲ ಎಂಬ ಹೆಮ್ಮೆ ಅವನಲ್ಲಿತ್ತು. ಪಾಪಿಗಳು ಪಾಂಡೆಯ ತಲೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದರು. ನೇಣು ಕುಣಿಕೆಗೆ ಕೊರಳೊಡ್ಡಿದ ಪಾಂಡೆಯ ಜೀವ ಅರೆಕ್ಷಣದಲ್ಲಿ ಹೋಗಿತ್ತು. ಯುವಕರಲ್ಲಿ ಸ್ವಾತಂತ್ರ್ಯದ ಚಿಂತನೆಯ ಬೀಜ ಬಿತ್ತಿ ಪಾಂಡೆ ಮರೆಯಾಗಿದ್ದ. ದೇಶದ ನಂಬಿಕೆಗೆ ಧಕ್ಕೆ ಮಾಡಿದವರಿಗೆ ಭಾರತೀಯರು ಯಾವ ರೀತಿಯ ಶಾಸ್ತಿ ಮಾಡಬಲ್ಲರು ಎಂದು ಸಾರಿ ಹೇಳಿದ ಮಂಗಲ್ ಪಾಂಡೆ ಇತಿಹಾಸದ ಪುಟದಲ್ಲಿ ಅಮರರಾಗಿದ್ದಾರೆ.
ಸುರೇಶ್ ರಾಜ್
ವಿವಿ ಕಾಲೇಜು, ಮಂಗಳೂರು
[…] ಇದನ್ನೂ ಓದಿ : ಆಂಗ್ಲರ ವಿರುದ್ಧ ಅಬ್ಬರಿಸಿ, ಸ್ವಾತಂತ್ರ್ಯ… […]