ಕೃತಕ ಆಮ್ಲಜನಕದ ಮೇಲೆ ಅವಲಂಬಿತವಾಗಿರುವ ಕೊರೊನಾ ರೋಗಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿದ ಎರಡು ಘಟನೆಗಳ ಬಳಿಕ ಎಚ್ಚೆತ್ತುಕೊಂಡ ಸರಕಾರ ಶೀಘ್ರವೇ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಸ್ಥಾವರಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್, ” ಆಮ್ಲಜನಕ ಘಟಕಗಳನ್ನು ರಾಜ್ಯದಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡುವ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆ” ಎಂದರು.
ಮಂಗಳವಾರ ಆಕ್ಸಿಜನ್ ಸಪ್ಲೈ ಕೊರತೆಯಾಗಿ ಕೊರೊನಾ ರೋಗಿಗಳನ್ನು ಬೇರೆ ಕಡೆ ಸ್ಥಳಾಂತರಿಸಿದ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಗೆ ಭೇಟಿ ನೀಡಿದ ಸಚಿವರು ಆಸ್ಪತ್ರೆಯ ಕುಂದು ಕೊರತೆಗಳನ್ನು ಆಲಿಸಿದರು. ರೋಗಿಗಳಿಗೆ ನೀಡುವ ಚಿಕಿತ್ಸೆಯ ಸೌಲಭ್ಯಗಳ ಕುರಿತು ವಿವರ ಪಡೆದರು.
ಆಕ್ಸಿಜನ್ ಬೇಡಿಕೆ ಹೆಚ್ಚಿರುವುದರಿಂದ ಆಸ್ಪತ್ರೆಗೆ ಅದನ್ನು ಭರಿಸುವಲ್ಲಿ ಸಮಸ್ಯೆಯಾಗಿದೆ. ಬೇಡಿಕೆ ಹೆಚ್ಚಾದ್ದರಿಂದ ಆಮ್ಲಜನಕದ ಬೆಲೆಯು ಕೂಡ ಹೆಚ್ಚಾಗಿದೆ. ಸರಕಾರ ಆಮ್ಲಜನಕದ ಬೆಲೆಯನ್ನು ನಿಯಂತ್ರಿಸುವುದರೊಂದಿಗೆ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು ಶೀಘ್ರವೇ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.