ಆಗಸ್ಟ್ 11 ರ ರಾತ್ರಿ ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಇದ್ದ ಕೆಲವು ಸಂಘಟನೆಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಇಂದು ಯಾವುದೇ ನಿರ್ಧಾರ ಕೈಗೊಂಡಿಲ್ಲ.
“ನಾವು ವಿವರವಾದ ಚರ್ಚೆಯನ್ನು ನಡೆಸಿದ್ದೇವೆ. ಆದರೆ ಸದ್ಯ ಯಾವುದೇ ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಇದುವರೆಗೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲ” ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಧುಸ್ವಾಮಿ ಕ್ಯಾಬಿನೆಟ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದೇವೆ ಆದರೆ ಅದರ ಬಗ್ಗೆ ಯಾವುದೇ ನಿರ್ಧಾರವಿಲ್ಲ ಎಂದು ಮಧುಸ್ವಾಮಿ ಹೇಳಿದರು. “ವರದಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ಪಡೆದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಅವರು ಹೇಳಿದರು.
“ವರದಿಗಳನ್ನು ಪಡೆದ ನಂತರ, ಸರ್ಕಾರವು ಖಂಡಿತವಾಗಿಯೂ ಕ್ರಮ ತೆಗೆಯಲು ಪ್ರಾರಂಭಿಸುತ್ತದೆ. ಅಗತ್ಯವಿದ್ದರೆ, ಅಸ್ತಿತ್ವದಲ್ಲಿರುವ ಕಾನೂನನ್ನು ತಿದ್ದುಪಡಿ ಮಾಡಲು ಸಹ ನಾವು ಸಿದ್ಧ ”ಎಂದು ಕಾನೂನು ಸಚಿವರು ಹೇಳಿದರು.
ಆಗಸ್ಟ್ 11 ರ ರಾತ್ರಿ ನಡೆದ ಬೆಂಗಳೂರು ಗಲಭೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಪಾತ್ರ ಇದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಅದಲ್ಲದೆ, ಈ ಪಕ್ಷವನ್ನು ನಿಷೇಧಿಸುವ ಕೂಗು ಹೆಚ್ಚಾಗಿತ್ತು.