PM CARES ಫಂಡ್ ಮತ್ತು ಮಾಹಿತಿ ಹಕ್ಕು ಕಾಯ್ದೆ

0
240
Tap to know MORE!

ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗದಂತಹ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸುವ ಪ್ರಾಥಮಿಕ ಉದ್ದೇಶದಿಂದ “ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಹಾರ ನಿಧಿ” (PM CARES ಫಂಡ್) ಅನ್ನು ಮಾರ್ಚ್ 27, 2020 ರಂದು ಸ್ಥಾಪಿಸಲಾಯಿತು.

ಪಿಎಂ ಕೇರ್ಸ್ ಫಂಡ್ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿದೆ. ಯಾವುದೇ ವ್ಯಕ್ತಿಯು ಈ ನಿಧಿಗೆ ದೇಣಿಗೆಯನ್ನು ನೀಡಬಹುದು ಮತ್ತು ಆದಾಯ ತೆರಿಗೆ ನಿಯಮಗಳ ಪ್ರಕಾರ ಶೇ.100 ತೆರಿಗೆ ವಿನಾಯಿತಿ ಪಡೆಯಬಹುದು. ನೆನಪಿನಲ್ಲಿಡಬೇಕಾಡ ಅಂಶವೆಂದರೆ, 1948 ರಲ್ಲೇ ದೇಶದಲ್ಲಿ ಸ್ಥಾಪನೆಯಾದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಈಗಲೂ ಇದೆ!

PM CARES ಫಂಡ್‌ನ ಸಂಯೋಜನೆ: –

  1. ಪ್ರಧಾನಿ ಪಿಎಂ ಕೇರ್ಸ್ ಫಂಡ್‌ನ ಎಕ್ಸ್-ಆಫಿಸಿಯೊ ಅಧಿಕಾರಿ.
  2. ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಮಂತ್ರಿಗಳು ನಿಧಿಯ ಎಕ್ಸ್-ಆಫಿಸಿಯೊ ಟ್ರಸ್ಟಿಗಳು.
  3. ಸಂಶೋಧನೆ, ಆರೋಗ್ಯ, ವಿಜ್ಞಾನ, ಸಾಮಾಜಿಕ ಕಾರ್ಯ, ಕಾನೂನು, ಸಾರ್ವಜನಿಕ ಆಡಳಿತ, ಮತ್ತು ಲೋಕೋಪಕಾರ ಕ್ಷೇತ್ರಗಳಲ್ಲಿ ಪ್ರಖ್ಯಾತ ವ್ಯಕ್ತಿಗಳಾಗಿರುವ ಮೂವರನ್ನು ಟ್ರಸ್ಟಿಗಳಾಗಿ ನೇಮಕ ಮಾಡುವ ಅಧಿಕಾರ ಪ್ರಧಾನಿಗೆ ಇರುತ್ತದೆ.

ಫಂಡ್‌ನ ಉದ್ದೇಶಗಳು: –

  1. ದೇಶದಲ್ಲಿ ಯಾವುದೇ ರೀತಿಯ ನೈಸರ್ಗಿಕ ಅಥವಾ ಮಾನವ ವಿಪತ್ತು ಸಂಭವಿಸಿದಾಗ, ಜನರಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುವುದು ಈ ನೀ
    ನಿಧಿಯ ಮುಖ್ಯ ಉದ್ದೇಶವಾಗಿದೆ. ಅಗತ್ಯವಿದ್ದರೆ; ಆರೋಗ್ಯ ಅಥವಾ ಔಷಧ ಸೌಲಭ್ಯಗಳಂತಹ ಅಗತ್ಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಮತ್ತು ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಾಡಲಾಗುತ್ತದೆ.
  2. ಮಂಡಳಿಯ ಟ್ರಸ್ಟಿಗಳು ಅಗತ್ಯವೆಂದು ಭಾವಿಸಿದರೆ, ಪೀಡಿತ ಜನಸಂಖ್ಯೆಗೆ ಹಣಕಾಸಿನ ನೆರವು ಸಹ ಒದಗಿಸಬಹುದು.

ಪಿಎಂ ಕೇರ್ಸ್ ಫಂಡ್ ಮತ್ತು ಮಾಹಿತಿ ಹಕ್ಕು: –

ಸರ್ಕಾರವು ಮಾರ್ಚ್ ತಿಂಗಳಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿದ ಕೂಡಲೇ ಮತ್ತು ಈ ನಿಧಿಯಲ್ಲಿ ದೇಣಿಗೆ ನೀಡುವಂತೆ ಜನರಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳು ಹರಿದು ಬಂದಿದೆ.

ಆದರೆ ಈಗ ದಾನಿಗಳು ಈ ನಿಧಿಯಲ್ಲಿ ಎಷ್ಟು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದು ತಿಳಿಯಲು ಬಯಸುತ್ತಿದ್ದರೂ, ಆ ಮೊತ್ತವನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸುತ್ತಿದೆ.

indiaspend.com ವೆಬ್‌ಸೈಟ್ ಪ್ರಕಾರ, ಸ್ಥಾಪನೆಯಾದ ಕೇವಲ 52 ದಿನಗಳಲ್ಲಿ 9,677.9 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ನಿಧಿಯಲ್ಲಿ ಜಮಾ ಮಾಡಲಾಗಿದೆ. 13 ಮೇ 2020 ರಂದು, ಪ್ರಧಾನ ಮಂತ್ರಿಗಳ ಕಚೇರಿಯು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ PM CARES ನಿಂದ 3,100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಘೋಷಿಸಿತು. ಇದು ನಿಧಿಯಿಂದ ಮಾಡಿದ ಮೊದಲ ಖರ್ಚು. ಈ ಮೊತ್ತವು 2020 ರ ಮೇ 20 ರವರೆಗೆ ಸಂಗ್ರಹಿಸಿದ 9,677.9 ಕೋಟಿ ರೂ.ಗಳಲ್ಲಿ ಕೇವಲ 32% ಮಾತ್ರ.

21 ಏಪ್ರಿಲ್ 2020 ರಂದು ಗ್ರೇಟರ್ ನೋಯ್ಡಾ ನಿವಾಸಿ ಮತ್ತು ಪರಿಸರ ಕಾರ್ಯಕರ್ತ ವಿಕ್ರಂತ್ ತೊಗಡ್ ಅವರು ಪ್ರಧಾನಮಂತ್ರಿ ಕಚೇರಿಯಿಂದ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ 12 ಅಂಶಗಳಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಇಲ್ಲಿಯವರೆಗೆ ಈ ನಿಧಿಯಲ್ಲಿ ಎಷ್ಟು ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದು ವಿಕ್ರಾಂತ್ ಕೇಳಿದ್ದರು.

ಕೇಂದ್ರ ಸರ್ಕಾರವು ಪಿಎಂ ಕೇರ್ಸ್ ನಿಧಿಯ ಬಗ್ಗೆ ತುಂಬಾ ರಹಸ್ಯವನ್ನು ಕಾಪಾಡಿಕೊಳ್ಳುತ್ತಿದೆ. ಅದು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದೆ.

ವಿಕ್ರಾಂತ್ ರವರ ಅರ್ಜಿಗೆ 6 ದಿನಗಳಲ್ಲಿ ಉತ್ತರಿಸಿದ ಪ್ರಧಾನಮಂತ್ರಿ ಕಛೇರಿ, ಒಂದೇ ಆರ್‌ಟಿಐ ಅರ್ಜಿಯಲ್ಲಿ ಹಲವು ವಿಷಯಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ. ಅದು ಉತ್ತರಿಸಲು ಸಾಧ್ಯವಿಲ್ಲ ಎಂದಿದೆ. ಅದಲ್ಲದೆ, ಪ್ರತಿ ವಿಷಯಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು ಎಂದು ಕಛೇರಿಯು ಹೇಳಿದೆ. ಆದ್ದರಿಂದ, ಕೇಳಿದಂತಹ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದೆ‌

ಇದರ ಹೊರತಾಗಿ, 2005 ರ ಆರ್‌ಟಿಐ ಕಾಯ್ದೆಯಡಿ PM CARES ಫಂಡ್ ಒಂದು ಸಾರ್ವಜನಿಕ ಪ್ರಾಧಿಕಾರವಲ್ಲ. ಆದ್ದರಿಂದ ಇದರ ಬಗ್ಗೆ ಮಾಹಿತಿ ನೀಡುವುದೂ ಕಡ್ಡಾಯವಲ್ಲ ಎಂದು ಕಛೇರಿಯು ತನ್ನ ಉತ್ತರದಲ್ಲಿ ವಾದಿಸಿದೆ.

ಅದಲ್ಲದೆ, PM CARES ಫಂಡ್ ನ ಮೊತ್ತವನ್ನು NDRF ಖಾತೆಗಳಿಗೆ ವರ್ಗಾಯಿಸಲು ಕೋರಿದ ಅರ್ಜಿಯನ್ನೂ ಸರ್ಕಾರ ತಿರಸ್ಕರಿಸಿದೆ. ಒಂದೆರಡು ವಾರಗಳ ಹಿಂದೆ, ಆಡಿಟರ್ ಜನರಲ್ನಿಂದ ಪ್ರಮುಖ ವರದಿಗಳನ್ನು ಪರಿಶೀಲಿಸುವ, 2G ಸ್ಪೆಕ್ಟ್ರಮ್ ಹಗರಣದಂತಹ ಸಮಸ್ಯೆಗಳನ್ನೂ ಕೈಗೊಂಡಿದ್ದ ಸಾರ್ವಜನಿಕ ಖಾತೆಗಳ ಸಮಿತಿಯೂ ಈ ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾಯಿತು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ, ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದರೂ ಇದನ್ನು ಚರ್ಚಿಸಲಾಗುವುದಿಲ್ಲ ಎಂದಿದ್ದಾರೆ.

ಹೀಗಾಗಿ, ಮಾಹಿತಿ ಹಕ್ಕಿನ ಅಡಿಯಲ್ಲಿ ಪಿಎಂ ಕೇರ್ಸ್ ಫಂಡ್ ಬರುತ್ತಿಲ್ಲವಾದರೂ, ಫಂಡ್ ನ ಅಡಿಯಲ್ಲಿ ಎಷ್ಟು ಹಣವನ್ನು ಸ್ವೀಕರಿಸಲಾಗಿದೆ ಎಂದು ದೇಶಕ್ಕೆ ಹೇಳಲು ಸರ್ಕಾರ ಬಯಸುತ್ತಿಲ್ಲ ಎಂಬುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗಿದೆ.

ವಿಪರ್ಯಾಸವೆಂದರೆ, ದೇಶದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂಬ ಸರ್ಕಾರದ ಹಿಂದಿನ ಸಿದ್ಧಾಂತಕ್ಕೆ ಇದು ತದ್ವಿರುದ್ಧವಾಗಿದೆ!

ಇಂದುಧರ್ ಹಳೆಯಂಗಡಿ

ಸುದ್ದಿವಾಣಿ ನ್ಯೂಸ್ ಅಪ್ಡೇಟ್ಸ್ ಗಳನ್ನು ವಾಟ್ಸಾಪ್ ನಲ್ಲಿ ಪಡೆಯಿರಿ.

LEAVE A REPLY

Please enter your comment!
Please enter your name here